ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾದಾಮಿ: ಬೋಧನೆ ‘ಆದರ್ಶ’ದಲ್ಲಿ, ವಸತಿ ‘ಮೊರಾರ್ಜಿ’ಯಲ್ಲಿ

ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗಿಲ್ಲ ಸೂರು
Published 14 ಜೂನ್ 2024, 6:37 IST
Last Updated 14 ಜೂನ್ 2024, 6:37 IST
ಅಕ್ಷರ ಗಾತ್ರ

ಬಾದಾಮಿ: ತಾಲ್ಲೂಕಿನ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ಮಕ್ಕಳ ಬೋಧನೆ ತಾತ್ಕಾಲಿಕವಾಗಿ 9 ವರ್ಷಗಳಿಂದ ಚಿಕ್ಕಮುಚ್ಚಳಗುಡ್ಡ ಆದರ್ಶ ಶಾಲೆ ಕಟ್ಟಡದಲ್ಲಿ ನಡೆದಿದೆ. ವಸತಿ ಮತ್ತು ಊಟ ಮೊರಾರ್ಜಿ ವಸತಿ ನಿಲಯದಲ್ಲಿ ನಡೆಯುತ್ತಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಕರ್ನಾಟಕ ವಸತಿ ಶಿಕ್ಷಣ ಸಂಘದ ಆದೇಶದಂತೆ 2009-10 ನೇ ಸಾಲಿನಲ್ಲಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ (ಪರಿಶಿಷ್ಟ ವರ್ಗ) ಬಾದಾಮಿ ಪಟ್ಟಣದಲ್ಲಿ ಆರಂಭವಾಗಿ ಐದು ವರ್ಷ ಖಾಸಗಿ ಕಟ್ಟಡದಲ್ಲಿ ಬಾಡಿಗೆ ರೂಪದಲ್ಲಿ ನಡೆದಿದೆ.

6 ರಿಂದ 10ನೇ ತರಗತಿಯವರೆಗೆ ಬಾಲಕಿಯರು ಅಧ್ಯಯನ ಮಾಡುತ್ತಿದ್ದಾರೆ. ಮೂಲ ಸೌಕರ್ಯಗಳ ಕೊರತೆಯಿಂದ ಮತ್ತು ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಗದ ಕಾರಣ 2016 ರಲ್ಲಿ ಚಿಕ್ಕಮುಚ್ಚಳಗುಡ್ಡ ಆದರ್ಶ ವಿದ್ಯಾಲಯದ ಕಟ್ಟಡದಲ್ಲಿ ಬೋಧನೆಗೆ ಸ್ಥಳಾಂತರ ಮಾಡಲಾಯಿತು. ವಸತಿ ಮತ್ತು ಊಟಕ್ಕೆ ಮೊರಾರ್ಜಿ ವಸತಿ ನಿಲಯದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ.

ಶಾಲೆ ಆರಂಭವಾಗಿ 15 ವರ್ಷಗಳು ಗತಿಸಿದರೂ ಕಿತ್ತೂರ ರಾಣಿ ಚನ್ನಮ್ಮ ಶಾಲೆಯ ವಿದ್ಯಾರ್ಥಿನಿಯರಿಗೆ ಮತ್ತು ಶಿಕ್ಷಕರಿಗೆ ಸ್ವಂತ ಶಾಲೆಯ ಕಟ್ಟಡ ಮತ್ತು ವಸತಿ ಸೌಲಭ್ಯಗಳ ಕಟ್ಟಡ ಇಲ್ಲದಂತಾಗಿದೆ.

6 ನೇ ತರಗತಿಯಿಂದ 10 ನೇ ತರಗತಿವರೆಗೆ 250 ಕ್ಕೂ ಹೆಚ್ಚು ಬಾಲಕಿಯರು ಅಧ್ಯಯನ ಮಾಡುತ್ತಿದ್ದಾರೆ. ಶಾಲಾ ಕಟ್ಟಡ ನಿರ್ಮಾಣದ ಸಲುವಾಗಿ ಪೋಷಕರು ಮತ್ತು ಮುಖ್ಯ ಶಿಕ್ಷಕರು ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ  ಮತ್ತು ಸಂಬಂಧಿಸಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪರಿಹಾರ ದೊರಕಿಲ್ಲ ಎಂದು ಪೋಷಕರಲ್ಲೊಬ್ಬರಾದ ಹನುಮಂತಪ್ಪ ದೂರಿದರು.

ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗೆ ಗುಳೇದಗುಡ್ಡ ಸಮೀಪದ ಮುರಡಿ ಗ್ರಾಮದ ಸಮೀಪ ರಿ.ಸ.ನಂ. 77 ರ ಒಟ್ಟು ಕ್ಷೇತ್ರ 66-00 ಎ/ಗುಂ ಪೈಕಿ 09-30 ಎ/ಗುಂ ಜಮೀನನ್ನು 2020 ರಲ್ಲಿಯೇ ಶಾಲಾ ಕಟ್ಟಡಕ್ಕೆ ಜಿಲ್ಲಾಧಿಕಾರಿ ನಿವೇಶನ ಮಂಜೂರಾತಿ ಆದೇಶಿಸಿದ್ದಾರೆ.

‘2009-10 ರಲ್ಲಿ ಆರಂಭವಾದ ಜಿಲ್ಲೆಯ ಬೀಳಗಿ ಮತ್ತು ಹುನಗುಂದ ತಾಲ್ಲೂಕಿನಲ್ಲಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗಳ ಕಟ್ಟಡ ಮುಗಿದು ಅನೇಕ ವರ್ಷಗಳಾಗಿವೆ. ಬಾದಾಮಿ ತಾಲ್ಲೂಕಿನ ಶಾಲಾ ಕಟ್ಟಡದ ಕಾಮಗಾರಿ ಯೋಜನೆ ನನೆಗುದಿಗೆ ಬಿದ್ದಿದೆ. ಶಾಲಾ ಕಟ್ಟಡವನ್ನು ಆರಂಭಿಸಲು ಸರ್ಕಾರದಿಂದ ಅನುದಾನ ಮಂಜೂರು ಮಾಡಬೇಕು’ ಎಂದು ಪೋಷಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT