ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ನದಿ ನೀರು ಹಂಚಿಕೆ: ಮಹಾರಾಷ್ಟ್ರ ಜೊತೆ ಸೇರಿ ಜಂಟಿ ಕಾನೂನು ಹೋರಾಟ, ಸಿಎಂ

Last Updated 21 ಆಗಸ್ಟ್ 2021, 10:28 IST
ಅಕ್ಷರ ಗಾತ್ರ

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ (ಯುಕೆಪಿ) ನಮ್ಮ ಪಾಲಿನ ನೀರಿನ ಬಳಕೆಗಾಗಿ ಕೇಂದ್ರದ ಅಂತಿಮ ಅಧಿಸೂಚನೆಗಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಒಟ್ಟಾಗಿ ಸುಪ್ರೀಂಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಆಲಮಟ್ಟಿಯಲ್ಲಿ ಶನಿವಾರ ಕೃಷ್ಣೆಗೆ ಬಾಗಿನ ಅರ್ಪಣೆ ಮಾಡಿದ ಅವರು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನೀರಿನ ಹಂಚಿಕೆ ವಿಚಾರದಲ್ಲಿ ಆಂಧ್ರಪ್ರದೇಶ, ತೆಲಂಗಾಣದ ನಡುವೆ ತಕರಾರು ಇದೆ. ಹೀಗಾಗಿ ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನ ಅನ್ವಯ ಕೇಂದ್ರದ ಅಂತಿಮ ಅಧಿಸೂಚನೆಗೆ ಆ ಎರಡೂ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಎರಡೂ ಪ್ರತ್ಯೇಕ ರಾಜ್ಯಗಳಾಗಿ ಅಸ್ತಿತ್ವಕ್ಕೆ ಬಂದಿರುವ ಕಾರಣ ನೀರಿನ ಮರು ಹಂಚಿಕೆ ಮಾಡುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿವೆ.

ಆದರೆ ಇದು ನಿಮ್ಮ ಆಂತರಿಕ ಸಮಸ್ಯೆ ಎಂದು ನ್ಯಾಯಾಲಯ ಕೂಡ ಇತ್ತೀಚೆಗೆ ಅವರಿಗೆ ಹೇಳಿದೆ. ಹೀಗಾಗಿ ನಮ್ಮ ಪಾಲಿನ ನೀರು ಬಳಕೆ ಮಾಡಿಕೊಂಡು ಯುಕೆಪಿ ಮೂರನೇ ಹಂತದ ಅನುಷ್ಠಾನಕ್ಕೆ ತುರ್ತಾಗಿ ಕೇಂದ್ರದಿಂದ ಅಂತಿಮ ಅಧಿಸೂಚನೆ ಪಡೆಯಬೇಕಿದೆ. ಅದಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ಬೇಕಿದೆ ಎಂದರು.

ಈ ವಿಚಾರದಲ್ಲಿ ಕರ್ನಾಟಕ-ಮಹಾರಾಷ್ಟ್ರದ ಜಂಟಿ ಸಹಭಾಗಿತ್ವ ವಹಿಸಲು ಆ ರಾಜ್ಯದ ನೀರಾವರಿ ಸಚಿವ ಜಯಂತ ಪಾಟೀಲ ಅವರಿಗೆ ಎರಡು ಬಾರಿ ಕರೆ ಮಾಡಿ ಚರ್ಚಿಸಿದ್ದೇನೆ. ಹಿರಿಯರಾದ ಶರದ್ ಪವಾರ್ ಅವರೊಂದಿಗೂ ಮಾತನಾಡಿದ್ದೇನೆ ಎಂದರು.

ಮುಂದಿನ ವಾರ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ದೆಹಲಿಗೆ ತೆರಳಲಿದ್ದೇನೆ. ಅಲ್ಲಿ ರಾಜ್ಯದ ಕಾನೂನು ತಂಡದೊಂದಿಗೆ ಚರ್ಚಿಸಲಾಗುವುದು. ನಂತರ ಕರ್ನಾಟಕ- ಮಹಾರಾಷ್ಟ್ರದ ನೀರಾವರಿ ಹಾಗೂ ಕಾನೂನು ತಜ್ಞರ ಜಂಟಿ ಸಭೆ ನಡೆಸಿ ಸಹಮತಕ್ಕೆ ಬಂದು ಮುಂದೆ ಕೈಗೊಳ್ಳಬಹುದಾದ ರಾಜಕೀಯ ಹಾಗೂ ಕಾನೂನಾತ್ಮಕ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಯುಕೆಪಿ ಮೂರನೇ ಹಂತದ ಪುನರ್ವಸತಿ ಹಾಗೂ ಪುನರ್ನಿರ್ಮಾಣ (ಆರ್ ಅಂಡ್ ಆರ್) ಕಾಮಗಾರಿಗಳ ಕೈಗೊಳ್ಳಲು ಇನ್ನೆರಡು ದಿನಗಳಲ್ಲಿ ₹100 ಕೋಟಿ ಬಿಡುಗಡೆ ಮಾಡಲಾಗುವುದು. ಆರ್ ಅಂಡ್ ಆರ್ ವಿಭಾಗದಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು. ಮೂರನೇ ಹಂತದ ವಿಸ್ತರಣೆಯಲ್ಲಿ ₹5 ಸಾವಿರ ಕೋಟಿ ವೆಚ್ಚದ ವಿವಿಧ ಏತನೀರಾವರಿ ಯೋಜನೆಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಆ ನಿಟ್ಟಿನಲ್ಲಿ ಶೀಘ್ರ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ಜನಪ್ರತಿನಿಧಿಗಳು- ಅಧಿಕಾರಿಗಳ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದರು.

ಯುಕೆಪಿಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದಲ್ಲಿ ಮೂರನೇ ಹಂತದ ಅನುಷ್ಠಾನಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಯಾವ ಮಾನದಂಡದಲ್ಲಿ ಇದು ರಾಷ್ಟ್ರೀಯ ಯೋಜನೆಗೆ ಅರ್ಹವಾಗಲಿದೆ ಎಂಬುದರ ಬಗ್ಗೆ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಹೇಳಿರುವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT