ಬೆಂಗಳೂರು: ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಶನಿವಾರ ಮತ್ತೆ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.
ಆದರೆ, ದೆಹಲಿ ವಿಮಾನ ನಿಲ್ದಾಣದಲ್ಲಿ ಮಾತನಾಡಿ ನೋಟಿಸ್ ಬಂದಿರುವ ವಿಷಯವನ್ನು ನಿರಾಕರಿಸಿರುವ ಜಮೀರ್, ‘ಇಡಿಯಿಂದ ನೋಟಿಸ್ ಬಂದಿದೆ ಎನ್ನುವುದು ಸುಳ್ಳು. ವೈಯಕ್ತಿಕ ಕೆಲಸಕ್ಕೆ ಬಂದಿದ್ದೇನೆ. ನೋಟಿಸ್ ಬಂದರೆ ಮಾಧ್ಯಮಗಳಿಗೆ ತೋರಿಸಿಯೇ ಬರುವೆ’ ಎಂದಿದ್ದಾರೆ.
ಇಡಿ ನೋಟಿಸ್ ನೀಡಿದ್ದರಿಂದ ಕಳೆದ ವಾರ ದೆಹಲಿಗೆ ತೆರಳಿ ವಿಚಾರಣೆ ಎದುರಿಸಿದ್ದ ಜಮೀರ್, ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಶುಕ್ರವಾರ ರಾತ್ರಿ ಮತ್ತೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ಜಮೀರ್, ಸಾಕಷ್ಟು ವಿಚಾರಗಳ ಬಗ್ಗೆ ಅವರ ಜೊತೆ ಚರ್ಚಿಸಿದ್ದಾರೆ.
ನನ್ನ ಆಸ್ತಿಯೆಂದರೆ ನನ್ನ ಜನ: ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಜಮೀರ್, ‘ನನ್ನ ಆಸ್ತಿಯೆಂದರೆ ನನ್ನ ಜನ. ನಾನು ರಾಜಕೀಯ ಜೀವನದಲ್ಲಿ ಇರುವವರೆಗೆ ನನ್ನ ಜನ ತಲೆತಗ್ಗಿಸುವಂಥ ಯಾವ ಕೆಲಸವನ್ನೂ ಮಾಡುವುದಿಲ್ಲ. ನನ್ನ ಆಸ್ತಿಯೂ ಅವರೇ. ಇ.ಡಿ ದಾಳಿಯಿಂದ ಹಲವರ ಅನುಮಾನಗಳು ಪರಿಹಾರವಾದದ್ದೇ ನನಗೆ ಖುಷಿಯ ವಿಚಾರ’ ಎಂದಿದ್ದಾರೆ.
‘ನಾನು ಮನೆಯನ್ನು ಕಟ್ಟಿಸಿದ್ದೆ ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ. ಈ ಕಾರಣಕ್ಕಾಗಿ ನನ್ನ ಮೇಲೆ ಇ.ಡಿ ದಾಳಿಯಾಯಿತು. ಇ.ಡಿ ಯವರು ಯಾವ ನಿರೀಕ್ಷೆಯಿಂದ ನನ್ನ ಮೇಲೆ ದಾಳಿ ಮಾಡಿದ್ದರೋ ಆ ಎಲ್ಲ ನಿರೀಕ್ಷೆಗಳು ಹುಸಿಯಾಗಿವೆ. ದೇಶದ ವಿವಿಧ ರಾಜ್ಯಗಳ ಪ್ರಬಲ ಮುಸ್ಲಿಂ ನಾಯಕರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅವರಿಗೆ ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿದೆ. ಇಂಥ ಷಡ್ಯಂತ್ರದ ಭಾಗವಾಗಿ ನನ್ನ ಮೇಲೂ ಹಲವು ರೀತಿ ದಾಳಿಗಳಾಗುತ್ತಿವೆ. ಆದರೆ, ಇದ್ಯಾವುದಕ್ಕೂ ನಾನು ಹೆದರುವುದಿಲ್ಲ’ ಎಂದೂ ಬರೆದುಕೊಂಡಿದ್ದಾರೆ.
‘ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವುದು ನನ್ನ ಅಭಿಪ್ರಾಯ, ನೀವು ತಿರುಚ ಬೇಡಿ’ ಎಂದೂ ಮಾಧ್ಯಮ ಪ್ರತಿನಿಧಿಗಳಿಗೆ ಜಮೀರ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.