ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಬಕವಿ ಬನಹಟ್ಟಿ: ಬಾಳಪ್ಪಜ್ಜನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ

Published 18 ಮೇ 2024, 6:15 IST
Last Updated 18 ಮೇ 2024, 6:15 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಸಮೀಪದ ಕೃಷ್ಣಾ ನದಿಯ ಮಧ್ಯ ಭಾಗದಲ್ಲಿ ಪುರಾತನ ದೇವಸ್ಥಾನವೊಂದಿದ್ದು, ಶತಮಾನಗಳ ಹಿಂದಿನ ಇತಿಹಾಸ ಹೇಳುತ್ತದೆ. ನದಿಗೆ ಸಾಕಷ್ಟು ಬಾರಿ ಪ್ರವಾಹ ಬಂದರೂ ದೇವಸ್ಥಾನ ಮಾತ್ರ ಗಟ್ಟಿಯಾಗಿ ನಿಂತುಕೊಂಡಿದೆ.

ರಬಕವಿಯ ಬಾಳಪ್ಪ ಮರೆಗುದ್ದಿಯವರು ತಾವು ಕೂಡಿಸಿದ ಹಣದಿಂದ ನದಿ ತೀರದಲ್ಲಿ ಜನರಿಗೆ ಅನುಕೂಲವಾಗಲೆಂದು ಈಶ್ವರ ದೇವಸ್ಥಾನ ನಿರ್ಮಿಸಿದ್ದರು.

ಈ ಮೊದಲು ದೇವಸ್ಥಾನ ನದಿಯ ತೀರದಲ್ಲಿತ್ತು. ಮಹೀಷವಾಡಗಿ ಸೇತುವೆ ನಿರ್ಮಾಣವಾದ ನಂತರ ದೇವಸ‍್ಥಾನ ಅರ್ಧದಷ್ಟು ನೀರಿನಲ್ಲಿ ಮುಳಗಿತು. ಹಿಪ್ಪರಗಿ ಬ್ಯಾರೇಜ್ ನಿರ್ಮಾಣದ ನಂತರ ದೇವಸ್ಥಾನ ಸಂಪೂರ್ಣವಾಗಿ ನೀರಿನಲ್ಲಿ ಮುಳಗಿತು. ನದಿ ಸಂಪೂರ್ಣವಾಗಿ ಬತ್ತಿ ದಾಗ ಮಾತ್ರ ದೇವಸ್ಥಾನ ತೆರೆದುಕೊಳ್ಳುತ್ತದೆ.

ಮಳೆಯ ಕೊರತೆಯಿಂದಾಗಿ ಈ ಬಾರಿಯೂ ದೇವಸ್ಥಾನ ಸಂಪೂರ್ಣವಾಗಿ ತೆರೆದುಕೊಂಡಿದೆ.

ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗೆ ಸಂಪರ್ಕ ಬೆಳೆಸುವ ನಿಟ್ಟಿನಲ್ಲಿ ಅಂದಾಜು ₹52 ಕೋಟಿ ವೆಚ್ಚದಲ್ಲಿ ಕೃಷ್ಣಾ ನದಿಗೆ 272 ಮೀಟರ್ ಉದ್ದದ ಸೇತುವೆ ನಿರ್ಮಾಣ ಮಾಡುವ ಕಾಮಗಾರಿ ನಡೆದಿದೆ. ಸದ್ಯ ನದಿಯ ಮಧ್ಯ ಭಾಗದಲ್ಲಿ ಕಂಬಗಳನ್ನು ನಿಲ್ಲಿಸುವ ಕಾಮಗಾರಿ ನಡೆದಿದೆ. ನದಿಯ ಮಧ್ಯ ಭಾಗಕ್ಕೆ ತೆರಳಲು ರಸ್ತೆ ಮಾಡಲಾಗಿದೆ.

ಈಗ ರಸ್ತೆ ನಿರ್ಮಾಣದಿಂದಾಗಿ ದೇವಸ್ಥಾನದ ಸುತ್ತಮುತ್ತ ಬೃಹತ್ ಕಲ್ಲುಗಳು ಬಿದ್ದಿವೆ. ಇನ್ನೂ ಕೆಲವು ಕಲ್ಲುಗಳು ದೇವಸ್ಥಾನದ ಒಳಗಡೆ ಕೂಡಾ ಬಿದ್ದಿವೆ. ಕಲ್ಲು ಮಣ್ಣಿನಿಂದಾಗಿ ದೇವಸ್ಥಾನದ ಪಡಸಾಲೆ ಅರ್ಧದಷ್ಟು ಮುಚ್ಚಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನ ಮುಚ್ಚುವ ಪರಿಸ್ಥಿತಿ ಉಂಟಾಗಲಿದೆ. ಇದರಿಂದ ದೇವಸ್ಥಾನಕ್ಕೆ ಧಕ್ಕೆಯಾಗಲಿದೆ.

‘ಸೇತುವೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ದೇವಸ್ಥಾನಕ್ಕೆ ಧಕ್ಕೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಶತಮಾನಗಳಷ್ಟು ಹಿಂದಿನ ಇತಿಹಾಸ ಹೇಳುವ ದೇವಸ್ಥಾನವನ್ನು ಉಳಿಸುವ ನಿಟ್ಟಿನಲ್ಲಿ ಸೇತುವೆ ನಿರ್ಮಾಣ ಮಾಡುತ್ತಿರುವವರು ಗಮನ ನೀಡಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಾ ಇತ್ತ ಗಮನ ನೀಡಬೇಕು’ ಎಂದು ದಿನನಿತ್ಯ ನದಿ ಸ್ನಾನಕ್ಕೆ ಹೋಗುವ ಅರವಿಂದ ಪತ್ತಾರ, ವಿರೂಪಾಕ್ಷಯ್ಯ ಮಠದ, ಶಾಂತೇಶ ಬಳಗಾರ, ಪಂಚಯ್ಯ ಮಠದ, ಮಹಾದೇವ ಸನ್ಮನಿ ಮತ್ತು ಈಶ್ವರ ಜವಳಗಿ ಆಗ್ರಹಿಸಿದ್ದಾರೆ.

ದೇವಸ್ಥಾನದ ಸ್ಥಿತಿಗತಿ ಪರಿಶೀಲಿಸಿ, ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರ ಕಂಪನಿ ಅಧಿಕಾರಿಗಳ ಗಮನಕ್ಕೂ ತರಲಾಗುವುದು
ಸಂತೋಷ ಕಾಮಗೌಡ, ಉಪವಿಭಾಗಾಧಿಕಾರಿ, ಜಮಖಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT