ಭಾನುವಾರ, ಅಕ್ಟೋಬರ್ 25, 2020
21 °C
ಬ್ಯಾರೇಜ್ ನಿರ್ಮಿಸಿದರೆ ಪ್ರವಾಹ ನಿಯಂತ್ರಣ

‘ರಿವರ್ಸ್ ಲಿಫ್ಟಿಂಗ್ ಮಾಡಿ ಮಲಪ್ರಭಾ ನದಿ ತುಂಬಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಮಖಂಡಿ: ಮಲಪ್ರಭಾ ನದಿ ಒತ್ತುವರಿಯನ್ನು ಶಿಘ್ರವೇ ತೆರವುಗೊಳಿಸಿ, ನಿರಂತರ ಹರಿವು ಕಾಯ್ದುಕೊಳ್ಳಲು ಕೂಡಲಸಂಗಮದಿಂದ ರಿವರ್ಸ್ ಲಿಫ್ಟಿಂಗ್ ಮಾಡಿ ನದಿ ತುಂಬಿಸಬೇಕು ಎಂದು ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಂಗಮೇಶ ನಿರಾಣಿ ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಲಪ್ರಭಾ ನದಿ ಕೂಡಲಸಂಗಮದಲ್ಲಿ ಕೃಷ್ಣೆಯನ್ನು ಸೇರುತ್ತದೆ. ನಾರಾಯಣಪೂರ ಜಲಾಶಯದ ಹಿನ್ನೀರು ಸಂಗಮದವರೆಗೂ ವ್ಯಾಪಿಸಿದೆ. ನವಿಲುತೀರ್ಥದಿಂದ ಸಂಗಮದವರೆಗೂ 2-3 ಕಿ.ಮೀಗೆ ಚೆಕ್‌ಡ್ಯಾಂಗಳನ್ನು ಕಟ್ಟಿ, ಸಂಗಮದಿಂದ ರಿವರ್ಸ್ ಲಿಫ್ಟಿಂಗ್ ಮೂಲಕ ಭರ್ತಿ ಮಾಡಿದಲ್ಲಿ ಮಲಪ್ರಭೆ ಪಾತ್ರ ಹಿರಿದಾಗಿ ನದಿ ಸಮೃದ್ಧಿಯಾಗುತ್ತದೆ ಎಂದರು.

ಮಲಪ್ರಭಾ ನದಿಗೆ ಕೊರತೆಯಾಗುವ ನೀರನ್ನು ಮಹಾದಾಯಿ, ಕಾಳಿ, ಘಟಪ್ರಭಾ ಹಾಗೂ ಕೃಷ್ಣ ನದಿಗಳ ಮೂಲಕ ನೀಗಿಸಬಹುದು. ಎಂ.ಆರ್.ಎನ್ (ನಿರಾಣಿ) ಫೌಂಡೇಷನ್ ಮೂಲಕ 3 ಯೋಜನೆಗಳ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಮೃತಧಾರೆ ಯೋಜನೆಯಡಿ ಕಾಳಿ ನದಿಯಿಂದ ಮಲಪ್ರಭಾಗೆ ಕಡಿಮೆ ವಿದ್ಯುತ್ ಬಳಸಿ ಕಾಲುವೆ ಮೂಲಕ ಅಥವಾ ರಸ್ತೆ ಬದಿ ಏತ ನೀರಾವರಿ ಪದ್ಧತಿ ಪೈಪಲೈನ್ ಮೂಲಕ 30 ಟಿಎಂಸಿ ಅಡಿ ನೀರು ಹರಿಸಬಹುದು.

ವಿಜಯಧಾರೆ ಯೋಜನೆ ಮೂಲಕ ಹಿರಣ್ಯಕೇಶಿ ನದಿ ನೀರನ್ನು ಹಿಡಕಲ್ ಜಲಾಶಯಕ್ಕೆ ವಾರ್ಷಿಕ 10 ಟಿ.ಎಂ.ಸಿ ಅಡಿ ನೀರು ಹರಿಸಿದರೆ ಅಲ್ಲಿಂದ 60 ಕಿ.ಮೀ. ಉದ್ದದ ಗ್ರ್ಯಾವಿಟಿ ಕಾಲುವೆ ಮೂಲಕ ಮಲಪ್ರಭಾಗೆ ಸೇರಿಸಬಹುದು. ಪ್ರತಿವರ್ಷ ಬೆಣ್ಣಿಹಳ್ಳ ಹಾಗೂ ತುಪರಿಹಳ್ಳಕ್ಕೆ ಪ್ರವಾಹ ಬರುತ್ತದೆ. ಕೆಲವು ಬಾರಿ ಈ ಪ್ರವಾಹ ಅವಾಂತರ ಸೃಷ್ಟಿಸುತ್ತದೆ. ಅದ್ದರಿಂದ ಎರಡೂ ಹಳ್ಳಗಳಿಗೆ ಬ್ಯಾರೇಜ್‌ಗಳನ್ನು ನಿರ್ಮಿಸುವುದರಿಂದ ಪ್ರವಾಹದ ನಿಯಂತ್ರಣ ಹಾಗೂ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ. ಈ ಮೂಲಕ ಜಲಾನಯನ ಪ್ರದೇಶದ ನೀರಿನ ಕೊರತೆಯನ್ನೂ ನಿಗಿಸಬಹುದು ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು