ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

​ವಿಜಯಪುರ-ಬಾಗಲಕೋಟೆ ಪರಿಷತ್ ಚುನಾವಣೆ: ಸುನೀಲ್‌ಗೌಡ ಪಾಟೀಲ ಕಾಂಗ್ರೆಸ್ ಅಭ್ಯರ್ಥಿ

Last Updated 22 ನವೆಂಬರ್ 2021, 14:46 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ದ್ವಿಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಹಾಲಿ ಸದಸ್ಯ ಸುನೀಲ್‌ಗೌಡ ಪಾಟೀಲ ಅವರಿಗೆ ಕಾಂಗ್ರೆಸ್‌ ಟಿಕೆಟ್ ಲಭಿಸಿದೆ.

ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಂ.ಬಿ.ಪಾಟೀಲ ಅವರ ಸಹೋದರ ಸುನೀಲ್‌ಗೌಡ ಪಾಟೀಲ ಅವರು 2018ರಲ್ಲಿ ಇದೇ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಮತ್ತು ಸುನೀಲ್‌ಗೌಡ ಪಾಟೀಲ ನಡುವೆ ಟಿಕೆಟ್‌ಗಾಗಿ ಭಾರೀ ಪೈಪೋಟಿ ಮತ್ತು ಲಾಬಿ ನಡೆದಿತ್ತು.

ಈಗಾಗಲೇ ನಾಲ್ಕು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಎಸ್‌.ಆರ್‌. ಪಾಟೀಲ ಅವರ ಬದಲು ಸುನೀಲ್‌ ಗೌಡ ಒಬ್ಬರನ್ನೇ ಕಣಕ್ಕಿಳಿಸಿರುವುದು ರಾಜಕೀಯ ಅಚ್ಚರಿಗೆ ಕಾರಣವಾಗಿದೆ.

‘ಯಾವುದೇ ಕಾರಣಕ್ಕೂ ಇಬ್ಬರನ್ನು ಕಣಕ್ಕಿಳಿಸುವುದು ಬೇಡ. ಟಿಕೆಟ್‌ ಒಬ್ಬರಿಗೆ ಮಾತ್ರವಾದರೆ ನಾನು ಸ್ಪರ್ಧಿಸುತ್ತೇನೆ, ಇಲ್ಲವಾದರೆ ನನಗೆ ಟಿಕೆಟ್‌ ಬೇಡವೇ ಬೇಡ’ ಎಂದು ಎಸ್‌.ಆರ್‌.ಪಾಟೀಲ ಪಕ್ಷದ ವರಿಷ್ಠರಿಗೆ ತಿಳಿಸಿದ್ದರು ಎನ್ನಲಾಗಿದೆ.

‘ಎರಡೂ ಸ್ಥಾನಗಳು ಹಾಲಿ ಕಾಂಗ್ರೆಸ್‌ ತೆಕ್ಕೆಯಲ್ಲಿವೆ. ಈ ಬಾರಿಯೂ ಗೆಲ್ಲುವ ಸಾಧ್ಯತೆ ಇದೆ. ಹೀಗಾಗಿ ಇಬ್ಬರಿಗೂ ಟಿಕೆಟ್‌ ನೀಡಿ’ ಎಂದು ಸುನೀಲ್‌ಗೌಡ ಪಾಟೀಲ ಅವರು ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕಿದ್ದರು.

ಅಲ್ಲದೇ, ಸುನೀಲ್‌ಗೌಡ ಪಾಟೀಲಗೆ ಟಿಕೆಟ್‌ ಲಭಿಸಲು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಶಾಸಕ ಎಂ.ಬಿ.ಪಾಟೀಲ ಮುಖ್ಯ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿಯಿಂದ ಈಗಾಗಲೇ ಬಾಗಲಕೋಟೆಯ ಮಾಜಿ ಶಾಸಕ ಪಿ.ಎಚ್.ಪೂಜಾರ ಅವರು ಕಣಕ್ಕಿಳಿದಿದ್ದಾರೆ. ಅವರದೇ ಸಮುದಾಯಕ್ಕೆ ಸೇರಿದ ಎಸ್‌.ಆರ್‌.ಪಾಟೀಲ ಅವರನ್ನು ಕಣಕ್ಕಿಳಿಸುವ ಬದಲು ವಿಜಯಪುರಕ್ಕೆ ಅವಕಾಶ ನೀಡಿ ಹಾಗೂ ಬೇರೆ ಸಮುದಾಯದವರಿಗೆ ಅವಕಾಶ ನೀಡಿ ಎಂಬ ಒತ್ತಡವೂ ಪಕ್ಷದಲ್ಲಿ ಹೆಚ್ಚಾಗಿದೆ.

ದ್ವಿಸದಸ್ಯ ಸ್ಥಾನಕ್ಕೆ ಬಾಗಲಕೋಟೆಯಿಂದ ಒಬ್ಬರು, ವಿಜಯಪುರದಿಂದ ಒಬ್ಬರು ಬೇರೆ ಬೇರೆ ಪಕ್ಷಗಳಿಂದ ಕಣಕ್ಕಿಳಿದಿರುವುದರಿಂದ ಅವಳಿ ಜಿಲ್ಲೆಗಳಿಗೆ ಪ್ರಾತಿನಿಧ್ಯ ಲಭಿಸಿದಂತಾಗಿದೆ. ಇಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ಸ್ಪರ್ಧಿಸದೇ ಇದ್ದರೆ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ.

ಇದುವರೆಗೆ ನಡೆದ ಚುನಾವಣೆಯಲ್ಲಿ ಕೇವಲ ಬಾಗಲಕೋಟೆ ಜಿಲ್ಲೆಗೆ ಪ್ರಾತಿನಿಧ್ಯ ಲಭಿಸುತ್ತಿತ್ತು. ಆದರೆ, ಈ ಹಿಂದಿನ ಚುನಾವಣೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಳಕ್ಕಿಳಿಯುವ ಮೂಲಕ ಜಯ ಗಳಿಸಿದ್ದರು. ಬಳಿಕ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸುನೀಲ್‌ಗೌಡ ಪಾಟೀಲ ಸ್ಪರ್ಧಿಸಿ ಜಯಗಳಿಸಿದ್ದರು.

ಪ್ರತಿಷ್ಠಿತ ಬಿಎಲ್‌ಡಿಇ ಸಂಸ್ಥೆಯ ನಿರ್ದೇಶಕರಾಗಿರುವ ಸುನೀಲ್‌ಗೌಡ ಪಾಟೀಲ ಅವರು, ದಿ.ಬಿ.ಎಂ.ಪಾಟೀಲ ಅವರ ದ್ವಿತೀಯ ಪುತ್ರರಾಗಿದ್ದಾರೆ. ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿ.ಇ (ಆರ್ಕಿಟೆಕ್ಟ್‌) ಮತ್ತು ಆಸ್ಟ್ರೇಲಿಯಾದ ಕ್ವಿನ್ಸ್‌ಲ್ಯಾಂಡ್‌ ಟೆಕ್ನಾಲಜಿ ಯುನಿರ್ವಸಿಟಿಯಲ್ಲಿ ಎಂ.ಬಿ.ಎ ಪದವಿ ಪಡೆದುಕೊಂಡಿದ್ದಾರೆ.

***
ಪಕ್ಷದ ವರಿಷ್ಠರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಅವಳಿ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಮುಖಂಡರು ನನ್ನನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ಗೆಲುವು ನಿಶ್ಚಿತ.
–ಸುನೀಲ್‌ಗೌಡ ಪಾಟೀಲ,ಕಾಂಗ್ರೆಸ್‌ ಅಭ್ಯರ್ಥಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT