ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರದ ಲಾಕ್‌ಡೌನ್‌ಗೆ ಬಾಗಲಕೋಟೆ ಸಂಪೂರ್ಣ ಸ್ತಬ್ಧ

Last Updated 5 ಜುಲೈ 2020, 13:07 IST
ಅಕ್ಷರ ಗಾತ್ರ

ಬಾಗಲಕೋಟೆ: ಕೋವಿಡ್–19 ಭಾನುವಾರದ ಲಾಕ್‌ಡೌನ್‌ಗೆ ಬಾಗಲಕೋಟೆ ನಗರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಅಭೂತಪೂರ್ವ ಸ್ಪಂದನೆ ದೊರೆಯಿತು.

ಸಾರಿಗೆ ಸಂಸ್ಥೆ ಬಸ್‌ಗಳು ಮಾತ್ರವಲ್ಲದೇ ಖಾಸಗಿ ವಾಹನಗಳು ಮುಂಜಾನೆಯಿಂದಲೇ ರಸ್ತೆಗೆ ಇಳಿಯಲಿಲ್ಲ. ಸಾರ್ವಜನಿಕರ ಓಡಾಟವೂ ವಿರಳವಾಗಿತ್ತು. ರಸ್ತೆಗಳಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಮಾತ್ರ ಕಾಣಸಿಕ್ಕರು. ಇದರಿಂದ ಇಡೀ ನಗರ ಬಿಕೊ ಎನ್ನುತ್ತಿತ್ತು.

ಸದಾ ಜನ ಹಾಗೂ ವಾಹನ ದಟ್ಟಣೆಯಿಂದ ತುಂಬಿರುತ್ತಿದ್ದ ಬಸವೇಶ್ವರ ವೃತ್ತ, ವಲ್ಲಭಬಾಯಿ ಚೌಕ, ವಿದ್ಯಾಗಿರಿ ಮುಖ್ಯ ರಸ್ತೆ ಹಾಗೂ ನವನಗರದ ಪ್ರಮುಖ ವೃತ್ತಗಳು ಖಾಲಿ ಹೊಡೆದವು. ಅಂಗಡಿ–ಮುಂಗಟ್ಟುಗಳು ಬಾಗಿಲು ಹಾಕಿದ್ದವು. ಕೆಲವು ಕಡೆ ಅನಗತ್ಯವಾಗಿ ರಸ್ತೆಗೆ ಇಳಿದವರು ಪೊಲೀಸರಿಂದ ಲಾಠಿ ರುಚಿ ತಿಂದರು.

ಲಾಕ್‌ಡೌನ್ ಹಿನ್ನೆಲೆ ಬಸ್‌ಗಳು ರಸ್ತೆಗೆ ಇಳಿಯದೇ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದರು. ದೂರದ ಊರುಗಳಿಂದ ಬೆಳಗಿನ ಜಾವ ಬಾಗಲಕೋಟೆ ಬಸ್ ನಿಲ್ದಾಣಕ್ಕೆ ಬಂದಿಳಿದವರಿಗೆ ಹಳ್ಳಿಗಳಿಗೆ ತೆರಳಲು ವಾಹನ ಸೌಕರ್ಯ ಇಲ್ಲದೇ ದಿನವಿಡೀ ಅಲ್ಲಿಯೇ ಕಾಲ ಕಳೆಯಬೇಕಾಯಿತು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಾದಾಮಿಯ ಬನಶಂಕರಿ ಹಾಗೂ ಕೂಡಲಸಂಗಮದ ಸಂಗನಾಥ ದೇಗುಲ ಬಾಗಿಲು ತೆರೆಯಲಿಲ್ಲ. ಗುರುಪೌರ್ಣಿಮೆಯ ದಿನ ಭಕ್ತರಿಗೆ ಬನಶಂಕರಿ ದೇವಿ ದರ್ಶನ ಸಾಧ್ಯವಾಗಲಿಲ್ಲ. ಬೆಳಗಿನ ಪೂಜಾ–ಕೈಂಕರ್ಯ ಮುಗಿಸಿ ದೇಗುಲ ಬಂದ್ ಮಾಡಿ ಅರ್ಚಕರು ಮನೆಗೆ ತೆರಳಿದರು. ಸಾಮಾನ್ಯವಾಗಿ ಹುಣ್ಣಿಮೆಯ ದಿನ ಭಕ್ತರಿಂದ ತುಂಬಿರುತ್ತಿದ್ದ ದೇವಸ್ಥಾನ ಈ ಬಾರಿ ಬಿಕೊ ಎನ್ನುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT