ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಮಾಯ; ಹೊಂಡ, ಗುಂಡಿಯೇ ಎಲ್ಲ

ಜಿಲ್ಲೆಯ ಜೀವನಾಡಿಯಾದ ರಸ್ತೆಗಳು ಸಂಪೂರ್ಣ ಹಾಳು
Last Updated 19 ಅಕ್ಟೋಬರ್ 2020, 3:20 IST
ಅಕ್ಷರ ಗಾತ್ರ

ಬಾಗಲಕೋಟೆ: ದೇಶದ ಯೋಜಿತ ನಗರ ಎಂದೇ ಖ್ಯಾತಿ ಹೊಂದಿರುವ ಇಲ್ಲಿನ ನವನಗರ ಹಾಗೂ ಹಳೆ ಬಾಗಲಕೋಟೆ ರಸ್ತೆಗಳು ಸಂಪೂರ್ಣ ಹಾಳಾಗಿವೆ.

ವಾಹನ ಸವಾರರು ಮಾತ್ರವಲ್ಲ ಪಾದಚಾರಿಗಳು ಸರ್ಕಸ್ ಮಾಡುತ್ತಲೇ ರಸ್ತೆಯಲ್ಲಿ ಸಂಚರಿಸಬೇಕಿದೆ. ಹೆಜ್ಜೆ ಗೊಂದರಂತೆ ಒಡಮೂಡಿರುವ ತಗ್ಗು ಸುಲಲಿತ ಸವಾರಿಯನ್ನು ಕನಸಾಗಿಸಿದೆ.

ನವನಗರದ ಒಳ ರಸ್ತೆಗಳಲ್ಲಿ ಸಂಚರಿಸಿದರೆ ರಸ್ತೆಗಳ ದುಸ್ಥಿತಿ ಕಾಣಸಿಗುತ್ತದೆ. ಜಿಲ್ಲೆಯ ಇತರೆ ಕಡೆಗೆ ಹೋಲಿಸಿದರೆ ಇಲ್ಲಿ ರಸ್ತೆಗಳು ಮೊದಲು ಚೆನ್ನಾಗಿದ್ದವು. ಈ ಬಾರಿ ನಿರಂತರ ಮಳೆ ರಸ್ತೆಗಳನ್ನು ಹದಗೆಡಿಸಿದೆ. ಇಲ್ಲಿನ ರಸ್ತೆ ಜಾಲ ಹಾಗೂ ಚರಂಡಿಗಳ ದುರಸ್ತಿಗಾಗಿಯೇ ಸರ್ಕಾರ ಬಿಡುಗಡೆ ಮಾಡಿರುವ ₹133 ಕೋಟಿ ಅನುದಾನ ಬ್ಯಾಂಕ್ ಖಾತೆಯಲ್ಲಿದ್ದು, ಮಳೆಗಾಲ ಮುಗಿದ ನಂತರ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳುತ್ತಾರೆ.

ನಿರ್ವಹಣೆಯ ಕೊರತೆ: ಸೊರಗಿದ ರಸ್ತೆಗಳು

ಜಮಖಂಡಿ: ತಾಲ್ಲೂಕಿನಲ್ಲಿ ಈ ವರ್ಷವೂ ಭಾರಿ ಪ್ರಮಾಣದಲ್ಲಿ ಮಳೆಯಾಗಿರುವಪರಿಣಾಮ ರಾಜ್ಯ ಹೆದ್ದಾರಿ, ಜಿಲ್ಲಾ ಪ್ರಮುಖ ರಸ್ತೆ, ಗ್ರಾಮೀಣ ರಸ್ತೆಗಳು, ನಗರ ರಸ್ತೆಗಳು ಹೊಂಡ ಬಿದ್ದಿವೆ. ಹಲವು ಕಡೆಗಳಲ್ಲಿ ವಾಹನದಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿಯಿದೆ. ಸಂಚರಿಸಲು ಹರಸಾಹಸ ಪಡಬೇಕಾಗಿದೆ.

ಇಲ್ಲಿನ ಬಸವೇಶ್ವರ ವೃತ್ತ, ಶಿವಾಜಿ ವೃತ್ತ, ಮಟನ್ ಮಾರ್ಕೆಟ್, ಕುಡಚಿ ರಸ್ತೆ ಸೇರಿದಂತೆ ಹಲವು ರಸ್ತೆಗಳು ಪ್ರಯಾಣಕ್ಕೆ ದುಸ್ತರವಾಗಿವೆ.ಗರ್ಭಿಣಿಯರು, ತುರ್ತು ಚಿಕಿತ್ಸೆ ಬೇಕಿರುವ ರೋಗಿಗಳು, ಹಿರಿಯರು ವಾಹನದಲ್ಲಿ ಸಂಚರಿಸಲು ಕಷ್ಟಪಡಬೇಕಿದೆ.

ಹೊಂಡಮಯ ರಸ್ತೆಯಿಂದಾಗಿ ನಿತ್ಯ ನಗರದಲ್ಲಿ ಸಂಚರಿಸುವ ಎಲ್ಲರೂ ಯಾತನೆ ಅನುಭವಿಸುತ್ತಿದ್ದಾರೆ. ಅಪಘಾತಗಳು ಸಾಮಾನ್ಯ ಸಂಗತಿಗಳಾಗಿವೆ.

ಕಾರು, ಆಟೊ ಸೇರಿದಂತೆ ಸಣ್ಣ ವಾಹನಗಳು ಈ ರಸ್ತೆಯಲ್ಲಿ ಚಲಿಸುವುದು ಹರಸಾಹಸವಾಗಿದೆ ಎನ್ನುತ್ತಾರೆ ಕಾರಿನ ಚಾಲಕರು.

ದೇಸಾಯಿ ವೃತ್ತದಿಂದ ಹುನ್ನೂರ ಗ್ರಾಮದವರೆಗೆ 4 ಕಿ.ಮೀ ರಸ್ತೆಯನ್ನು ಆರು ತಿಂಗಳಿಂದ ದುರಸ್ತಿ ಮಾಡುತ್ತಿದ್ದಾರೆ. ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಜಮಖಂಡಿಗೆ ಬರುವವರಿಗೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಮುಗಿಸಬೇಕು ಎಂದು ಹುನ್ನೂರ ನಿವಾಸಿ ರಮೇಶ ಕಡ್ಲಿ ಒತ್ತಾಯಿಸುತ್ತಾರೆ.

ನಗರದ ತುಂಬೆಲ್ಲ ರಸ್ತೆಗಳು ಸಂಪೂರ್ಣವಾಗಿ ಕೆಟ್ಟಿವೆ. ಕಾಲೊನಿಗಳಲ್ಲಾದರು ತಾತ್ಕಾಲಿಕವಾಗಿ ದುರಸ್ತಿ ಮಾಡಬೇಕು ಎನ್ನುತ್ತಾರೆ ಶಿವಾನಂದ ಬಬಲೇಶ್ವರ, ಸುನೀಲ ಬಳೋಲಗಿಡದ, ಶಿವಲಿಂಗ ನಾಗನೂರ.

ಹದಗೆಟ್ಟ ಮ್ಯೂಸಿಯಂ ರಸ್ತೆ; ನರಕ ದರ್ಶನ

ಬಾದಾಮಿ : ಪಟ್ಟಣದಲ್ಲಿ ಚಾಲುಕ್ಯರ ಸ್ಮಾರಕಗಳ ಸಂಪರ್ಕದ ಮ್ಯೂಸಿಯಂ ರಸ್ತೆ ಸಂಫೂರ್ಣವಾಗಿ ಹದಗೆಟ್ಟಿದೆ. ಸ್ಥಳೀಯರು ಜೀವದ ಭಯದಿಂದ ಸಂಚರಿಸುವಂತಾಗಿದೆ.

ಟಾಂಗಾ ನಿಲ್ದಾಣದಿಂದ ಮ್ಯೂಸಿಯಂವರೆಗೆ ಒಡೆದು ಹಾಳಾದ ಸಿಸಿ ರಸ್ತೆ ಮಧ್ಯದಲ್ಲಿ ದೊಡ್ಡ ಗುಂಡಿಗಳು, ರಸ್ತೆಗಿಂದ ಎತ್ತರದ ಒಳಚರಂಡಿ ಮ್ಯಾನ್‌ಹೋಲ್, ಕಲ್ಲು, ಮಣ್ಣಿನ ತ್ಯಾಜ್ಯ ಆವರಿಸಿದೆ.

2014-15 ರಲ್ಲಿ ಕೇಂದ್ರಸರ್ಕಾರದ ಹೃದಯ ಯೋಜನೆಯಲ್ಲಿ ಬೆಟ್ಟದ ಕಲ್ಲುಗಳನ್ನು ಜೋಡಿಸುವಂತೆ ₹ 71.38 ಲಕ್ಷ ವೆಚ್ಚದಲ್ಲಿ ಪಾರಂಪರಿಕ ರಸ್ತೆ ನಿರ್ಮಾಣ ಕಾಮಗಾರಿ ಮಂಜೂರಾಗಿತ್ತು. ಆದರೆ ಸ್ಥಳೀಯರು ಕಾಂಕ್ರೀಟ್ ರಸ್ತೆ ಬೇಡಿಕೆ ಇಟ್ಟಿದ್ದರಿಂದ ಕಾಮಗಾರಿ ಸ್ಥಗಿತವಾಗಿದೆ.

‘ ಮೊದಲು ಚಿಕ್ಕ ಚರಂಡಿ ಇತ್ತು. ಎರಡು ವಾಹನಗಳು ಹೋಗುತ್ತಿದ್ದವು. ಹೃದಯ ಯೋಜನೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ದೊಡ್ಡ ಚರಂಡಿ ಮಾಡಿ ರಸ್ತೆ ಅಗಲ ಕಡಿಮೆಯಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆ ಮಾಡದೇ ನಾಲ್ಕು ವರ್ಷ ಗತಿಸಿದೆ ‘ ಎಂದು ಸ್ಥಳೀಯ ನಿವಾಸಿ ರಾಜು ಭೋಪಡೆಕರ ಹೇಳಿದರು.

ಸ್ಥಳೀಯ ನಗರ ಅಭಿವೃದ್ಧಿ ಹೋರಾಟ ಸಮಿತಿ ಮ್ಯೂಸಿಯಂ ರಸ್ತೆ ಅಭಿವೃದ್ಧಿಗೆ ಶಾಸಕ ಸಿದ್ದರಾಮಯ್ಯ ಅವರಿಗೆ ಎರಡು ವರ್ಷಗಳ ಹಿಂದೆ ಮನವಿ ಸಲ್ಲಿಸಿದೆ. ಸ್ವತಃ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಮಾಡಲು ಅಧಿಕಾರಿಗಳಿಗೆ ಹೇಳಿ ಎಂಟು ತಿಂಗಳು ಗತಿಸಿದೆ.

ಈ ರಸ್ತೆ ಮ್ಯೂಸಿಯಂ, ಭೂತನಾಥ ದೇವಾಲಯ, ಉತ್ತರ ದಿಕ್ಕಿನ ಕೋಟೆ ಮೇಲಿರುವ ಶಿವಾಲಯ, ವಾತಾಪಿ ಗುಡಿ, ಮಲ್ಲಿಕಾರ್ಜುನ ಗುಡಿ, ವೀರಭದ್ರೇಶ್ವರ ಗುಡಿ, ಅಗಸ್ತ್ಯತೀರ್ಥ, ಕಪ್ಪೆಅರಭಟ್ಟನ ಶಾಸನ, ಜೋಡಿ ಜಲಪಾತ, ಕಾರಂಜಿ ವೀಕ್ಷಣೆ ಮತ್ತು ತಟಕೋಟೆ ಗ್ರಾಮ ಸಂಪರ್ಕಿಸುತ್ತದೆ.

ಮಳೆಗಾಲದಲ್ಲಿ ಜಲಪಾತ ಮತ್ತು ಕಾರಂಜಿ ವೀಕ್ಷಿಸಲು ನಿತ್ಯ ಸಾವಿರಾರು ವಾಹನಗಳು ಮತ್ತು ಪಾದಚಾರಿಗಳು ಇದೇ ರಸ್ತೆಯಲ್ಲಿ ಹೋಗಬೇಕಿದೆ. ಅನೇಕ ಬಾರಿ ರಸ್ತೆ ಸಂಚಾರ ಸ್ಥಗಿತವಾಗಿದ್ದನ್ನು ಸ್ಮರಿಸಬಹುದು.

‘ ಸ್ಮಾರಕಗಳನ್ನು ವೀಕ್ಷಿಸಲು ಬಂದ ಪ್ರವಾಸಿಗರು ಶಾಸಕರನ್ನು ಮತ್ತು ಸಂಸದರನ್ನು ಶಪಿಸಿ ಹೋಗುತ್ತಿದ್ದಾರೆ. ಸ್ಮಾರಕಗಳ ಸಂಪರ್ಕ ರಸ್ತೆ ಸೌಕರ್ಯ ಕಲ್ಪಿಸಬೇಕಿದೆ ‘ ಎಂದು ಹೋರಾಟ ಸಮಿತಿ ಅಧ್ಯಕ್ಷ ಮಲ್ಣಣ್ಣ ಹಿರೇಹಾಳ ಪತ್ರಿಕೆಗೆ ಹೇಳಿದರು.

ಇಳಕಲ್: ರಸ್ತೆ ಮೇಲೆ ಸರ್ಕಸ್ ಸಾಮಾನ್ಯ

ಇಳಕಲ್ : ಮೊದಲೇ ಹಾಳಾಗಿದ್ದ ನಗರದ ಪ್ರಮುಖ ರಸ್ತೆಗಳು ಈಚೆಗೆ ಸುರಿದ ಮಳೆಯಿಂದಾಗಿ ಅಕ್ಷರಶಃ ಹೊಂಡಗಳಾಗಿವೆ.

ಇಲ್ಲಿನ ಕಂಠಿ ವೃತ್ತದಿಂದ ಬಸ್ ನಿಲ್ದಾಣ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗಿನ ದ್ವಿಪಥ ರಸ್ತೆಯು ಎಡಭಾಗದಲ್ಲಿ ಕುಸಿದು ಹಾಳಾಗಿದೆ. ಮುಖ್ಯ ರಸ್ತೆಯ ಗುಂಡಿಗಳನ್ನು ಮುಚ್ಚಲು ನಗರಸಭೆಯಿಂದ ಆಗಾಗ ಗರಸು ಹಾಕುತ್ತಿದೆ. ಪರಿಣಾಮವಾಗಿ ಕೆಸರು, ಧೂಳು ಇಲ್ಲಿ ಸಾಮಾನ್ಯ. ಈ ಹಿಂದೆ ನಗರದಲ್ಲಿ ನಡೆದಿದ್ದ ಒಳಚರಂಡಿ ಕಾಮಗಾರಿಯ ಬಳಿಕ ರಸ್ತೆಗಳನ್ನು ಪುನರ್ ನಿರ್ಮಾಣ ಮಾಡದ ಕಾರಣ ಅನೇಕ ರಸ್ತೆಗಳು ಹೀಗೆಯೇ ಕುಸಿದಿವೆ.

ಗೊರಬಾಳ ನಾಕಾದಿಂದ ಕಿಲ್ಲಾ ಮೂಲಕ ಮುಖ್ಯ ಬಜಾರ್, ವಿಜಯ ಮಹಾಂತೇಶ ಮಠ ತಲುಪುವ ರಸ್ತೆಯಲ್ಲಿ ನೂರಾರು ಗುಂಡಿಗಳಿವೆ. ಸದಾ ದಟ್ಟಣೆ ಇರುವ ಈ ರಸ್ತೆಯು ಹಾಳಾದ ಕಾರಣ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಮಳೆಗಾಲದಲ್ಲಿ ಇಲ್ಲಿ ಹೋಗುವುದು ಇನ್ನೂ ಅಪಾಯ.
ಗೌಳೇರಗುಡಿ (ನವನಗರ) ವಾರ್ಡ್‌ನಲ್ಲಿ ಜನ ಮನೆಯಿಂದ ಹೊರಗೆ ಕಾಲಿಡಲು ಆಗದಷ್ಟು ಕೆಸರು ತುಂಬಿದೆ. ಇಲ್ಲಿ ರಸ್ತೆಗಳೇ ಇಲ್ಲ. ಇಲ್ಲಿಯ 25 ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ತಲುಪುವುದು ನಗರದ ಇತರ ಭಾಗದ ನಿವಾಸಿಗಳಿಗೆ ಸುಲಭವಲ್ಲ. ಈ ಬಗ್ಗೆ ಪೌರಾಯುಕ್ತರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಜನರೊಂದಿಗೆ ಸೇರಿ ಹೋರಾಟ ಮಾಡಕ್ಕಿಳಿಯಬೇಕಾಗುತ್ತದೆ ಎಂದು ಈ ವಾರ್ಡ್ ಸದಸ್ಯೆ ರೇಷ್ಮಾ ಮಾರನಬಸರಿ ಎಚ್ಚರಿಸಿದ್ದಾರೆ.

ನಗರ ದಕ್ಷಿಣ ಭಾಗದಲ್ಲಿರುವ ಖಬರಸ್ತಾನಕ್ಕೆ ಹೋಗುವುದಕ್ಕೆ ರಸ್ತೆಯೇ ಇಲ್ಲ. ಮಳೆ ಸುರಿದ ಸಂದರ್ಭದಲ್ಲಿ ಸಂಚರಿಸಲು ಸಾಧ್ಯವಾಗದಷ್ಟು ಕೆಸರು ಇದೆ. ಜತೆಗೆ ಮುಳ್ಳು ಕಂಟಿಗಳು ಬೆಳೆದಿವೆ. ಮುಸ್ಲಿಂ ಮುಖಂಡರು ಅನೇಕ ಸಲ ಮನವಿ ಮಾಡಿದರೂ ನಗರಸಭೆ ಪೌರಾಯುಕ್ತರು ಸ್ಮಂದಿಸಿಲ್ಲ ಎಂದು ಜಿಲ್ಲಾ ವಕ್ಫ್ ಕಮೀಟಿ ಸದಸ್ಯ ಸುಲೇಮಾನ್ ಚೋಪದಾರ ಆರೋಪಿಸಿದರು.

ಜೋಶಿಗಲ್ಲಿಯಲ್ಲಿ ಕಡಪಟ್ಟಿ ಆಸ್ಪತ್ರೆಯಿಂದ ಮೋಹನ ಹೊಸಮನಿ ಅವರ ಮನೆಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಗಟಾರ ಇಲ್ಲದ ಕಾರಣ ನೀರು ರಸ್ತೆ ಮೇಲೆ ಹರಿದು ಅಡಿಯಷ್ಟು ಆಳದ ಕಂದಕ ಬಿದ್ದಿದೆ.

ಎಚ್.ಪಿ. ಗ್ಯಾಸ್ ಗೋಡಾನ್‍ನಿಂದ ಅಂಬೇಡ್ಕರ್ ವೃತ್ತದವರೆಗೆ ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಆತಿಕ್ರಮಿಸಿದ್ದ ಮನೆಗಳನ್ನು ತೆರವುಗೊಳಿಸಿದ್ದರೂ 1 ವರ್ಷದಿಂದ ಸಿ.ಸಿ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಕಳೆದ ಎರಡು ವರ್ಷಗಳಿಂದ ನಗರಸಭೆಯಲ್ಲಿ ಆಡಳಿತ ಮಂಡಳಿ ಇರಲಿಲ್ಲ. ಅಧಿಕಾರಿಗಳು ಜನರ ದನಿಯನ್ನು ಆಲಿಸಲಿಲ್ಲ. ಕೇಲವು ರಸ್ತೆಗಳು ಹಾಳಾಗಿದ್ದರೂ ದುರಸ್ತಿ ಮಾಡಿಲ್ಲ.


ಕೆಲವು ಮುಖ್ಯ ರಸ್ತೆಗಳನ್ನು ಸಿಸಿ ರಸ್ತೆಯಾಗಿಸುವ ಉತ್ತಮ ಕಾರ್ಯಗಳೂ ನಡೆದಿವೆ. ಗಾಯತ್ರಿ ಫ್ಯಾಕ್ಟರಿಯಿಂದ ವಾಲ್ಮೀಕಿ ಮಂದಿರದವರೆಗೆ ರಸ್ತೆ ಸೇರಿದಂತೆ ಕೆಲವು ಕಡೆ ಉತ್ತಮ ಗುಣಮಟ್ಟದ ಸಿ.ಸಿ ರಸ್ತೆ ಆಗಿವೆ. ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲದಲ್ಲಿ ದರ್ಗಾದಿಂದ ಕಳ್ಳಿಗುಡ್ಡ ಡಾಬಾದವರೆಗೆ ಸರ್ವಿಸ್ ರಸ್ತೆ ನಿರ್ಮಾಣ ಕಾರ್ಯ ನಡೆದಿದೆ. ಆದರೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT