ಸೋಮವಾರ, ಜನವರಿ 20, 2020
29 °C

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ನಗರದ ಜಮಾಅತ್ ಎ ಇಸ್ಲಾಮಿ ಹಿಂದ್ ಸಂಘಟನೆಯಿಂದ ಗುರುವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು. 

ಪ್ರತಿಭಟನಾ ರ‍್ಯಾಲಿ ಮೂಲಕ ಬಂದ ಪ್ರತಿಭಟನಾಕಾರರು ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಿದ್ದುಪಡಿ ಮಸೂದೆಯನ್ನು ರಾಷ್ಟ್ರಪತಿಗಳು ತಿರಸ್ಕರಿಸಬೇಕು ಎಂದು ಆಗ್ರಹಿಸಿ ಸಂಘಟನೆಯ ಮುಖಂಡ ರಸೂಲ್ ಸೌದಾಗರ್ ನೇತೃತ್ವದಲ್ಲಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದರು. 

‘ಒಂದು ದೇಶ ಒಂದು ಕಾನೂನು ಎನ್ನುವ ಕೇಂದ್ರ ಸರ್ಕಾರ ದೇಶದಲ್ಲಿ ಎರಡು ಕಾನೂನು ಮಾಡಲು ಹೊರಟಿದೆ. ಕೇಂದ್ರ ಸರ್ಕಾರದ ಈ ತಿದ್ದುಪಡಿ ದೇಶದ ನೈತಿಕ, ಸಾಂವಿಧಾನಿಕ ಹಾಗೂ ಜಾತ್ಯಾತೀತ ಪರಂಪರೆಗಳಿಗೆ ವಿರುದ್ಧವಾಗಿದೆ’ ಎಂದು ಪ್ರತಿಭಟನಾನಿರತರು ಆರೋಪಿಸಿದರು. 

‘ಪೌರತ್ವ ಮಸೂದೆ ಧಾರ್ಮಿಕ ನೆಲೆಯ ತಾರತಮ್ಯ ನಮ್ಮ ಸಂವಿಧಾನ ಪರಿಚ್ಛೇದ 14 ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದಗಳ ಉಲ್ಲಂಘನೆಯಾಗಿದೆ’ ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಸಂಘಟನೆಯ ಲಾಲ್‌ಸಾಬ್ ಮುದಗಲ್ಲ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮುಖಂಡರಾದ ಮೆಹಬೂಬ್‌ಸಾಬ್ ಮಂಕಣಿ, ಎಬಿಎಸ್ ಹೀರಾ  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು