ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ವಾಡಿಕೆಗಿಂತ ಒಂದೂವರೆಪಟ್ಟು ಹೆಚ್ಚು ಮಳೆ

ಜಿಲ್ಲೆಯ ರೈತಾಪಿ ವರ್ಗದ ಮುಖದಲ್ಲಿ ಮಂದಹಾಸ; ಬಿತ್ತನೆಗೆ ಸಿದ್ಧತೆ
Last Updated 8 ಜೂನ್ 2019, 19:45 IST
ಅಕ್ಷರ ಗಾತ್ರ

ಬಾಗಲಕೋಟೆ: ಹವಾಮಾನ ಇಲಾಖೆ, ತಜ್ಞರ ಎಲ್ಲ ಭವಿಷ್ಯ ಜಿಲ್ಲೆಯ ಮಟ್ಟಿಗೆ ತಲೆಕೆಳಗಾಗಿದೆ. ಜೂನ್ ಮೊದಲ ವಾರದಲ್ಲಿ (ಜೂನ್ 1ರಿಂದ 8) ವಾಡಿಕೆಗಿಂತ ಒಂದೂವರೆ ಪಟ್ಟು ಮಳೆ ಹೆಚ್ಚು ಬಿದ್ದಿದೆ. ಅದರಲ್ಲೂ ಒಣ ಬೇಸಾಯವೇ ಪ್ರಧಾನವಾಗಿರುವ ತಾಲ್ಲೂಕುಗಳಲ್ಲಿಯೇ ಅತಿ ಹೆಚ್ಚು ಮಳೆ ಬಿದ್ದಿದ್ದು, ಜಿಲ್ಲೆಯ ರೈತಾಪಿ ವರ್ಗ ಸಂತಸಗೊಂಡು ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದೆ.

ಜೂನ್ 7ರಂದು ಕೇರಳ ಪ್ರವೇಶಿಸಿರುವ ಮುಂಗಾರು ಅಲ್ಲಿಂದ ಶೀಘ್ರ ಕರ್ನಾಟಕದತ್ತ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಮುಂಗಾರು ಆರಂಭಕ್ಕೆ ಮುನ್ನವೇ ಸ್ಥಳೀಯ ಪರಿಸರಣ ಮಳೆಗಳು ಬೇಸಿಗೆಯ ಧಗೆಯನ್ನು ನಿವಾರಿಸಿವೆ.

ವಾಡಿಕೆಯಂತೆ ಜೂನ್ ಮೊದಲ ವಾರ ಜಿಲ್ಲೆಯಲ್ಲಿ 46.1 ಮಿಲಿ ಮೀಟರ್ ಮಳೆಯಾಗಬೇಕಿದೆ. ಆದರೆ 41.8 ಮಿಲಿ ಮೀಟರ್ ಅದೂ ಎಲ್ಲ ಕಡೆಯೂ ಹದ ಮಳೆಯಾಗಿದೆ. ಅದರಲ್ಲೂ ಒಣಬೇಸಾಯವನ್ನೇ ಹೆಚ್ಚಿನ ಪ್ರಮಾಣದಲ್ಲಿ ನೆಚ್ಚಿಕೊಂಡಿರುವ ಬಾಗಲಕೋಟೆ, ಬಾದಾಮಿ, ಬೀಳಗಿ, ಹುನಗುಂದ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ. ಮುಧೋಳ ಹಾಗೂ ಜಮಖಂಡಿ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕೊಂಚ ಹೆಚ್ಚು ಮಳೆಯಾಗಿದೆ.

ಹಗಲು ಬಿಸಿಲು, ರಾತ್ರಿ ಬಿರು ಮಳೆ;ಕಳೆದ ನಾಲ್ಕು ದಿನಗಳಲ್ಲಿ ನಿತ್ಯ ರಾತ್ರಿ ಮಳೆ ಬರುತ್ತಿದೆ. ಹಗಲು ಹೊತ್ತು ಬಿಸಿಲು ಕಾಣಿಸಿಕೊಂಡರೆ ರಾತ್ರಿ ಮಾತ್ರ ಪ್ರಕೃತಿ ರೌದ್ರವ ರೂಪ ತಾಳುತ್ತಿದೆ. ಮಿಂಚು,ಗುಡುಗು, ಸಿಡಿಲ ಆರ್ಭಟದ ಜೊತೆ ಜೋರು ಗಾಳಿಯೂ ಸಾಥ್ ನೀಡುತ್ತಿದೆ. ಹಗಲು ಸಾಂದ್ರಗೊಂಡ ಮೋಡಗಳು ರಾತ್ರಿ ಹನಿಯಾಗುತ್ತಿವೆ. ಮಳೆಯ ಆರ್ಭಟಕ್ಕೆ ಕೆಲವೆಡೆ ಮರಗಳು ನೆಲಕಚ್ಚಿದರೆ, ಬಹುತೇಕ ಕಡೆ ಮರದ ಟೊಂಗೆಗಳು ಮುರಿದು ಬೀಳುತ್ತಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳುವುದು, ಹಳ್ಳಿ, ಪಟ್ಟಣ, ನಗರಪ್ರದೇಶ ಕತ್ತಲೆಯಲ್ಲಿ ಮುಳುಗುವುದು ಸಾಮಾನ್ಯ ಎಂಬಂತಾಗಿದೆ.

ಮಳೆ ಹನಿದ ಪರಿಣಾಮ ಕೆಲವೆಡೆ ಹಳ್ಳ–ಕೊಳ್ಳಗಳು ತುಂಬಿ ಹರಿದಿದ್ದು, ಹೊಲಗಳಲ್ಲಿ ನೀರು ನಿಂತಿದೆ. ಬಾಗಲಕೋಟೆ ತಾಲ್ಲೂಕಿನ ಘಟಪ್ರಭಾ ನದಿ ಆಸುಪಾಸಿನಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಕೃಷಿ ಹೊಂಡಗಳು ಜೀವ ಪಡೆದಿವೆ. ಕೊಳವೆಬಾವಿಗಳು ಮರುಪೂರಣಗೊಂಡು ಕುಡಿಯುವ ನೀರಿನ ಸಮಸ್ಯೆ ಒಂದಷ್ಟು ಪರಿಹಾರವಾಗಲಿದೆ.

ಮಳೆಗಾಳಿಗೆ ಅಲ್ಲಲ್ಲಿ ಹಾನಿ;ಬಾಗಲಕೋಟೆ ತಾಲ್ಲೂಕಿನ ಕಿರಸೂರ ಹಾಗೂ ತುಳಸಿಗೇರಿಯಲ್ಲಿ ಮಳೆಗೆ ಗೋಡೆ ಕುಸಿದು ತಲಾ ಒಂದು ಎಮ್ಮೆ ಮೃತಪಟ್ಟಿವೆ. ಹಿರೇಗುಲಬಾಳದಲ್ಲಿ ಎರಡು ಆಡುಗಳು ಸಾವನ್ನಪ್ಪಿವೆ. ಹಾಗೂ ಕಲಾದಗಿಯಲ್ಲಿ ಮೂರ್ನಾಲ್ಕು ಮನೆಗಳ ಮೇಲೆ ಮರಗಳು ಉರುಳಿಬಿದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

*
ಜಿಲ್ಲೆಯಲ್ಲಿ ಮಳೆ ಶುಭಾರಂಭ ಮಾಡಿದೆ. ಜೂನ್ ಮೊದಲ ವಾರದ ವಾತಾವರಣವೇ ಇನ್ನೂ ನಾಲ್ಕು ತಿಂಗಳು ಮುಂದುವರೆಯಲಿ. ನಾವು ರೈತಾಪಿ ಜನರಾದರೂ ಉಳಿಯುತ್ತೇವೆ. ಲೋಕಕ್ಕೂ ಕಲ್ಯಾಣವಾಗಲಿದೆ.
-ಶಂಕರಪ್ಪ ಅರಬಗೊಂಡ, ಹುನಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT