ಶುಕ್ರವಾರ, ಫೆಬ್ರವರಿ 26, 2021
32 °C
52 ವಾರಗಳ ನಿರಂತರ ಕಾರ್ಯಕ್ರಮ: ಕೂಡಲಸಂಗಮ ಅಭಿವೃದ್ಧಿ ಮಂಡಳಿ ನೇತೃತ್ವ

ಕೂಡಲಸಂಗಮ: ಬಸವ ಐಸಿರಿ ಬಾನುಲಿ ಇಂದಿನಿಂದ

ಶ್ರೀಧರ ಗೌಡರ Updated:

ಅಕ್ಷರ ಗಾತ್ರ : | |

Prajavani

ಕೂಡಲಸಂಗಮ: ಬಸವಾದಿ ಶರಣರ ತತ್ವಾದರ್ಶ, ಸಿದ್ಧಾಂತ, ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಧಾರವಾಡ ಆಕಾಶವಾಣಿ ಕೇಂದ್ರದಿಂದ ಹಮ್ಮಿಕೊಂಡ ಬಸವ ಐಸಿರಿ ಬಾನುಲಿ ಕಾರ್ಯಕ್ರಮ ಜೂನ್ 14ರ ಬೆಳಿಗ್ಗೆ 10ಕ್ಕೆ ಪ್ರಸಾರವಾಗಲಿದೆ.

ಪ್ರತಿ ಭಾನುವಾರ ಬೆಳಿಗ್ಗೆ 10 ರಿಂದ 10.30ರವರೆಗೆ ಬಸವ ಐಸಿರಿ ಬಾನುಲಿ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. 52 ವಾರಗಳು ನಿರಂತರವಾಗಿ ನಡೆಯಲಿದೆ. ಧಾರವಾಡ, ವಿಜಯಪುರ, ಕಲಬುರ್ಗಿ, ಹೊಸಪೇಟೆ, ರಾಯಚೂರ, ಚಿತ್ರದುರ್ಗ ಆಕಾಶವಾಣಿ ಹಾಗೂ ಧಾರವಾಡ, ಕಲಬುರ್ಗಿಯ ವಿವಿಧ ಭಾರತಿ ಕೇಂದ್ರಗಳಿಂದ ಏಕಕಾಲದಲ್ಲಿ ಪ್ರಸಾರಗೊಳ್ಳಲಿದೆ.

30 ನಿಮಿಷ ಕಾಲ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ವಚನ ಗಾಯನ, ವಚನ ಸಾಹಿತ್ಯ ಚಿಂತನೆ, ಶರಣ, ಶರಣೆಯರ ಪರಿಚಯ, ವಚನಗಳಲ್ಲಿ ವಿಜ್ಞಾನ, ಜನಪದರು ಕಂಡ ಶರಣರ ಕುರಿತು ನಾಡಿನ ಮಠಾಧೀಶರು, ಚಿಂತಕರು, ಸಾಹಿತಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು ಮಾತನಾಡುವರು. ಕೂಡಲಸಂಗಮ, ಬಸವನ ಬಾಗೇವಾಡಿ, ಚಿಕ್ಕಸಂಗಮ, ಎಂ.ಕೆ.ಹುಬ್ಬಳ್ಳಿ, ತಂಗಡಗಿ ಕ್ಷೇತ್ರಗಳ ಪರಿಚಯ ಈ ವೇಳೆ ಬಿತ್ತರವಾಗಲಿದೆ.

ಬಸವಾದಿ ಶರಣರ ತತ್ವ ಸಂದೇಶ, ವಚನ ಸಾಹಿತ್ಯ ಬಿತ್ತರಿಸುವ ಕಾರ್ಯವನ್ನು ಮಂಡಳಿ ಮಾಡಬೇಕು ಎಂಬ ಬಸವ ಭಕ್ತರ ಬೇಡಿಕೆ ಬಹುದಿನಗಳಿಂದ ಇತ್ತು. ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ನಿರ್ದೇಶನದಂತೆ ಬಸವ ಐಸಿರಿ ಕಾರ್ಯಕ್ರಮದ ಯೋಜನೆ ಸಿದ್ಧವಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧ್ಯಕ್ಷತೆಯಲ್ಲಿ 2019ರ ಅಕ್ಟೋಬರ್ ತಿಂಗಳಲ್ಲಿ ಮೂರು ಸರಣಿ ಸಭೆ ನಡೆಸಲಾಗಿತ್ತು.

ಇಳಕಲ್‌ನ ಚಿತ್ತರಗಿ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿ, ಕೂಡಲಸಂಗಮ ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಎಸ್.ಆರ್.ಚನ್ನವೀರಪ್ಪ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ನಾಡಗೌಡ, ಪತ್ರಕರ್ತ ಶ್ರೀಧರ ಗೌಡರ, ಮಂಡಳಿ ಆಯುಕ್ತೆ ರಾಜಶ್ರೀ ಅಗಸರ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆಯಾಗಿತ್ತು. ಸಮಿತಿ ಈಗ ಕಾರ್ಯಕ್ರಮ ಸಿದ್ಧಪಡಿಸಿದೆ. ಅದು ಜೂನ್ 14ರಿಂದ ಪ್ರಸಾರವಾಗಲಿದೆ. ನೋಡಲ್ ಅಧಿಕಾರಿಯಾಗಿ ಶ್ರೀಧರ ಗೌಡರ ನಿಯೋಜನೆಗೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು