ಮದ್ಯದಂಗಡಿ ಆರಂಭಕ್ಕೆ ಮಹಿಳೆಯರ ವಿರೋಧ

7

ಮದ್ಯದಂಗಡಿ ಆರಂಭಕ್ಕೆ ಮಹಿಳೆಯರ ವಿರೋಧ

Published:
Updated:
ಕಮತಗಿ ಪಟ್ಟಣದಲ್ಲಿ ಎಂಎಸ್ಐಎಲ್ ಮದ್ಯದಂಗಡಿ ಆರಂಭ ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸಿದರು

ಕಮತಗಿ(ಅಮೀನಗಡ): ಅಬಕಾರಿ ಇಲಾಖೆಯಿಂದ ಅನುಮತಿ ಪಡೆದು ಎಂ.ಎಸ್.ಐ.ಎಲ್ ಮದ್ಯದಂಗಡಿ ಗುರುವಾರ ಪಟ್ಟಣದಲ್ಲಿ ಪ್ರಾರಂಭವಾಗಿದೆ. ಕೆಲವು ವ್ಯಕ್ತಿಗಳು ಹರುಷ ವ್ಯಕ್ತಪಡಿಸಿದ್ದರೆ, ಮಹಿಳೆಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪಟ್ಟಣದಲ್ಲಿ ಎಂ.ಎಸ್.ಐ.ಎಲ್ ಮಳಿಗೆ ಸ್ಥಾಪನೆ ವಿರೋಧಿಸಿ ಪಟ್ಟಣದ ಮಹಿಳೆಯರು ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಪಟ್ಟಣದ ಕೆಲವು ವ್ಯಕ್ತಿಗಳು ಮಳಿಗೆ ತೆರೆಯುವ ಪರವಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಅದಾದ ನಂತರ ಗುರುವಾರ ಅಧಿಕೃತವಾಗಿ ಮಳಿಗೆ ಪ್ರಾರಂಭವಾಗಿದೆ.

ಮದ್ಯದಂಗಡಿ ಪ್ರಾರಂಭಿಸಲು ಅಬಕಾರಿ ಇಲಾಖೆ ಅಧಿಕಾರಿಗಳು, ಪರಿಶೀಲನೆ ಹೋದಾಗ ಪಟ್ಟಣದಲ್ಲಿ ಪರ ವಿರೋಧದ ಎರಡು ಗುಂಪುಗಳ ಮಧ್ಯೆ ವಿವಾದವಾಗಿ, ಅಧಿಕಾರಿಗಳು ಅನುಮತಿ ನೀಡದೆ ಹಿಂತಿರುಗಿದ್ದರು. ಇತ್ತೀಚೆಗೆ ಶಾಸಕ ವೀರಣ್ಣ ಚರಂತಿಮಠ ಅವರು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ‘ನನ್ನ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸದಾಗಿ ಮದ್ಯದಂಗಡಿಯನ್ನು ತೆರೆಯಬೇಕಾದರೆ ನನ್ನ ಗಮನಕ್ಕೆ ತರಬೇಕು’ ಎಂದು ಎಚ್ಚರಿಸಿದ್ದರು. ಈ ಬೆಳವಣಿಗೆಯಿಂದ ಕಮತಗಿ ಪಟ್ಟಣದ ನಾಗರೀಕರು ಪಟ್ಟಣದಲ್ಲಿ ಸರ್ಕಾರಿ ಮದ್ಯದಂಗಡಿ ಪ್ರಾರಂಭವಾಗುವುದಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದರು.

ಆದರೆ, ಪಟ್ಟಣದಲ್ಲಿ ದಿಢೀರನೇ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದು ಸುರೇಶ ಹಳ್ಳದ ಎಂಬುವವರು ಅಂಗಡಿ ಪ್ರಾರಂಭಿಸಲು ಮುಂದಾದಾಗ ಮಹಿಳೆಯರು ಪ್ರತಿಭಟಿಸಿದರು. ‘ಸಮೀಪದಲ್ಲೇ ಮಠ, ಕಾಲೇಜು, ಹೆಸ್ಕಾಂ ಶಾಖಾ ಕಚೇರಿಗಳಿದ್ದು ದಿನ ನಿತ್ಯ ಸಾರ್ವಜನಿಕರು, ವಿದ್ಯಾರ್ಥಿನಿಯರು ಸಂಚರಿಸುತ್ತಾರೆ. ಮದ್ಯವ್ಯಸನಿಗಳಿಂದ ತೊಂದರೆಯುಂಟಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಮದ್ಯದಂಗಡಿ ತೆರೆಯಲಾಗಿದೆ’ ಎಂದು ಪ್ರತಿಭಟನಾ ನಿರತ ಮಹಿಳೆಯರು ದೂರಿದರು.

ಸ್ಥಳಕ್ಕೆ ಬಂದ ಎಎಸ್ಐ ಪಿ.ಎ. ಜಾಧವ ‘ಅನುಮತಿ ಇಲ್ಲದೇ ಪ್ರತಿಭಟನೆ ಇಳಿದಿರುವುದು ಕಾನೂನು ಬಾಹಿರ. ಅನುಮತಿ ಪಡೆದು ನಿಮ್ಮ ಹೋರಾಟ ಮುಂದುವರಿಸಿ, ಈಗ ತಕ್ಷಣವೇ ಪ್ರತಿಭಟನೆ ಹಿಂಪಡೆಯಬೇಕು’ ಎಂದರು.

‘ಕಾನೂನು ರೀತಿಯಲ್ಲೇ ನಾವು ಮುಂದಿನ ದಿನಮಾನಗಳಲ್ಲಿ ಹೋರಾಟಕ್ಕಿಳಿಯುತೇವೆ’ ಎಂದು ಪ್ರತಿಭಟನೆ ಮುಕ್ತಾಯಗೊಳಿಸಿದರು.

ಪ್ರತಿಭಟನೆಯಲ್ಲಿ ಶಂಕ್ರವ್ವ ಹಿರೇಮಠ, ರಾಜಯ್ಯ ವಾಡೇಕರ, ಸುನೀತಕ್ಕ ಡೊಂಬ್ಲರ, ರೇಣುಕಾ ಕಡಿಯಪ್ಪನವರ, ರಂಗವ್ವ ಬಡಿಗೇರ, ಸಂಗವ್ವ ಹಂಡಿ, ವಿಜಯಲಕ್ಷ್ಮೀ ಕುಮಚಗಿ, ಶಾರದವ್ವ ಇಂಗಳಗಿ, ಅನ್ನಪೂರ್ಣ ಶಿರಹಟ್ಟಿ, ಗೌರವ್ವ ಮುರನಾಳ, ರಂಗವ್ವ ದಡ್ಡಿ, ಶಂಕ್ರಮ್ಮ ಹರದೊಳ್ಳಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !