ರಬಕವಿ ಬನಹಟ್ಟಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಮತ್ತು ಪ್ರದೇಶದ ಜನರಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿ ಅವರು ರಾಜಕಾರಣ ಬಿಟ್ಟು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರೆ ಇಲ್ಲಿಯ ಜನರ ತೊಂದರೆಗಳು ಅರಿವಾಗಲಿವೆ. ಬೆಂಗಳೂರು ಬಿಟ್ಟು ಈ ಭಾಗಗಳಿಗೆ ಮುಖ್ಯಮಂತ್ರಿಗಳು ಭೇಟಿ ನೀಡಬೇಕು ಎಂದು ವಿಧಾನ ಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು.
ಗುರುವಾರ ಸಮೀಪದ ಅಸ್ಕಿ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಶೀಲಿಸಿ ಮಾತನಾಡಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ರಾಜ್ಯ ಸರ್ಕಾರದ ಮಂತ್ರಿಗಳು ಕಟಾಚಾರಕ್ಕೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಕಂದಾಯ ಸಚಿವರ ಭೇಟಿ ಯಾವುದೇ ಪ್ರಯೋಜನ ನೀಡಲಿಲ್ಲ. ರಾಜ್ಯದಲ್ಲಿ ಬಿಜೆಪಿ ಪಕ್ಷವು ಎಂಟು ತಂಡಗಳನ್ನು ರಚನೆ ಮಾಡಿ ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಣೆ ಮಾಡುತ್ತಿದೆ. ತಾಲ್ಲೂಕಿನ ಅಸ್ಕಿ, ಮದನಮಟ್ಟಿ, ತಮದಡ್ಡಿ, ಹಳಿಂಗಳಿ ಹಾಗೂ ಹಿಪ್ಪರಗಿ ಭಾಗಶಃ ಪ್ರದೇಶಗಳು ಸ್ಥಳಾಂತರವಾಗಬೇಕಾಗಿವೆ. ಈ ನಿಟ್ಟಿನಲ್ಲಿ ವಿರೋಧ ಪಕ್ಷದ ಉಪ ನಾಯಕ ಬೆಲ್ಲದ ಅವರು ಸರ್ಕಾರದ ಗಮನ ಸೆಳೆಯಬೇಕು ಎಂದು ಆಗ್ರಹಿಸಿದರು.
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ರಾಜ್ಯ ಸರ್ಕಾರ ಆದಷ್ಟು ಬೇಗನೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದರೆ ನಾನು ಕೂಡಾ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಂತಗೌಡ ಪಾಟೀಲ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ, ಸತ್ಯನಾರಾಯಣ ಹೇಮಾದ್ರಿ, ಭಜಬಲಿ ಕೆಂಗಾಲಿ, ಸುರೇಶ ಅಕ್ಕಿವಾಟ, ಪುಂಡಲೀಕ ಪಾಲಭಾವಿ, ಪಾಂಡುರಂಗ ಸಾಲ್ಗುಡೆ, ವರ್ಧಮಾನ ಕೋರಿ ಸೇರಿದಂತೆ ಅನೇಕರು ಇದ್ದರು.