ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹದಿಂದ ಹಾನಿ, ದುರಸ್ತಿ ಕಾಣದ ಪಟ್ಟದ ಕಲ್ಲು ರಸ್ತೆ

Last Updated 20 ಡಿಸೆಂಬರ್ 2019, 12:40 IST
ಅಕ್ಷರ ಗಾತ್ರ

ಪಟ್ಟದಕಲ್ಲು (ಬಾದಾಮಿ ): ಒಂದೇ ತಿಂಗಳ ಅವಧಿಯಲ್ಲಿ ಎರಡು ಬಾರಿ ಪ್ರವಾಹದ ಸೆಳೆತಕ್ಕೆ ಸಿಲುಕಿದ್ದ ಪಟ್ಟದಕಲ್ಲು-ಕಾಟಾಪುರ ಗ್ರಾಮದ ನಡುವಿನ ಮಲಪ್ರಭಾ ನದಿ ಸೇತುವೆ ಈಗ ಶಿಥಿಲಗೊಂಡಿದೆ. ಹೊಸ ಪಟ್ಟದಕಲ್ಲು ಗ್ರಾಮದಿಂದ ಹಳೆ ಪಟ್ಟದಕಲ್ಲುವರೆಗೆ ಸಿಮೆಂಟ್ ರಸ್ತೆ ಸಂಪೂರ್ಣ ಕೊಚ್ಚಿ ಹಾಳಾಗಿದೆ.

ಕರ್ನಾಟಕ ರಾಜ್ಯ ಹೆದ್ದಾರಿ ಮೂಲಸೌಕರ್ಯ ಯೋಜನೆಯಡಿ (ಕೆಶಿಪ್) ಸೇತುವೆಯನ್ನು ಬಳಸಿಕೊಂಡು ಹೆದ್ದಾರಿ ನಿರ್ಮಿಸಲಾಗಿತ್ತು. ಆರು ತಿಂಗಳಲ್ಲಿಯೇ ಅದು ಕೂಡ‍ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದೆ. ಕಾಟಾಪುರ ಗ್ರಾಮದ ಕಡೆಯೂ ಸೇತುವೆ ಕಿತ್ತು ಹೋಗಿದೆ. ಎರಡೂ ಕಡೆ ಕಂದಕ ಬಿದ್ದಿವೆ. ಸಂಚಾರ ದುಸ್ತರವಾಗಿದೆ. ವಾಹನಗಳು ಆಯ ತಪ್ಪಿದರೆ ಅಪಘಾತ ತಪ್ಪಿದ್ದಲ್ಲ.

ಗ್ರಾಮಸ್ಥರಿಂದಲೇ ತಾತ್ಕಾಲಿಕ ದುರಸ್ತಿ:

ಕೆಶಿಪ್ ಅಧಿಕಾರಿಗಳಾಗಲೀ, ಲೋಕೋಪಯೋಗಿ ಇಲಾಖೆಯವರಾಗಲೀ ಇತ್ತ ಗಮನ ಹರಿಸಲಿಲ್ಲ. ನಾವೇ ಗ್ರಾಮದಲ್ಲಿ ₹3 ಸಾವಿರ ಹಣ ಪಟ್ಟಿ (ದೇಣಿಗೆ) ಸೇರಿಸಿ ಕಂದಕಕ್ಕೆ ಮಣ್ಣು ಹಾಕಿಸಿದೆವು. ಇದುವರೆಗೂ ಯಾವ ಅಧಿಕಾರಿಯೂ ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಪಟ್ಟದಕಲ್ಲು-ಕಾಟಾಪುರ ಗ್ರಾಮದ ಸಿದ್ದಪ್ಪ, ಮಳಿಯಪ್ಪ ಸೂಳಿಕಲ್ ಆರೋಪಿಸುತ್ತಾರೆ.

2009 ರಲ್ಲಿ ಪ್ರವಾಹ ಭಾರೀ ಪ್ರಮಾಣದಲ್ಲಿ ಬಂದಿತ್ತು. ಹೊಸ ಪಟ್ಟದಕಲ್‌ನಿಂದ ಹಳೆ ಪಟ್ಟದಕಲ್ ಸಂಪರ್ಕ ರಸ್ತೆಯಲ್ಲಿ ಸೇತುವೆ ಮಾಡಿ. ಪ್ರವಾಹ ಬಂದರೂ ನೀರು ಹರಿದು ಹೋಗುತ್ತದೆ. ಊರೊಳಗೆ ನುಗ್ಗುವುದಿಲ್ಲ ಎಂದು ಅಧಿಕಾರಿಗಳಿಗೆ ಗ್ರಾಮದವರು ಒತ್ತಾಯಿಸಿದ್ದೆವು. ಆದರೆ ಅವರು ನಮ್ಮ ಮಾತು ಕಿವಿಗೆ ಹಾಕಿಕೊಳ್ಳಲಿಲ್ಲ. ಈಗ ಪ್ರವಾಹಕ್ಕೆ ಇಡೀ ರಸ್ತೆ ಕೊಚ್ಚಿ ಹೋಯಿತು. ಮನೆಗಳು ಮತ್ತು ಬೆಳೆ ಸಹ ಕೊಚ್ಚಿ ಹೋಗಿದೆ ಎಂದು ಗ್ರಾಮದ ಶಿವಾನಂದ ಸೋಮನಕಟ್ಟಿ ಹೇಳುತ್ತಾರೆ.

‘ ರಸ್ತಾ ಕೆಟ್ಟು ಐದ್ ತಿಂಗಳಾತು ಯಾರೂ ಇತ್ತಾಗ ಬಂದಿಲ್ಲ. ಮರಳು ಲಾರಿ ,ಕಬ್ಬಿನ ಟ್ರ್ಯಾಕ್ಟರ್, ಸಾರಿಗೆ ಬಸ್ಸು, ಪ್ರವಾಸಿ ವಾಹನ ಎಲ್ಲಾ ಗಾಡಿ ಇದ ರಸ್ತಾದಾಗ ಹಾದು ಹೋಗಬೇಕು. ದಿನಾ ಭಯಂಕರ ಗದ್ದಲ ಆಗ್ತೈತ್ರಿ. ಹಿಂಗಾದ್ರ ಪ್ರವಾಸಿಗರು ಬರೂದಿಲ್ಲರಿ ‘ ಎಂದು ಇಲ್ಲಿನ ಚಹಾದ ಅಂಗಡಿ ಮಾಲೀಕ ಹೇಳುತ್ತಾರೆ.

ಪ್ರವಾಹ ಬಂದು ಹೋಗಿ ಐದು ತಿಂಗಳಾದರೂ ಯಾವ ಅಧಿಕಾರಿ, ಜನಪ್ರನಿಧಿಗಳೂ ಸೂಕ್ತ ಕ್ರಮ ಕೈಗೊಂಡಿಲ್ಲ. ಪ್ರವಾಸಿಗರು ಹಿಡಿಶಾಪ ಹಾಕುತ್ತಾರೆ. ಹೆದ್ದಾರಿ ಬಂದ್ ಆಗಿರುವುದರಿಂದ ಪಟ್ಟದಕಲ್ಲು ಗ್ರಾಮದ ಮೂಲಕ ವಾಹನಗಳು ಸಂಚರಿಸಬೇಕಿದೆ. ವಾಹನ ದಟ್ಟಣೆಯಿಂದ ಯಾವಾಗ ಬೇಕಾದರೂ ಸಾರಿಗೆ ಸಂಚಾರ ಸ್ಥಗಿತವಾಗುತ್ತದೆ.

ಪಟ್ಟದಕಲ್ಲಿನಲ್ಲಿ ಪ್ರವಾಸಿಗರ ಅನೇಕ ಕಾರುಗಳ ಗಾಜು ಒಡೆದು ಕಳ್ಳತನ ಪ್ರಕರಣಗಳು ಜರುಗಿವೆ. ಸೂಕ್ತ ಬಂದೋಬಸ್ತ್‌ಗೆ ಪೊಲೀಸ್ ಸಿಬ್ಬಂದಿಯನ್ನು ಇಲ್ಲಿ ನೇಮಿಸಬೇಕಿದೆ. ವಿಶ್ವ ಪರಂಪರೆಯ ತಾಣ ಪಟ್ಟದಕಲ್ಲು ಸ್ಮಾರಕ, ಐಹೊಳೆ ಮಹಾಕೂಟ ಮತ್ತು ಬನಶಂಕರಿ ದೇವಾಲಯಕ್ಕೆ ಇದೇ ರಸ್ತೆಯಿಂದ ಹೋಗಬೇಕಾಗುತ್ತದೆ. ಅಧಿಕಾರಿಗಳು ಶೀಘ್ರವಾಗಿ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT