ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲೂ ಪ್ರಾಚೀನ ಪುಷ್ಕರಣಿ ಭರ್ತಿ

6ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯರಿಂದ ನಿರ್ಮಾಣ: ರೈತರಿಗೆ ಆಸರೆ
ಎಸ್.ಎಂ. ಹಿರೇಮಠ
Published 30 ಮಾರ್ಚ್ 2024, 6:31 IST
Last Updated 30 ಮಾರ್ಚ್ 2024, 6:31 IST
ಅಕ್ಷರ ಗಾತ್ರ

ಬಾದಾಮಿ: ಎಲ್ಲೆಡೆ ನದಿ, ಕೆರೆಗಳು ಬತ್ತಿಹೋಗಿದ್ದು, ನೀರಿಗಾಗಿ ಹಾಹಾಕಾರ ಉಂಟಾಗಿದೆ. ಆದರೆ, ಸಮೀಪದ ಚಾಲುಕ್ಯರ ಕಾಲದ ಐತಿಹಾಸಿಕ ಸ್ಮಾರಕಗಳಾದ ಹಿರೇ ಮಹಾಕೂಟೇಶ್ವರ ಮತ್ತು ಚಿಕ್ಕ ಮಹಾಕೂಟೇಶ್ವರ ದೇವಾಲಯ ಪಕ್ಕದ ಪುಷ್ಕರಣಿಗಳು ಬೇಸಿಗೆಯಲ್ಲೂ ಭರ್ತಿಯಾಗಿವೆ.

ಅಂದಾಜು 40 ಕಿ.ಮೀ. ವಿಸ್ತಾರದ ಇಳಿಜಾರು ಕಣಿವೆ ಪ್ರದೇಶದಲ್ಲಿ ಚಾಲುಕ್ಯ ದೊರೆಗಳು ಕ್ರಿ.ಶ 6ನೇ ಶತಮಾನದಲ್ಲಿ ಶೈವ ದೇವಾಲಯಗಳನ್ನು ನಿರ್ಮಿಸಿದ್ದರು. ಈಶ್ವರಲಿಂಗುವಿನ ಪೂಜೆಗೆ ಪುಷ್ಕರಣಿಗಳನ್ನು ನಿರ್ಮಿಸಿದ್ದರು. 1,500 ವರ್ಷಗಳಿಂದಲೂ ಪುಷ್ಕರಣಿಗಳು ಸದಾ ನೀರಿನಿಂದ ತುಂಬಿರುತ್ತವೆ.

ಹಿರೇ ಮಹಾಕೂಟಕ್ಕೆ ಹಳೇ ಮಹಾಕೂಟ (ಮಾಗಡ) ಎಂದು ಕರೆದರೆ ಚಿಕ್ಕ ಮಹಾಕೂಟಕ್ಕೆ ಹೊಸ ಮಹಾಕೂಟ (ಮಾಗಡ) ಎಂದು ಜನರು ಕರೆಯುತ್ತಾರೆ. ಎಂಟು ಅಡಿ ಆಳದ ಪುಷ್ಕರಣಿಗಳಲ್ಲಿ ನೀರಿನ ಬುಗ್ಗೆ ಚಿಮ್ಮುತ್ತಿದೆ. ಈಗಿನ ಭೂಗರ್ಭ ಶಾಸ್ತ್ರಜ್ಞರನ್ನೂ ಇದು ಅಚ್ಚರಿಗೊಳಿಸುತ್ತಿದೆ.

ಹಿರೇ ಮಹಾಕೂಟೇಶ್ವರ ದೇವಾಲಯದ ಎದುರಿನ ಪುಷ್ಕರಣಿಯಲ್ಲಿ ನೀರು ಕಾಲುವೆಯಂತೆ ಹರಿದು ಬರುವುದು. ಚಿಕ್ಕ ಮಹಾಕೂಟೇಶ್ವರ ದೇವಾಲಯದ ಸಮೀಪ ಚಿಕ್ಕ ಕಾಶಿ (ಹೊಂಡ) ಪುಷ್ಕರಣಿ ಮತ್ತು ವಿಶಾಲವಾದ ವಿಷ್ಣು ಪುಷ್ಕರಣಿ ಇದೆ. ಭಕ್ತರು ಎರಡೂ ಪುಷ್ಕರಣಿಗಳಲ್ಲಿ ಪುಣ್ಯಸ್ನಾನ ಮಾಡುವರು.

‘ಪುಷ್ಕರಣಿಯಿಂದ ನೀರು ಹರಿದು ಹೋಗಲು ಕಾಲುವೆಗಳನ್ನು ನಿರ್ಮಿಸಲಾಗಿದೆ. ಈ ನೀರು ಬಳಸಿ ರೈತರು ತೆಂಗು , ಬಾಳೆ, ಲಿಂಬೆ, ಅಡಿಕೆ, ಎಲೆಬಳ್ಳಿ ಬೆಳೆ ಬೆಳೆಯುತ್ತಾರೆ. ರೈತರಿಗೆ ಪುಷ್ಕರಣಿಗಳು ವರದಾನವಾಗಿವೆ’ ಎಂದು ರೈತ ಶಿವಯ್ಯ ಹೇಳಿದರು.

‘2014-15 ಮತ್ತು 2015-16ರಲ್ಲಿ ಮಳೆ ಇಲ್ಲದಾಗಲೂ ಪುಷ್ಕರಣಿಗಳಲ್ಲಿ ನೀರು ಭರ್ತಿಯಾಗಿತ್ತು. ಕಳೆದ ವರ್ಷ ಮಳೆ ಕಡಿಮೆಯಾದರೂ ಪುಷ್ಕರಣಿಯಲ್ಲಿ ನೀರು ಕಡಿಮೆಯಾಗಿಲ್ಲ. ಬನಶಂಕರಿ ದೇವಾಲಯದ ಎರಡು ಪುಷ್ಕರಣಿಗಳು, ಸರಸ್ವತಿ ಹಳ್ಳ ಮತ್ತು ಕೆಂದೂರ ಕೆರೆ ಬತ್ತಿಹೋಗಿ ಎರಡು ದಶಕಗಳು ಸಂದಿವೆ’ ಎಂದು ಭಕ್ತರು ಹೇಳಿದರು.

ಚಿಕ್ಕ ಮಹಾಕೂಟೇಶ್ವರ ದೇವಾಲಯದ ಬಳಿಯ ವಿಷ್ಣು ಪುಷ್ಕರಣಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು
ಚಿಕ್ಕ ಮಹಾಕೂಟೇಶ್ವರ ದೇವಾಲಯದ ಬಳಿಯ ವಿಷ್ಣು ಪುಷ್ಕರಣಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು
ಚಿಕ್ಕ ಮಹಾಕೂಟೇಶ್ವರ ದೇವಸ್ಥಾನದ ಹೊರಗಿರುವ ಚಿಕ್ಕ ಕಾಶಿ ಪುಷ್ಕರಣಿ
ಚಿಕ್ಕ ಮಹಾಕೂಟೇಶ್ವರ ದೇವಸ್ಥಾನದ ಹೊರಗಿರುವ ಚಿಕ್ಕ ಕಾಶಿ ಪುಷ್ಕರಣಿ

ಹಿರೇ ಮಹಾಕೂಟೇಶ್ವರ, ಚಿಕ್ಕ ಮಹಾಕೂಟೇಶ್ವರ ದೇವಾಲಯ ಎಂಟು ಅಡಿ ಆಳದ ಪುಷ್ಕರಣಿಗಳಲ್ಲಿ ನೀರಿನ ಬುಗ್ಗೆ 1,500 ವರ್ಷಗಳಿಂದ ನಿರಂತರ ನೀರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT