ಸೋಮವಾರ, ಮಾರ್ಚ್ 8, 2021
29 °C
ಹಿಮಾಚಲ ಪ್ರದೇಶ ಸಿಎಂ ಪುತ್ರಿ, ಸ್ನೇಹಿತರಿಗೆ ಹೊಸೂರು ಗ್ರಾಮಸ್ಥರ ನೆರವು

ಮಲಪ್ರಭಾ ಪ್ರವಾಹದಲ್ಲಿ ಸಿಲುಕಿದ ಹಿಮಾಚಲ ಪ್ರದೇಶ ಸಿಎಂ ಪುತ್ರಿಯಿದ್ದ ಬಸ್

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಕಾಲೇಜಿನ ಸ್ನೇಹಿತರೊಂದಿಗೆ ಬಾದಾಮಿಗೆ ಪ್ರವಾಸ ಹೊರಟಿದ್ದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಪುತ್ರಿ ಅವಂತಿಕಾ ಸೂದ್ ಶುಕ್ರವಾರ ಬೆಳಗಿನ ಜಾವ ಮಲಪ್ರಭೆಯ ಪ್ರವಾಹದ ನೀರಿನಲ್ಲಿ ಸಿಲುಕಿದ್ದರು.

ಉಡುಪಿ ಜಿಲ್ಲೆ ಮಣಿಪಾಲದಲ್ಲಿ ಆರ್ಕಿಟೆಕ್ಟ್ ವಿಷಯದಲ್ಲಿ ಅವಂತಿಕಾ ಎರಡನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದು, ತರಗತಿಯ 42 ಮಂದಿ ಸ್ನೇಹಿತರೊಂದಿಗೆ ಐಷಾರಾಮಿ ಬಸ್‌ನಲ್ಲಿ ಬೆಂಗಳೂರಿನಿಂದ ಬಾದಾಮಿ ವೀಕ್ಷಣೆಗೆ ಹೊರಟಿದ್ದರು. ಅವರಿದ್ದ ಬಸ್ ಬೆಳಗಿನ ಜಾವ 3.30ರ ವೇಳೆ ಬಾದಾಮಿ ಸಮೀಪದ ಹೊಸೂರು ಬಳಿ ಪ್ರವಾಹದ ನೀರಿನಲ್ಲಿ ಸಿಲುಕಿತ್ತು. ಬಸ್ ಅಲ್ಲಿಂದ ಹೊರಗೆ ತರಲು ಸಾಧ್ಯವಾಗದೇ ಎಲ್ಲರೂ ಒಂದು ಕಿ.ಮೀ ದೂರದ ಹೊಸೂರಿಗೆ ನಡೆದುಕೊಂಡು ಬಂದಿದ್ದರು. 

ಗ್ರಾಮಸ್ಥರಿಂದ ಆತಿಥ್ಯ: ವಿಷಯ ತಿಳಿದ ಹೊಸೂರು ಗ್ರಾಮಸ್ಥರು ವಿದ್ಯಾರ್ಥಿಗಳ ತಂಡಕ್ಕೆ ಅಲ್ಲಿನ ಸಮುದಾಯ ಭವನದಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಿದ್ದರು. ಮುಂಜಾನೆ ಎಲ್ಲರಿಗೂ ಉಪಾಹಾರಕ್ಕೆ ಉಪ್ಪಿಟ್ಟು ವ್ಯವಸ್ಥೆ ಮಾಡಿದ್ದರು. 

ಕಾಲೇಜಿನ ಆಡಳಿತ ಮಂಡಳಿ ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ. ಜಿಲ್ಲಾಧಿಕಾರಿ ಗ್ರಾಮಕ್ಕೆ ಪೊಲೀಸ್ ಸಿಬ್ಬಂದಿ ಕಳುಹಿಸಿಕೊಟ್ಟಿದ್ದರು. ವಿದ್ಯಾರ್ಥಿಗಳ ತಂಡ ಪ್ರವಾಸ ಮೊಟಕುಗೊಳಿಸಿದ ಕಾರಣ ವಾಯವ್ಯ ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆ ಮಾಡಿ ಗದಗ–ಹುಬ್ಬಳ್ಳಿ ಮಾರ್ಗವಾಗಿ ಮಧ್ಯಾಹ್ನ ಉಡುಪಿಗೆ ಕಳುಹಿಸಿಕೊಡಲಾಯಿತು.

‘ಎರಡು ದಿನಗಳ ಹಿಂದೆ ಮಣಿಪಾಲದಿಂದ ಬೆಂಗಳೂರಿಗೆ ಹೋಗಿ ಅಲ್ಲಿಂದ ಬಾದಾಮಿಗೆ ಹೊರಟಿದ್ದೆವು. ಕತ್ತಲೆ, ನೀರಿನ ನಡುವೆ ಸಿಲುಕಿದ್ದ ನಮಗೆ ಗ್ರಾಮಸ್ಥರು ನೆರವಾದರು‘ ಎಂದು ಮಂಗಳೂರಿನ ಸುಹಾಸ್ ಹತ್ವಾರ ಹೇಳಿದರು.

ನಮಗೆ ಸಹಾಯ ಮಾಡುವಿರಾ?

‘ನೀವು ಮಾಧ್ಯಮದವರು ನಮಗೊಂದು ಸಹಾಯ ಮಾಡುವಿರಾ, ಪ್ರವಾಹದಲ್ಲಿ ಸಿಲುಕಿರುವ ನಮ್ಮ ಬಸ್‌ನಲ್ಲಿ ಲ್ಯಾಪ್‌ಟಾಪ್, ಕ್ಯಾಮೆರಾ ಸೇರಿದಂತೆ ಬೆಲೆಬಾಳುವ ವಸ್ತುಗಳಿವೆ. ಅವುಗಳನ್ನು ಸುರಕ್ಷಿತವಾಗಿ ನಮಗೆ ತಲುಪಿಸಲು ವ್ಯವಸ್ಥೆ ಮಾಡುತ್ತೀರಾ‘ ಎಂದು ಅವಂತಿಕಾ ‘ಪ್ರಜಾವಾಣಿ’ಗೆ ವಿನಂತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು