ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಪುರ | ರೋಹಿಣಿಯೂ ಇಲ್ಲ, ಮೃಗಶಿರ ಕೂಡಾ ಬರುತ್ತಿಲ್ಲ: ಮಳೆರಾಯನ ಕೃಪೆಗೆ ದೇವರ ಮೊರೆ

Published 17 ಜೂನ್ 2023, 23:45 IST
Last Updated 17 ಜೂನ್ 2023, 23:45 IST
ಅಕ್ಷರ ಗಾತ್ರ

ರಾಂಪುರ: ವಾಡಿಕೆಯಂತೆ ಮಳೆ ಬಂದಿದ್ದರೆ ಇಷ್ಟೊತ್ತಿಗೆ ಮುಂಗಾರು ಬಿತ್ತನೆ ಬಲು ಜೋರಾಗಿತ್ತು. ಆದರೀಗ ಮಳೆ ಬರುವ ಲಕ್ಷಣಗಳೇ ಇಲ್ಲದಂತಾಗಿ ರೈತರು ಆತಂಕ ಪಡುವಂತಾಗಿದೆ.

ರೋಹಿಣಿ ಮಳೆ ಬಂದರೆ ಮುಂಗಾರಿಗೆ ಉತ್ತಮ ತತಿ ಎನ್ನುವುದು ವಾಡಿಕೆ. ಈ ಬಾರಿ ಅದು ಎಲ್ಲಿಯೂ ಬರಲಿಲ್ಲ. ಹೋಗಲಿ ಮೃಗಶಿರ ಮಳೆಯಾದರೂ ಬಂದರೆ ಸಾಕು ಎನ್ನುವ ಭರವಸೆಯಲ್ಲಿದ್ದ ರೈತನಿಗೆ ಅದು ಸಹ ಕೈಕೊಡುವ ಲಕ್ಷಣಗಳು ಕಾಣುತ್ತಿವೆ.

ತಡವಾಗಿಯಾದರೂ ಮುಂಗಾರು ರಾಜ್ಯವನ್ನು ಪ್ರವೇಶಿಸುತ್ತದೆ ಎನ್ನುವ ಹವಾಮಾನ ಇಲಾಖೆಯ ಮಾಹಿತಿಯಿಂದ ಚಿಂತೆ ಬಿಟ್ಟಿದ್ದ ರೈತರು ಮೃಗಶಿರ ಮಳೆ ಕೂಡಿ 9 ದಿನ ಕಳೆದರೂ ಅದರ ಸುಳಿವೇ ಇಲ್ಲದ್ದರಿಂದಾಗಿ ಮುಗಿಲಿಗೆ ಮುಖ ಮಾಡುವಂತಾಗಿದೆ.

ಅಲ್ಲಲ್ಲಿ ಪ್ರಾರ್ಥನೆ: ಮಳೆರಾಯನ ಕೃಪೆಗಾಗಿ ರೈತಾಪಿ ಜನ ಅದರಲ್ಲೂ ಮಹಿಳೆಯರು ಹಲವಾರು ರೀತಿಯ ಪೂಜೆ, ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಕಪ್ಪೆ, ಕತ್ತೆ ಮದುವೆ, ಒನಕೆ, ಬಿಂದಿಗೆ ಪೂಜೆ ಅಷ್ಟೇ ಅಲ್ಲದೇ ಗುರ್ಜಿ ಹಾಕಿ ಮನೆ ಮನೆಗೆ ತಿರುಗಿ ಧಾನ್ಯ ಬೇಡುವುದು ಹೀಗೆ ನಾನಾ ಬಗೆಯ ಪೂಜಾ ಕಸರತ್ತು ಮಾಡುತ್ತಿದ್ದರೂ ಎಲ್ಲಿಯೂ ಮಳೆಯ ಲಕ್ಷಣ ಇಲ್ಲವಾಗಿದೆ.

ಮುಗಿದ ಹೆಸರು ತತಿ: ಬಾಗಲಕೋಟೆ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿಗೆ ಹೆಸರು ಬೆಳೆಯುವುದು ಹೆಚ್ಚು. ಅದು ರೋಹಿಣಿ ಮಳೆಗೆ ಬಿತ್ತನೆಯಾದರೆ ಬಂಪರ್ ಬೆಳೆ ಎನ್ನುವುದು ನಂಬಿಕೆ. ಆದರೆ ಈಗಿನ ಸ್ಥಿತಿಯಲ್ಲಿ ಮೃಗಶಿರ ಕೂಡ ಬರುವ ಭರವಸೆ ಇಲ್ಲದಂತಾಗಿ ಹೆಸರಿನ ತತಿ ಮುಗಿದಂತೆ ಎನ್ನುತ್ತಿದ್ದಾನೆ ರೈತ.

ಮಳೆ ಬಂದರೂ ಹೆಸರು ತತಿ ಮುಗೀತು. ಇನ್ನು ಸಜ್ಜಿ, ಗೋವಿನಜೋಳ, ತೊಗರಿ, ಸೂರ್ಯಕಾಂತಿ ಬೆಳೆ ಬೆಳೆಯಬಹುದಾಗಿದೆ. ಕಳೆದ ಜನವರಿಯಿಂದ ಜೂನ್ 13ರವರೆಗೆ ತಾಲ್ಲೂಕಿನಲ್ಲಿ ವಾಡಿಕೆಯಂತೆ 117.8 ಮಿ.ಮೀ. ಮಳೆ ಬರಬೇಕಿತ್ತು. ಕೇವಲ 65.4ರಷ್ಟು ಮಳೆಯಾಗಿದ್ದು, ಶೇ.44 ರಷ್ಟು ಮಳೆ ಕೊರತೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪಾಂಡಪ್ಪ ಲಮಾಣಿ ಹೇಳಿದರು.

ನಂಬಿಕೆಯ ರೋಣಿ ಮೃಗಶಿರ ಮಳೆಗಳೇ ಕೈಕೊಟ್ಟರೆ ರೈತರ ಕಥೆನೇ ಮುಗಿತು. ಅವು ಎರಡರ ಮೇಲೆಯೇ ನಮಗೆ ಭರವಸೆ. ಅವೇ ಆಗದಿದ್ದರೆ ಬರ ಬಂತಂತ ತಿಳಿಯುದ
-ಮಲ್ಲಪ್ಪ ರಾಂಪುರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT