ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯುಸಿ ಪರೀಕ್ಷೆ: ಸೋದರತ್ತೆ ದುಡಿಮೆಗೆ ಸೊಸೆಯ ಅಂಕಗಳ ಹಿರಿಮೆ

ಜಿಲ್ಲೆಗೆ ವಾಣಿಜ್ಯ ವಿಭಾಗದಲ್ಲಿ 3ನೇ, ರಾಜ್ಯಕ್ಕೆ 9ನೇ ರ್‍ಯಾಂಕ್
ಅಮರ ಇಂಗಳೆ
Published 17 ಏಪ್ರಿಲ್ 2024, 4:49 IST
Last Updated 17 ಏಪ್ರಿಲ್ 2024, 4:49 IST
ಅಕ್ಷರ ಗಾತ್ರ

ತೇರದಾಳ: ತಂದೆ ತೀರಿ ಹೋದ ನಂತರ ಗಂಡು ಮಗನಂತೆ ಮನೆಯ ಜವಾಬ್ದಾರಿಯನ್ನು ಹೊತ್ತು ನಿಭಾಯಿಸಿದ ಮಹಿಳೆಯ ಮುಖದಲ್ಲಿ ಮಂದಾಹಾಸ ತುಂಬಿತ್ತು, ಹಗಲಿರುಳು ಕೂಲಿ ಮಾಡಿ ದಣಿದ ಸೋದರತ್ತೆಯ ಜೀವಕ್ಕೆ ಸೊಸೆ ಪಡೆದ ಅಂಕಗಳು ನಿರಾಳತೆಯನ್ನು ತಂದಿತ್ತು. ಖುಷಿಯಲ್ಲಿ ಮಾತು ಬಾರದೆ ಆನಂದ ಭಾಷ್ಪಗಳೆ ಮಾತಾಗಿದ್ದ ಸಂದರ್ಭ ತೇರದಾಳದ ಅಕ್ಷತಾ ಜಯವಂತ ಸಾರಾಪೂರ ಮನೆಯಲ್ಲಿ ಮೂಡಿತ್ತು.

ಪಟ್ಟಣದ ಜೆ.ವಿಮಂಡಳದ ಸ್ವತಂತ್ರ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿ ರಾಜ್ಯಕ್ಕೆ 9ನೇ, ಜಿಲ್ಲೆಗೆ 3ನೇ ಹಾಗೂ ತಾಲ್ಲೂಕಿಗೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿ ಅಕ್ಷತಾ ಜಯವಂತ ಸಾರಾಪೂರ ಅವರ ಕಥೆಯಿದು.

ಬಾಲ್ಯದಲ್ಲಿಯೇ ತಂದೆ ಜಯವಂತನನ್ನು ಕಳೆದುಕೊಂಡ, ಅಂಗವಿಕಲ ತಮ್ಮ, ಆಸರೆಗೆ ಇರುವ ಒಂದೇ ಚಿಕ್ಕ ಮನೆ. ತಾಯಿ ಸೇರಿದಂತೆ ನಾಲ್ಕು ಜನರ ಕುಟುಂಬ. ವಿಧವೆಯಾಗಿ ತವರು ಮನೆ ಸೇರಿದ್ದ ಸೋದರತ್ತೆ (ಅಪ್ಪನ ಅಕ್ಕ) ಸುಶೀಲಾ ಬೆಳಗಲಿ ಬಡತನದ ಮಧ್ಯ ಕುಟುಂಬವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದರು. ಬೇರೆಯವರ ಜಮೀನುಗಳಲ್ಲಿ ದಿನಗೂಲಿ ಮಾಡುತ್ತ ನಾಲ್ಕು ಜನರ ಹೊಟ್ಟೆ, ಬಟ್ಟೆ, ಶಿಕ್ಷಣದ ಖರ್ಚನ್ನು ನಿಬಾಯಿಸುತ್ತಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ಕೆಲಸವಿಲ್ಲದಿದ್ದಾಗ ಕುಟುಂಬ ನಡೆಸುವುದು ದುಸ್ತರವಾದಾಗಲೂ ಅಕ್ಷತಾಳಿಗೆ ಆನಲೈನ್ ಕ್ಲಾಸ್‌ ಹಾಜರಾಗಲು ಮೊಬೈಲ್ ಕೊಡಿಸಿದ್ದರು.

ಪಠ್ಯದ ಜೊತೆಗೆ ಪಠ್ಯೇತರ ವಿಷಯದಲ್ಲೂ ಆಸಕ್ತಿ ಹೊಂದಿದ್ದಾರೆ. ಅಕ್ಷತಾ ಕನ್ನಡ, ಇತಿಹಾಸ ಹಾಗೂ ಅರ್ಥಶಾಸ್ತ್ರಗಳಲ್ಲಿ 100 ಅಂಕಗಳನ್ನು, ಇಂಗ್ಲಿಷ್‌ನಲ್ಲಿ 95, ವ್ಯವಹಾರ ಅಧ್ಯಯನದಲ್ಲಿ 98 ಹಾಗೂ ಲೆಕ್ಕಶಾಸ್ತ್ರದಲ್ಲಿ 96 ಅಂಕಗಳನ್ನು ಪಡೆದಿದ್ದಾರೆ.

ಮುಂದೆ ಓದಿ ಸಿ.ಎ ಇಲ್ಲವೆ ಐಎಎಸ್ ಮಾಡುವ ಗುರಿಯನ್ನು ಹೊಂದಿರುವ ಅಕ್ಷತಾಳಿಗೆ ಆರ್ಥಿಕ ನೆರವು ಬೇಕಿದೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ಇವರ ಮನೆಗೆ ಭೇಟಿ ನೀಡಿ ಸನ್ಮಾನಿಸಿದರು.

‘ಕುಟುಂಬ ನಿರ್ವಹಿಸಲು ದುಡಿಯುವುದು ನಮಗೆ ಅನಿವಾರ್ಯವಾಗಿತ್ತು. ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದ ಅಕ್ಷತಾಳನ್ನು ಚೆನ್ನಾಗಿ ಓದಿಸಬೇಕೆಂದುಕೊಂಡಿದ್ದೆ. ಈಗ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾಳೆ. ನನ್ನ ಶಕ್ತಿ ಇರುವಷ್ಟು ಓದಿಸುತ್ತೇನೆ’ ಎನ್ನುತ್ತಾರೆ ಅಕ್ಷತಾಳ ಸೋದರತ್ತೆ ಸುಶೀಲಾ ಬೆಳಗಲಿ.

ಪ್ರಥಮ ಪಿಯುಸಿಯಲ್ಲಿ ಕಾಲೇಜಿಗೆ ಎರಡನೇ ಸ್ಥಾನ ಪಡೆದದ್ದು ನಿರಾಸೆಯಾಗಿತ್ತು. ಛಲ ಬಿಡದೆ ದಿನಕ್ಕೆ 5 ಗಂಟೆಗೂ ಅಧಿಕ ಕಾಲ ಅಭ್ಯಾಸ ಮಾಡಿದೆ

–ಅಕ್ಷತಾ ಸಾರಾಪೂರ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT