ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ಜಿಲ್ಲೆಗೆ ಎರಡು ತಾಯಿ-ಮಗುವಿನ ಆಸ್ಪತ್ರೆ: ದಿನೇಶ್‌ ಗುಂಡೂರಾವ್

ಜಿಲ್ಲಾಸ್ಪತ್ರೆಗೆ ಎಂ.ಆರ್.ಐ ಸ್ಕ್ಯಾನಿಂಗ್ ಯಂತ್ರ
Published 28 ಜೂನ್ 2024, 15:49 IST
Last Updated 28 ಜೂನ್ 2024, 15:49 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ಮುಧೋಳ ಹಾಗೂ ಹುನಗುಂದ ತಾಲ್ಲೂಕಿಗೆ ಎರಡು ಸರ್ಕಾರಿ ತಾಯಿ-ಮಗುವಿನ ಆಸ್ಪತ್ರೆ ಪ್ರಾರಂಭಿಸಲು ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಧೋಳ ಮತ್ತು ಹುನಗುಂದದಲ್ಲಿ ಕಾರ್ಯಕ್ಷೇತ್ರ ಹೆಚ್ಚಾಗಿರುವುದರಿಂದ ಹೆಚ್ಚುವರಿಯಾಗಿ ಎರಡು ಆಸ್ಪತ್ರೆ ಮಂಜೂರಾತಿಗೆ ಕ್ರಮ ವಹಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ ಸಿಟಿ ಸ್ಕ್ಯಾನಿಂಗ್ ಘಟಕ ಇದ್ದು, ಎಂ.ಆರ್.ಐ ಘಟಕ ಅವಶ್ಯಕತೆ ಇರುವುದನ್ನು ಮನಗಂಡಿದ್ದು, ಮುಂಬರುವ ಎರಡು ತಿಂಗಳ ಒಳಗೆ ಯಂತ್ರ ಅಳವಡಿಸಲಾಗುವುದು ಎಂದರು.

ಜಿಲ್ಲೆಯಲ್ಲಿನ ಆಸ್ಪತ್ರೆಗಳ ದುರಸ್ತಿಗೆ ₹5 ಕೋಟಿ ಅನುದಾನ ನೀಡಲಾಗುವುದು. ಆಸ್ಪತ್ರೆಗಳಲ್ಲಿ ಹೊರರೋಗಿ, ಒಳರೋಗಿಗಳ ಸಂಖ್ಯೆ, ವಾರ್ಡ್‌ಗಳ ಸಂಖ್ಯೆ, ವೈದ್ಯರ ಕರ್ತವ್ಯದ ಮೇಲೆ ತೀವ್ರ ನಿಗಾ ವಹಿಸಲಾಗುವುದು ಎಂದು ಹೇಳಿದರು.

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ. ವೈದ್ಯರ ಹಾಗೂ ತಜ್ಞ ವೈದ್ಯರ ಕೊರತೆ ಜಾಸ್ತಿ ಇದೆ. ಕೌನ್ಸೆಲಿಂಗ್‌ ಮೂಲಕ ತಜ್ಞ ವೈದ್ಯರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರೆ ವೈದ್ಯಕೀಯ ನರ್ಸ್, ಟೆಕ್ನಿಷಿಯನ್ ಹಾಗೂ ಫಾರ್ಮಸಿ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಹೊರಗುತ್ತಿಗೆ ಮೇಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಪ್ರತಿಯೊಂದು ಚಿಕಿತ್ಸೆಗೆ ನಿಗದಿಪಡಿಸಿದ ದರಗಳ ಪಟ್ಟಿಯನ್ನು ಆಸ್ಪತ್ರೆಯಲ್ಲಿ ಬರುವ ರೋಗಿಗಳಿಗೆ ಕಾಣುವಂತೆ ಪ್ರದರ್ಶಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

ಶಾಸಕರಾದ ಎಚ್.ವೈ.ಮೇಟಿ, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ, ನಾಗರಾಜ ಹದ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT