ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೇರದಾಳ ಪುರಸಭೆ: ಶಿಲ್ಪಾ ಅಧ್ಯಕ್ಷೆ, ನರ್ಸೀನ್‌ಬಾನು ಉಪಾಧ್ಯಕ್ಷೆ

Published : 26 ಆಗಸ್ಟ್ 2024, 16:15 IST
Last Updated : 26 ಆಗಸ್ಟ್ 2024, 16:15 IST
ಫಾಲೋ ಮಾಡಿ
Comments

ತೇರದಾಳ: ಇಲ್ಲಿನ ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ  ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿಲ್ಪಾ ಗೌತಮ್ ರೋಡಕರ ಹಾಗೂ ಉಪಾಧ್ಯಕ್ಷೆಯಾಗಿ ನರ್ಸೀನ್‌ಬಾನು ರಾಜೇಸಾಬ್ ನಗಾರ್ಜ್‌ ಆಯ್ಕೆಯಾದರು.

ಅಧ್ಯಕ್ಷ ಹುದ್ದೆ ಎಸ್‌ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ (ಅ) ವರ್ಗಕ್ಕೆ ಮೀಸಲಾಗಿತ್ತು. ಎರಡನೇ ಅವಧಿಯ ಅಧಿಕಾರ ಗದ್ದುಗೆ ಕೂಡ ಮಹಿಳೆಯರ ಪಾಲಾಗಿದೆ.

23 ಸದಸ್ಯರ ಸಂಖ್ಯಾಬಲ ಹೊಂದಿದ ಪುರಸಭೆಯಲ್ಲಿ ಬಿಜೆಪಿ 10, ಕಾಂಗ್ರೆಸ್ 10 ಹಾಗೂ ಪಕ್ಷೇತರ 3 ಸದಸ್ಯರು ಆಯ್ಕೆಯಾಗಿದ್ದರು.

ಮೂವರು ಪಕ್ಷೇತರ ಸದಸ್ಯರು ಆರಂಭದಿಂದಲೂ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದರಿಂದ ಮೊದಲ ಅರ್ಧ ಅವಧಿಯಲ್ಲಿ ಅಧಿಕಾರ ಅನುಭವಿಸಲು ಕಾರಣರಾಗಿದ್ದರು. ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಅಧಿಕಾರ ಪಡೆಯುವ ಆಸೆ ಗರಿಗೆದರಿತ್ತು.

10 ಬಿಜೆಪಿ, ಮೂವರು ಪಕ್ಷೇತರ ಹಾಗೂ ಶಾಸಕರ ಒಂದು ಮತ, ಸಂಸದರ ಒಂದು ಮತ ಹೀಗೆ ಮ್ಯಾಜಿಕ್ ಸಂಖ್ಯೆ 13 ಅವಶ್ಯವಿದ್ದಲ್ಲಿ 15 ಮತಗಳ ಬಾಣ ತಮ್ಮ ಬತ್ತಳಿಕೆಯಲ್ಲಿರುವ ಹುಮ್ಮಸ್ಸಿನಲ್ಲಿ ಬಿಜೆಪಿ ಪಡೆ ಇತ್ತು.

ಆದರೆ ಮುಂದೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ಕುಮಾರ ಸರಿಕರ, ಲಕ್ಷ್ಮಣ ನಾಯಕ ಹಾಗೂ ಪಕ್ಷೇತರ ಸದಸ್ಯ ಹಾಫೀಜ್ ಮೌಲಾಅಲಿ ಚಿತ್ರಭಾನುಕೋಟೆ ಅವರನ್ನು ಕರೆದುಕೊಂಡು ಕಾಂಗ್ರೆಸ್ ಪಾಳಯ ರೆಸಾರ್ಟ್‌ ಸೇರಿತ್ತು.

ಚುನಾವಣೆ ನಿಗದಿಗೊಂಡ ದಿನವಾದ ಸೋಮವಾರ ಬೆಳಿಗ್ಗೆ ಪುರಸಭೆ ಕಾರ್ಯಾಲಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕಮಲವ್ವ ವಡ್ಡರ, ಉಪಾಧ್ಯಕ್ಷ ಸ್ಥಾನಕ್ಕೆ ಸಂಗೀತಾ ಕೇದಾರಿ ಪಾಟೀಲ್, ನಾಮಪತ್ರ ಸಲ್ಲಿಸಿದರು.

ಸಂಜೆ ನಾಲ್ಕು ಗಂಟೆಯಿಂದ ಜರುಗಿದ ಚುನಾವಣೆ ಪ್ರಕ್ರಿಯೆಗೆ ಕಾಂಗ್ರೆಸ್‌ನೊಂದಿಗೆ ರೆಸಾರ್ಟ್‌ ಸೇರಿದ್ದ ಸದಸ್ಯರು ಒಂದು ಗಂಟೆ ಮೊದಲೇ ಆಗಮಿಸಿದ್ದರು. ವ್ಹೀಲ್ ಚೇರ್ ಮೂಲಕ ಆಗಮಿಸಿ ಕಾಂಗ್ರೆಸ್ ಸದಸ್ಯೆ ಅಕ್ಕುತಾಯಿ ಕಾಂಬಳೆ ತಮ್ಮ ಮತ ಚಲಾಯಿಸಿ ಗಮನ ಸೆಳೆದರು. ಬಳಿಕ ಶಾಸಕ ಹಾಗೂ ಸಂಸದರೊಂದಿಗೆ ಬಿಜೆಪಿ ಸದಸ್ಯರು ಆಗಮಿಸಿದರು. 13 ಮತ ಪಡೆದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಪಡೆದರು.

ಚುನಾವಣೆ ಪ್ರಕ್ರಿಯೆ ಮುಗಿಸಿ ಹೊರಬಂದ ಶಾಸಕ ಸಿದ್ದು ಸವದಿ ಮಾತನಾಡಿ, `ಹಣ, ಅಧಿಕಾರದ ಆಸೆಗಾಗಿ ಬಿಜೆಪಿ ಪಕ್ಷದಿಂದ ಸದಸ್ಯರಾಗಿ ಆಯ್ಕೆಯಾಗಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಈಗಾಗಲೇ ಬಿಜೆಪಿ ಸದಸ್ಯರ ಮೇಲೆ ವಿಪ್ ಜಾರಿ ಮಾಡಿದ್ದು, ಶೀಘ್ರವೇ ಪಕ್ಷ ದ್ರೋಹ ಮಾಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು' ಎಂದರು.

ಪುರಸಭೆ ಸದಸ್ಯ ಶೆಟ್ಟೆಪ್ಪ ಸುಣಗಾರ ಮಾತನಾಡಿ ‘ಪುರಸಭೆಯ 23 ಸದಸ್ಯರ ವಿಶ್ವಾಸ ಪಡೆದು ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಚುನಾವಣಾಧಿಕಾರಿಯಾಗಿ ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ ಕಾರ್ಯನಿರ್ವಹಿಸಿದರು. ರಬಕವಿ-ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ, ಗ್ರೇಡ್– 2 ತಹಶೀಲ್ದಾರ್‌ ಎಸ್.ಬಿ.ಕಾಂಬಳೆ, ಉಪತಹಶೀಲ್ದಾರ ಎಸ್.ಬಿ.ಮಾಯನ್ನವರ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ, ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರಪಾಟೀಲ ಇದ್ದರು.

ಹೆಚ್ಚುವರಿ ಎಸ್‌ಪಿ ಜಿದ್ದಿ ಸೇರಿದಂತೆ, ಸಿಪಿಐ, ಪಿಎಸ್‌ಐ ಹಾಗೂ ನೂರಾರು ಸಂಖ್ಯೆಯ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡುವ ಮೂಲಕ ಶಾಂತಿಯುತ ಚುನಾವಣೆ ನಡೆಯಲು ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT