ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರು ಬರದಂತೆ ಕೆಲಸ ಮಾಡಿ: ಲೋಕಾಯುಕ್ತ ಎಸ್‍ಪಿ

ಮಾಹಿತಿ ಕೊರತೆ: ಜನರಿಂದ ಸಲ್ಲಿಕೆಯಾಗದ ಅಹವಾಲು: ಅಧಿಕಾರಿಗಳಿಗೆ ಸೀಮಿತವಾದ ಸಭೆ
Published 15 ಫೆಬ್ರುವರಿ 2024, 16:09 IST
Last Updated 15 ಫೆಬ್ರುವರಿ 2024, 16:09 IST
ಅಕ್ಷರ ಗಾತ್ರ

ಗುಳೇದಗುಡ್ಡ: ಪಟ್ಟಣದ ತಾಲ್ಲೂಕು ಪಂಚಾಯತಿಯಲ್ಲಿ ಲೋಕಾಯುಕ್ತ ಇಲಾಖೆಯಿಂದ ಸಾರ್ವಜನಿಕ ಕುಂದುಕೊರತೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ಬುಧವಾರ ನಡೆಯಿತು.

ಮಾಹಿತಿ ಕೊರತೆಯಿಂದ ಸಾರ್ವಜನಿಕರಿಂದ ಯಾವುದೇ ಅಹವಾಲುಗಳು ಬರಲಿಲ್ಲ.

ಲೋಕಾಯುಕ್ತ ಜಿಲ್ಲಾ ಅಧೀಕ್ಷಕ ಸತೀಶ ಚಿಟಗುಬ್ಬಿ ಮಾತನಾಡಿ, ‘ಈಗ ಸೌಲಭ್ಯಗಳು ಹೆಚ್ಚಿದ್ದು, ಈಗ ಲೋಕಾಯುಕ್ತಕ್ಕೆ ಜನರು ಆನ್‍ಲೈನ್ ಮೂಲಕ ನಮಗೆ ಅರ್ಜಿ ಸಲ್ಲಿಸಿರುತ್ತಾರೆ. ಅವುಗಳನ್ನು ಆಯಾ ಇಲಾಖೆಗಳ ಮೂಲಕ ಪರಿಶೀಲನೆ ಮಾಡಲಾಗುತ್ತದೆ. ಕೆಲಸ ಮಾಡಿದ ಊರಲ್ಲಿ ಮಾತ್ರ ದೂರು ಇರುತ್ತದೆ. ಮುಂದೆ ಬೇರೆ ಊರಿಗೆ ಹೋದರೆ ಏನೂ ಕ್ರಮ ಆಗುವುದಿಲ್ಲ ಎನ್ನುವ ಭಾವನೆ ಇಟ್ಟುಕೊಳ್ಳಬೇಡಿ. ಅಧಿಕಾರಿಗಳು ಕಾನೂನು ಅಡಿಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಹೇಳಿದರು.

ಜನಸಂಪರ್ಕ ಸಭೆ ಎಂದು ಹೇಳಲಾಗಿತ್ತು. ಆದರೆ ಸಾರ್ವಜನಿಕರೇ ಇರಲಿಲ್ಲ. ಕೇವಲ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿದರು. ಉಪ ಅಧೀಕ್ಷಕ ಸಿದ್ದೇಶ್ವರ, ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂ.ಎಚ್. ಬಿದರಿ ಮಾತನಾಡಿದರು.

ಇಲಾಖೆಗೆ ಭೇಟಿ: ಪಟ್ಟಣದ ತಹಶೀಲ್ದಾರ್‌ ಕಚೇರಿ ಸೇರಿದಂತೆ ಪಟ್ಟಣದ ವಿವಿಧ ಕಚೇರಿಗಳಿಗೆ ಭೇಟಿ ನೀಡಿ, ಕಾರ್ಯನಿರ್ವಹಣೆಯ ಕುರಿತು ಮಾಹಿತಿ ಪಡೆದರು. ಲೋಕಾಯುಕ್ತ ಇಲಾಖೆಯ ಅಧಿಕಾರಿ ಶಂಕರ ರಾಗಿ ಅವರು ತಹಶೀಲ್ದಾರ್‌ ಕಚೇರಿಯಲ್ಲಿ ಸಭೆ ನಡೆಸಿ, ಆಡಳಿತಾತ್ಮಕ ವಿಷಯಗಳ ಕುರಿತು ಚರ್ಚಿಸಿದರು.

ತಹಶೀಲ್ದಾರ್‌ ಕಚೇರಿಯಲ್ಲಿ ಸಕಾಲ ಅರ್ಜಿಗಳ ನಿರ್ವಹಣೆ, ರಜಿಸ್ಟರ್ ಕುರಿತು ಮಾಹಿತಿ ಪಡೆದುಕೊಂಡರು. ಭೂಮಿ ಕೇಂದ್ರದಲ್ಲಿನ ಬಾಕಿ ಇರುವ ಜಮೀನಿನಲ್ಲಿಯ ಹೊಸ ಶರ್ತು ಕಡಿಮೆ ಮಾಡುವ ಕುರಿತ ಕಡತಗಳನ್ನು ಕೂಡಲೇ ವಿಲೇವಾರಿ ಮಾಡುವಂತೆ ಸೂಚಿಸಿದರು. ಕೃಷಿ ಇಲಾಖೆಗೆ ಭೇಟಿ ನೀಡಿ, ರೈತರಿಗೆ ನೀಡಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೇ ಜೇನು ಕೃಷಿ ಬಗ್ಗೆ ಸರಿಯಾಗಿ ಅನುದಾನ ಬಳಕೆ ಮಾಡದಿರುವ ಬಗ್ಗೆಯು ಬೇಸರ ವ್ಯಕ್ತಪಡಿಸಿದರು.

ಪುರಸಭೆಗೆ ಭೇಟಿ ನೀಡಿ ಸಿಬ್ಬಂದಿ ಹಾಜರಾತಿ ಪುಸ್ತಕ ಪರಿಶೀಲನೆ ಮಾಡಿದರು. ಕರ ವಸೂಲಿ ಮಾಡದಿರುವುದಕ್ಕೆ, ಖುಲ್ಲಾ ಜಾಗ ಹೊಂದಿರುವವರಿಗೂ ಭೂ ಬಾಡಿಗೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಸಿಬ್ಬಂದಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಯಂತ್ರ ಖರೀದಿಸಿದ್ದೀರಿ, ಅದನ್ನು ಸರಿಯಾಗಿ ಬಳಕೆ ಮಾಡಿಲ್ಲ. ಹೀಗಾದರೆ ಸರ್ಕಾರದ ಹಣ ಪೋಲಾಗುವದಿಲ್ಲವೇ ಎಂದು ಪ್ರಶ್ನಿಸಿದರು.

ತಹಶೀಲ್ದಾರ್‌ ಮಂಗಳಾ ಎಂ., ಲೋಕಾಯುಕ್ತ ಇಲಾಖೆಯ ಬಸವರಾಜ ಮುಕರ್ತಿಹಾಳ, ಪಶು ಇಲಾಖೆಯ ಡಾ.ಎಸ್.ಪಿ. ಜಾಧವ, ಪಿಡಬ್ಲ್ಯೂಡಿ ಇಲಾಖೆಯ ಎಂಜಿನಿಯರ್ ಎ.ಕೆ.ಮಕಾಂದಾರ್, ಅರಣ್ಯ ಇಲಾಖೆಯ ಎಸ್.ಬಿ. ಪೂಜಾರ, ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ, ಎಂಜನಿಯರ್‌ ತೋಪಲಕಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಎಂ.ಎಂ. ಮಳೀಮಠ, ಆರ್.ಬಿ. ಬೂದಿ, ಎಂ.ಎಸ್. ಉಂಕಿ, ಮಂಜು ಜೋಕೇರ, ಹನಮಂತ ಇದ್ದರು.

ಪಟ್ಟಣದ ತಾಲ್ಲೂಕು ಪಂಚಾಯತಿಯಲ್ಲಿ ಲೋಕಾಯುಕ್ತ ಇಲಾಖೆ ವತಿಯಿಂದ ಸಾರ್ವಜನಿಕ ಕುಂದುಕೊರೆತೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು 
ಪಟ್ಟಣದ ತಾಲ್ಲೂಕು ಪಂಚಾಯತಿಯಲ್ಲಿ ಲೋಕಾಯುಕ್ತ ಇಲಾಖೆ ವತಿಯಿಂದ ಸಾರ್ವಜನಿಕ ಕುಂದುಕೊರೆತೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT