ಗುರುವಾರ , ನವೆಂಬರ್ 21, 2019
21 °C

ಗ್ರಾಮಗಳ ಸ್ಥಳಾಂತರಕ್ಕೆ ಬದ್ಧ: ಕಾರಜೋಳ

Published:
Updated:

ಬಾಗಲಕೋಟೆ: ‘ಐಹೊಳೆ, ಪಟ್ಟದಕಲ್ಲು ಸೇರಿದಂತೆ ಪದೇ ಪದೇ ಪ್ರವಾಹಕ್ಕೆ ತುತ್ತಾಗುವ ಜಿಲ್ಲೆಯ ಎಲ್ಲ ಗ್ರಾಮಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸರ್ಕಾರ ಸಿದ್ಧವಿದೆ‘ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಮಗಳನ್ನು ಸ್ಥಳಾಂತರಿಸಲು ಎತ್ತರದ ಸ್ಥಳದಲ್ಲಿ ಜಾಗ ಗುರುತಿಸಿ ಖರೀದಿ ಮಾಡಿ ಲೇಔಟ್ ಮಾಡಿಕೊಡುವ ಜವಾಬ್ದಾರಿ ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ಅದಕ್ಕೆ ಆಯಾ ಗ್ರಾಮಸ್ಥರು ಒಪ್ಪಿಗೆ ನೀಡಿ ಪಂಚಾಯ್ತಿಯಿಂದ ಠರಾವು ಮಾಡಿ ಜಿಲ್ಲಾಡಳಿತಕ್ಕೆ ಕಳುಹಿಸಿಕೊಟ್ಟರೆ ಪ್ರಕ್ರಿಯೆ ಆರಂಭಿಸಲಾಗುವುದು‘ ಎಂದರು.

ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಯಾವುದೇ ತಾರತಮ್ಯ ಆಗಿಲ್ಲ. ಬದಲಿಗೆ ಅಧಿಕಾರಿಗಳ ಕಣ್ತಪ್ಪಿನಿಂದ ಕೆಲವರ ಹೆಸರು ಉಳಿದಿವೆ. ಮರು ಸಮೀಕ್ಷೆ ವೇಳೆ ಅವುಗಳನ್ನು ಸೇರಿಸುವಂತೆ ಸೂಚನೆ ನೀಡಿರುವೆ ಎಂದು  ಹೇಳಿದರು.

‘ಪಕ್ಕದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್‌ ರೀತಿ ಇಲ್ಲಿಯೂ ಪಾದಯಾತ್ರೆ ಮಾಡಿದ ತಕ್ಷಣ ಅಧಿಕಾರಕ್ಕೆ ಬರಲಿದ್ದೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಮಾಡಲಿ ಬಿಡಿ‘ ಎಂದು ಪ್ರಶ್ನೆಯೊಂದಕ್ಕೆ ವ್ಯಂಗ್ಯವಾಡಿದರು.

ಪ್ರತಿಕ್ರಿಯಿಸಿ (+)