ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಳಗಿ | ಬಿಸಿಲಿಗೆ ಬಸವಳಿದ ಜನ: ಅರವಟಿಗೆ ಸ್ಥಾಪನೆಗೆ ಒತ್ತಾಯ

ತಾಲ್ಲೂಕಿನಲ್ಲಿ 40-42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು; ನೀರಿಗೆ ಪರದಾಟ
ಕೆ.ಎಸ್.ಸೋಮನಕಟ್ಟಿ
Published 26 ಏಪ್ರಿಲ್ 2024, 8:15 IST
Last Updated 26 ಏಪ್ರಿಲ್ 2024, 8:15 IST
ಅಕ್ಷರ ಗಾತ್ರ

ಬೀಳಗಿ: ತಾಲ್ಲೂಕಿನಲ್ಲಿ ಗರಿಷ್ಠ 39ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ನಿಧಾನಕ್ಕೆ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ನೀರಿನ ಹಾಹಾಕಾರವೂ ಶುರುವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಬೇಸಿಗೆ ಬಿಸಿ ತುಸು ಹೆಚ್ಚೇ ತಟ್ಟಲಿದೆ. ತಾಲ್ಲೂಕಿನಾದ್ಯಂತ ಕೆಂಡದಂತಹ ಬಿಸಿಲು ಅನುಭವಕ್ಕೆ ಬರುತ್ತಿದ್ದು, ಜನ- ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿವೆ. ಆದರೆ ಬೀಳಗಿ ಪಟ್ಟಣದಲ್ಲಿ ಎಲ್ಲಿಯೂ ಕೂಡ ಕುಡಿಯುವ ನೀರಿನ ಅರವಟಿಗೆ ನಿರ್ಮಾಣ ಆಗದೇ ಇರುವುದು ದುರದೃಷ್ಟದ ಸಂಗತಿ ಎಂದೇ ಹೇಳಬಹುದು.

ಬಿಸಿಲಿನ ತಾಪದಿಂದಾಗಿ ಗಂಟೆಗೊಮ್ಮೆ ನೀರಿನ ದಾಹ ಉಂಟಾಗುತ್ತದೆ. ಜನರು ಕುಡಿಯುವ ನೀರಿನ ಬಾಟಲಿ ಖರೀದಿಸುತ್ತಿದ್ದಾರೆ. ಇಲ್ಲವೇ ಹೋಟೆಲ್‌ಗಳಿಗೆ ಹೋಗಬೇಕು. ಪಟ್ಟಣ ಪಂಚಾಯಿತಿ ನೀರಿನ ಅರವಟಿಗೆ ಅಥವಾ ಪರ್ಯಾಯ ವ್ಯವಸ್ಥೆ ಮಾಡದೆ ಇರುವುದರಿಂದ ಜನರು ಪರದಾಡುವಂತಾಗಿದೆ.  ಪಟ್ಟಣದ ಎಂಟ್ಹತ್ತು ಕಡೆ ಪ್ರಮುಖ ವೃತ್ತಗಳಿದ್ದು, ಅಲ್ಲಲ್ಲಿ ಅರವಟಿಗೆಗಳು ಸ್ಥಾಪನೆಯಾದರೆ ಜನರಿಗೆ ಅನುಕೂಲವಾಗಲಿದೆ ಎಂಬುದು ಜನರ ಅಭಿಪ್ರಾಯ.

ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಶಿವಾಜಿ ವೃತ್ತ, ಗಾಂಧೀಜಿ ವೃತ್ತ, ತಹಶೀಲ್ದಾರ್ ಆಫೀಸ್ , ಕನಕ ಸರ್ಕಲ್, ಕಾಯಿಪಲ್ಲೆ ಮಾರುಕಟ್ಟೆ, ಪೋಸ್ಟ್ ಆಫೀಸ್ ಎದುರು ಜನದಟ್ಟಣೆ ಇರುತ್ತದೆ. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಅರವಟಿಗೆ ಸ್ಥಾಪನೆಯಾದರೆ, ಪಟ್ಟಣಕ್ಕೆ ನಿತ್ಯ ಬರುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುತ್ತದೆ.

ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ತಾತ್ಕಾಲಿಕ ನೆರಳಿನ ಆಸರೆ ಮಾಡಿ ಕುಡಿಯುವ ನೀರಿನ ಅರವಟಿಗೆ ಸ್ಥಾಪಿಸಲು ಸ್ಥಳೀಯ ಪಟ್ಟಣ ಪಂಚಾಯ್ತಿ ಮುಂದಾಗಬೇಕು ಎಂಬುದು ಗ್ರಾಮೀಣ ಪ್ರದೇಶದ ಜನರ ಮನವಿ. ಗ್ರಾಮ ಆಡಳಿತದ ಪ್ರಮುಖ ಕೇಂದ್ರವಾಗಿರುವ ಗ್ರಾಮ ಪಂಚಾಯ್ತಿಗಳು ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯವಾಗಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಬೇಕು. ಪಶು ಪಕ್ಷಿಗಳಿಗೆ ನೀರುಣಿಸಲು ಮರದ ಕೆಳಗೆ ಬಟ್ಟಲು ನೇತು ಹಾಕಿ ನೀರು ಇಡಬೇಕು. ಸಾಧ್ಯವಾದರೆ ಒಂದಿಷ್ಟು ಆಹಾರ ಧಾನ್ಯ ಇಡಬೇಕು ಎಂಬುದು ಪರಿಸರ ಪ್ರೇಮಿಗಳ ಒತ್ತಾಯ.

ಬೇಸಿಗೆಯ ಹೊಸ್ತಿಲಲ್ಲೆ ತಾಪಮಾನ ಕನಿಷ್ಠ 25ರಿಂದ ಗರಿಷ್ಠ 38 ರ ವರೆಗೆ ದಾಖಲಾಗಿತ್ತು. ನಡು ಬೇಸಿಗೆಯಲ್ಲಿ ಈಗ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಪಟ್ಟಣಕ್ಕೆ ಬರುವ ಜನರಿಗೆ ಬಿಸಿಲಿನಿಂದ ವಿಪರೀತ ದಾಹ ಕಾಡಲಿದೆ. ಈ ವೇಳೆ ನೀರು ಕುಡಿಯುವುದು ಅವಶ್ಯ. ಇಲ್ಲವಾದರೆ ಆರೋಗ್ಯದಲ್ಲಿ ತೀವ್ರ ಏರುಪೇರುಗಳಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಸ್ಥಳೀಯಾಡಳಿತ ಹಾಗೂ ಸಂಘ- ಸಂಸ್ಥೆಗಳು ಆದಷ್ಟು ಬೇಗ ನೀರಿನ ಅರವಟಿಗೆಗಳನ್ನು ಆರಂಭಿಸಲಿ ಎನ್ನುವುದು ಸ್ಥಳೀಯರ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT