ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಧ್ಯಕ್ಷ, ಉಪಾಧ್ಯಕ್ಷ: ಗುಟ್ಟು ಬಿಟ್ಟುಕೊಡದ ಬಿಜೆಪಿ

ನಗರಸಭೆಯಲ್ಲಿ ಬಿಜೆಪಿಗೆ ಭರ್ಜರಿ ಬಹುಮತ
Published : 29 ಆಗಸ್ಟ್ 2024, 5:58 IST
Last Updated : 29 ಆಗಸ್ಟ್ 2024, 5:58 IST
ಫಾಲೋ ಮಾಡಿ
Comments

ಬಾಗಲಕೋಟೆ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯುವುದು ಬಹುತೇಕ ಖಚಿತವಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಯಾರಾಗಲಿದ್ದಾರೆ ಎಂಬ ಗುಟ್ಟನ್ನು ಬಿಜೆಪಿ ನಾಯಕರು ಬಿಟ್ಟುಕೊಟ್ಟಿಲ್ಲ.

ನಗರಸಭೆಯಲ್ಲಿ 35 ಮಂದಿ ಸದಸ್ಯರಿದ್ದಾರೆ. 29 ಸದಸ್ಯರನ್ನು ಹೊಂದಿರುವ ಬಿಜೆಪಿ ಭರ್ಜರಿ ಬಹುಮತ ಹೊಂದಿದೆ. ಆರು ಕಾಂಗ್ರೆಸ್‌, ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ, ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ, ಶಾಸಕ ಎಚ್‌.ವೈ. ಮೇಟಿ ಮತದಾನದ ಹಕ್ಕು ಹೊಂದಿದ್ದಾರೆ. ಶಾಸಕ ಮೇಟಿ ಅವರನ್ನು ಹೊರತುಪಡಿಸಿದರೆ, ಉಳಿದವರೆಲ್ಲ ಬಿಜೆಪಿಯವರಾಗಿದ್ದಾರೆ.

ಸಾಮಾನ್ಯ ಮಹಿಳೆಗೆ ಅಧ್ಯಕ್ಷ, ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿದೆ. ಇದರಿಂದಾಗಿ ಪೈಪೋಟಿ ಜೋರಾಗಿದೆ.

ಬಿಜೆಪಿಯಲ್ಲಿ 16 ಮಹಿಳಾ ಸದಸ್ಯರಿದ್ದಾರೆ. ಅದರಲ್ಲಿ ಎಂಟು ಸದಸ್ಯರು ಸಾಮಾನ್ಯ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಉಳಿದಂತೆ ಹಿಂದುಳಿದ ವರ್ಗ ಸೇರಿದಂತೆ ವಿವಿಧ ಮೀಸಲಾತಿ ಕ್ಷೇತ್ರಗಳಿಂದ ಗೆಲುವು ಸಾಧಿಸಿದ್ದಾರೆ.

ಉಪಾಧ್ಯಕ್ಷ ಹುದ್ದೆಗೆ ಸಾಮಾನ್ಯ ಕ್ಷೇತ್ರದಿಂದ ಗೆಲುವುದು ಸಾಧಿಸಿರುವ ಏಳು ಸದಸ್ಯರು ಸೇರಿದಂತೆ 30ಕ್ಕೂ ಹೆಚ್ಚು ಜನರು ಆಕಾಂಕ್ಷಿಗಳಾಗಿದ್ದಾರೆ. ತೆರೆಮರೆಯಲ್ಲಿ ಹುದ್ದೆಗೆ ಏರಲು ಕಸರತ್ತು ನಡೆಸಿದ್ದಾರೆ.

ಮಾಜಿ ಶಾಸಕ ವೀರಣ್ಣ ಚರಂತಿಮಠ, ಈ ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಕ್ಷೇತ್ರದಿಂದ ಗೆದ್ದಿರುವ ಅಭ್ಯರ್ಥಿಗಳಿಗೆ ನೀಡಲಾಗುವುದು ಎಂದು ಹೇಳಿದ್ದರಿಂದ ಮೀಸಲು ಕ್ಷೇತ್ರಗಳಿಂದ ಗೆದ್ದವರು ಸ್ಪರ್ಧೆಯ ದಾರಿ ಕಠಿಣವಾಗಿದೆ.

ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿ ಶಿವಲೀಲಾ ಪಟ್ಟಣಶೆಟ್ಟಿ, ಸವಿತಾ ಲೆಂಕನ್ನವರ, ಪಾರ್ವತಿ ಅಕ್ಕಿಮರಡಿ, ಶೋಭಾ ರಾವ್‌ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಚನ್ನವೀರಯ್ಯ ಹಿರೇಮಠ, ಶಿವಬಸವ ಬಳ್ಳಾರಿ, ರಮೇಶ ಕೋಟಿ ಹೆಸರುಗಳು ಕೇಳಿ ಬರುತ್ತಿವೆ. 

ಮಾಜಿ ಶಾಸಕ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಬುಧವಾರ ಬಿಜೆಪಿ ಸದಸ್ಯರ ಸಭೆ ನಡೆದಿದೆ. ಆದರೆ, ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿ ಯಾರು ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಗುರುವಾರ ಬೆಳಿಗ್ಗೆಯೇ ಅಭ್ಯರ್ಥಿ ಯಾರು ಎಂಬುದು ಗೊತ್ತಾಗಲಿದೆ.

ಕಾದು ನೋಡುವ ತಂತ್ರ

ಬಾಗಲಕೋಟೆ: ನಗರಸಭೆಯಲ್ಲಿ ಐವರು ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಶಾಸಕರ ಮತವೂ ಸೇರಿ ಒಟ್ಟು ಆರು ಮತಗಳನ್ನು ಕಾಂಗ್ರೆಸ್‌ ಹೊಂದಿದೆ. ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಗೆಲುವಿಗೆ ಬೇಕಾದಷ್ಟು ಸಂಖ್ಯೆಯ ಸದಸ್ಯರು ಬಂಡಾಯ ಎದ್ದರೆ ಬೆಂಬಲಿಸುವ ಯೋಚನೆಯಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT