ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಟಿಲೇಟರ್‌ ಕೊರತೆಯೇ ಸವಾಲು

ಜಮಖಂಡಿ ತಾಲ್ಲೂಕು ಆಸ್ಪತ್ರೆ: ಕೋವಿಡ್–19 ವಿರುದ್ಧದ ಹೋರಾಟಕ್ಕೆ ಸಜ್ಜು
Last Updated 31 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಜಮಖಂಡಿ: ಇಲ್ಲಿನ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಕೊರತೆ ಇದ್ದು, ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಸವಾಲಾಗಿ ಪರಿಣಮಿಸಿದೆ.

ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಕೋವಿಡ್–19 ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಆದರೆ ಸೋಂಕು ಹರಡುವಿಕೆ ಆರಂಭವಾದರೆ ಆ ಪರಿಸ್ಥಿತಿಯನ್ನುಸಮರ್ಥವಾಗಿ ನಿಭಾಯಿಸಲು ಹಾಗೂ ರೋಗಿಗಳ ಪ್ರಾಣ ಕಾಪಾಡಲು ಹೆಚ್ಚಿನ ಸಂಖ್ಯೆಯ ವೆಂಟಿಲೇಟರ್‌ಗಳ ಅಗತ್ಯವಿದೆ. ಆದರೆ ತಾಲ್ಲೂಕು ಆಸ್ಪತ್ರೆಯಲ್ಲಿ ಕೇವಲ ಒಂದು ವೆಂಟಿಲೇಟರ್ ಮಾತ್ರ ಲಭ್ಯವಿದೆ.

ಕೋವಿಡ್–19 ಕಾಣಿಸಿಕೊಂಡ ಎಲ್ಲರಿಗೂ ವೆಂಟಿಲೇಟರ್‌ ಬಳಸುವ ಅಗತ್ಯ ಬೀಳುವುದಿಲ್ಲ. 100 ಹಾಸಿಗೆಗಳ ಐಸೊಲೇಶನ್‌ ಘಟಕವಿದ್ದರೆ ಐದು ಬೇಕಾಗಬಹುದು. ಹೀಗಾಗಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ವೆಂಟಿಲೇಟರ್‌ಗಳ ಪೂರೈಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ ಎಂದು ತಾಲ್ಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಕೃಷ್ಣಾ ಬಣ್ಣದ ’ಪ್ರಜಾವಾಣಿ’ಗೆ ತಿಳಿಸಿದರು.

ನಿಗಾ ವ್ಯವಸ್ಥೆ ಹೆಚ್ಚಳ:

ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ತಾಲ್ಲೂಕಿನಲ್ಲಿ ನಿಗಾ ವ್ಯವಸ್ಥೆಗೆ (ಕ್ವಾರಂಟೈನ್‌) ಒಳಗಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಲ್ಲಿಯವರೆಗೆ ವಿದೇಶದಿಂದ ಬಂದ 25 ಮಂದಿ, ಹೊರ ರಾಜ್ಯಗಳಿಂದ ಬಂದ 3256 ಹಾಗೂ ಹೊರ ಜಿಲ್ಲೆಗಳಿಂದ 2206 ಮಂದಿ ಬಂದಿದ್ದಾರೆ. ಈ ಪೈಕಿ ಶ್ರೀಶೈಲ ಯಾತ್ರೆ ಮುಗಿಸಿ ಬಂದವರ ಸಂಖ್ಯೆಯೇ 3 ಸಾವಿರ ದಾಟುತ್ತದೆ. ಒಟ್ಟು 5487 ಮಂದಿಯನ್ನು ಮನೆಯಲ್ಲಿಯೇ ನಿಗಾದಲ್ಲಿ ಇಡಲಾಗಿದೆ.

ಲಾಕ್‌ಡೌನ್ ಆರಂಭವಾದ ನಂತರ ತೀವ್ರ ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ15 ಮಂದಿಗೆ ಇಲ್ಲಿ ಚಿಕಿತ್ಸೆ ನೀಡಲಾಗಿದೆ. ಅವರಲ್ಲಿ ಇಬ್ಬರ ಗಂಟಲು ದ್ರವ ಮಾದರಿಯನ್ನು ಜಿಲ್ಲಾ ಆಸ್ಪತ್ರೆಗೆ ಕಳಿಸಿದ್ದು, ‘ನೆಗೆಟಿವ್’ ಎಂದು ಬಂದಿವೆ.

ಕೊರೊನಾ ಪೀಡಿತರ ಚಿಕಿತ್ಸೆಗೆ ಜಮಖಂಡಿ ತಾಲ್ಲೂಕು ಆಸ್ಪತ್ರೆಯಲ್ಲೂ ತೀವ್ರ ನಿಗಾ ಘಟಕ (ಐಸೊಲೇಶನ್ ವಾರ್ಡ್) ತೆರೆಯಲಾಗಿದೆ. ಅದಕ್ಕಾಗಿ ಆರು ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಅಗತ್ಯಬಿದ್ದರೆ ಇನ್ನೂ ಆರು ಹಾಸಿಕೆಯ ಘಟಕ ತೆಗೆಯುವ ವ್ಯವಸ್ಥೆ ಇದ್ದು, ಆಸ್ಪತ್ರೆಗೆ ಅಗತ್ಯ ಔಷಧಗಳನ್ನು ತರಿಸಿದ್ದು, ಮೂವರು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ಉಸಿರಾಟ ತೊಂದರೆ ಇರುವವರಿಗೆ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT