ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿದ್ದು ಕಡಿಮೆ, ಊದಿದ್ದೇ ಹೆಚ್ಚು

ಶಹನಾಯಿ ಸಾಮ್ರಾಟ ಸನಾದಿ ಅಪ್ಪಣ್ಣ
Last Updated 2 ಫೆಬ್ರುವರಿ 2014, 11:35 IST
ಅಕ್ಷರ ಗಾತ್ರ

‘ಬೀಳಗಿ ದೈವದವ್ರು ಯಾರರೇ ಇದ್ರ ಬರ್ರಿ’ ಎಂದಾಗ ಅಲ್ಲಿ ಬೀಳಗಿಯವರು ಯಾರಾದರೂ ಇದ್ದರೆ ತೇರಿನ ಮುಂದೆ ಹೋಗಿ ನಿಲ್ಲುತ್ತಾರೆ. ಯಾರೂ ಇಲ್ಲದಿದ್ದಲ್ಲಿ ಜಾತ್ರಾ ಸಮಿತಿಯವರು ಕೈ ಮೇಲೆತ್ತಿ ‘ಇದು ಬೀಳಗಿ ದೈವದ ಕಾಯಿ’ ಎಂದು ಹೇಳಿ ತೆಂಗಿನಕಾಯಿ ಒಡೆದಾಗ ಮಹಾಲಿಂಗಪುರದ ಮಹಾಲಿಂಗೇಶ್ವರರ ತೇರು ಮುಂದೆ ಸಾಗುತ್ತದೆ.

ಬೀಳಗಿಗೆ ಇಂಥದೊಂದು ಗೌರವವನ್ನು ದೊರಕಿಸಿಕೊಟ್ಟ ಶಹನಾಯಿ ಸಾಮ್ರಾಟ ಸನಾದಿ ಅಪ್ಪಣ್ಣನವರು ಬೀಳಗಿಯವರೆಂದು ಹೇಳಿಕೊಳ್ಳುವುದೇ ಊರವರಿಗೆ ಹೆಮ್ಮೆಯ ಸಂಗತಿ. ಈ ಗೌರವ ಬೀಳಗಿಗೆ ಸುಮ್ಮನೇ ಬಂದಿಲ್ಲ. ಅದಕ್ಕೆ ಒಂದು ಕೌತುಕದ  ಹಿನ್ನೆಲೆಯೇ ಇದೆ.

ಖಾಸೀಮ್ ಎಂಬ ಕಲಾವಿದ ತನ್ನೆದುರು ಸೋತ ಕಲಾವಿದರಿಗೆ ಅಪಮಾನಿಸುತ್ತಿದ್ದ. ಇದನ್ನು ನೋಡಿದ ಅಪ್ಪಣ್ಣ ಮೊದಲ ಬಾರಿ ಸ್ಪರ್ಧೆಯಲ್ಲಿ ಭಾಗವಹಿಸದೇ ತಿರುಗಿ ಬಂದು ಅಂದಿನ ಕಲ್ಮಠದ ಪೀಠಾಧಿಪತಿಗಳಾಗಿದ್ದ ಕರವೀರ ಸ್ವಾಮೀಜಿಯವರ ಮುಂದೆ ಖಾಸೀಮ್ ನ ಗರ್ವದ ಬಗ್ಗೆ ನಿವೇದಿಸಿಕೊಂಡರು.

ಕಾಶಿಯಲ್ಲಿ ಅಧ್ಯಯನ ಮಾಡಿ ಸಕಲ ಶಾಸ್ತ್ರ ಪಾರಂಗತರಾದ ಕರವೀರ ಸ್ವಾಮೀಜಿ ತಾವೇ ಶಹನಾಯಿ ನುಡಿಸಿ ಅಪ್ಪಣ್ಣನವರನ್ನು ಪಕ್ಕ ವಾದ್ಯವಾಗಿ ತಮಟೆ (ಕಣಿ ಹಲಗೆ) ನುಡಿಸಲು ಹಚ್ಚಿದರು. ನಂತರ ತಾವು ನುಡಿಸಿದ ರಾಗವನ್ನು ಅಪ್ಪಣ್ಣನಿಗೆ ನುಡಿಸಲು ಹೇಳಿ ತಾವು ತಮಟೆ ನುಡಿಸಿದರು. ಅಪ್ಪಣ್ಣ ಪರಿಪೂರ್ಣರಾದಾಗ ಸ್ಪರ್ಧೆಗೆ ಕಳುಹಿಸಿದರು. ಖಾಸಿಮ್ ಸೋತು ಹೋದ.

ಸಂತಸಗೊಂಡ ಮುಧೋಳ ಸಂಸ್ಥಾನದ ಮಹಾರಾಜರು ಅಪ್ಪಣ್ಣ­ನನ್ನು ಕರೆದು ಏನು ಬೇಕೆಂದು ಕೇಳಿದಾಗ ಚಿನ್ನ, ಬೆಳ್ಳಿ, ಭೂಮಿ ಕೇಳದ ಅಪ್ಪಣ್ಣ ‘ಮಾರಾಜ್, ಬೀಳಗಿ ಊರ ಕಾಯಿ ಒಡದ ಮ್ಯಾಲ ಮಾನಿಂಗೇಶ್ವರ ತೇರ ಎಳೀಬೇಕು, ಇದರ ಹೊರ್ತ ಮತ್ತೇನೂ ಬ್ಯಾಡಾ’ ಎಂದು ಯಾವುದಕ್ಕೂ ಆಸೆಪಡದೇ ತಾನು ಹುಟ್ಟಿ ಬೆಳೆದ ಊರಿಗೆ ಕೀರ್ತಿ, ಪ್ರತಿಷ್ಠೆ ತಂದು ಕೊಟ್ಟ ಸ್ವಾಭಿಮಾನಿ ಕಲಾವಿದ. ಅದು ಇಂದಿಗೂ ಮುಂದುವರಿದು­ಕೊಂಡು ಬಂದಿದೆ.

ಅಪ್ಪಣ್ಣ ಇಂದು ನಮ್ಮ ನಡುವೆ ಬದುಕಿದ್ದರೆ 138ವರ್ಷದ (1876–1945)ವಯೋ ವೃದ್ಧರಾಗಿರುತ್ತಿದ್ದರು. ತಂದೆ ಸಾಬಣ್ಣ ಭಜಂತ್ರಿ, ಹನುಮವ್ವ ತಾಯಿ. ಅಂದಿನ ಸಂದರ್ಭದಲ್ಲಿ ಒಂದಿಷ್ಟು ಸ್ಥಿತಿವಂತರ ಮನೆತನವೇ ಹೌದು. ಅಣ್ಣ ಬಾಬಣ್ಣನಿಗೆ ಸನಾದಿ ನುಡಿಸುವುದರಲ್ಲಿ ಆಸಕ್ತಿ ಇದ್ದರೂ ಆತನಿಗೆ ನಾದಸರಸ್ವತಿ ಒಲಿಯಲಿಲ್ಲ.

ಅಪ್ಪಣ್ಣ ಶ್ರದ್ಧೆಯಿಂದ ಕಲಿತರು. ಗ್ರಾಮದ ಬೆಟ್ಟದ ಮೇಲಿರುವ ದುರ್ಗಾ ದೇವಿ ಗುಡಿ, ಶಿವಯೋಗಿ ಸಿದ್ಧ­ರಾಮೇಶ್ವರರ ಗುಡಿಗಳೇ ಅಪ್ಪಣ್ಣನವರ ಅಭ್ಯಾಸದ ತಾಣಗಳು. ಅಪ್ಪಣ್ಣನವರ ಅಭ್ಯಾಸ ಪ್ರಾರಂಭಗೊಂಡಾಗಲೇ ಬೀಳಗಿ ಪಟ್ಟಣದಲ್ಲಿ ಹಕ್ಕಿಗಳ ಉಲಿ­ದಾಟ, ದನಕರುಗಳ ಅಂಬಾ ಎಂಬ ಧ್ವನಿ, ಬಾನಿನ ತೆರೆ ಸರಿಸಿ ಸೂರ್ಯ ಪರಮಾತ್ಮ ಹೊರಗೆ ಬರುವುದು. 

ನಸುಕಿನಲ್ಲಿ, ಸಂಜೆ ಹೊತ್ತು ಅಪ್ಪಣ್ಣ ಅಭ್ಯಾಸಕ್ಕಾಗಿ ಸನಾದಿ ನುಡಿಸುತ್ತಿದ್ದರೆ ಇಡೀ ಊರಿಗೆ ಊರೇ ಮೌನವಾಗಿ ಕುಳಿತು ಶಾಂತಚಿತ್ತದಿಂದ ಅವರ ರಾಗ­ಗಳನ್ನು ಆಲಿಸುತ್ತಿತ್ತು ಎಂದು ಅಪ್ಪಣ್ಣ­ನನ್ನು ಕಣ್ಣಾರೆ ಕಂಡಿದ್ದ ಹೆಸರಾಂತ ಕಾದಂಬರಿಕಾರರೂ, ಬೀಳಗಿಯವರೇ ಆದ ಕೃಷ್ಣಮೂರ್ತಿ ಪುರಾಣಿಕರು ತಮ್ಮ ಎಲ್ಲ ಕಾದಂಬರಿಗಳಲ್ಲಿ ಅಪ್ಪಣ್ಣ, ಅಪ್ಪಣ್ಣನ ಶಹನಾಯಿ ವಾದನ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಬರೆದಿರುವುದೇ ಸಾಕ್ಷಿಯಾಗಿ ನಿಲ್ಲುತ್ತದೆ.

ಸಂಪರ್ಕ ಸಾಧನೆಗಳಿಲ್ಲದ ಅಂದಿನ ದಿನಗಳಲ್ಲಿ ಮುಧೋಳ, ಜಮಖಂಡಿ, ವಿಜಾಪುರ, ಮಹಾರಾಷ್ಟ್ರದ ಕೊಲ್ಹಾ­ಪುರ, ಸಾಂಗಲಿ, ಮಿರಜ, ಶ್ರೀಶೈಲ ಕ್ಷೇತ್ರ­ದವರೆಗೂ ಅಪ್ಪಣ್ಣನವರ ಖ್ಯಾತಿ. ಕೊಲ್ಹಾಪುರದ ಮಹಾರಾಜರಿಗಂತೂ ಅಪ್ಪಣ್ಣನೆಂದರೆ ತೀರ ಅಕ್ಕರೆ. ಅವರು ಹೇಳಿ ಕಳಿಸಿದಾಗಲೆಲ್ಲ ಅಪ್ಪಣ್ಣ ತನ್ನ ಶಹನಾಯಿಯೊಂದಿಗೆ ಮಹಾರಾಜರು ಕಳುಹಿಸಿದ ಕುದುರೆ ಏರಿ ಹೋಗಲೇ ಬೇಕು.

ಒಂದು ಬಾರಿ ಹೀಗೆಯೇ ಮಹಾರಾಜರ ಕರೆ ಬಂದಾಗ ಅವರು ಹೊರಟು ನಿಲ್ಲುತ್ತಾರೆ. ಆಗ ಗ್ರಾಮದಲ್ಲಿ ಯಾರದೋ ದೊಡ್ಡವರ ಮನೆಯಲ್ಲಿ ಕಾರ್ಯಕ್ರಮವಿರುತ್ತದೆ. ಅವರು ಬಂದು ಕರೆದಾಗ  ಮಹಾರಾಜರನ್ನು ಕಾಣಲು ಕೊಲ್ಹಾಪುರಕ್ಕೆ ಹೋಗು­ತ್ತೇನೆಂದು ಹೇಳುತ್ತಾರೆ.

ಆಗ ಸರ್ಕಾರದ ಮಟ್ಟದಲ್ಲಿ ಒಂದಿಷ್ಟು ಪ್ರಭಾ­ವಿ­ಯಾಗಿದ್ದ  ದೊಡ್ಡವರು ಸಿಟ್ಟಿನಿಂದ ‘ಈ ಹಿಂದೆ ನಿಮ್ಮ ಮನೆತನಕ್ಕೆ ಹಾಕಿ ಕೊಡಲಾಗಿರುವ ಉಂಬಳಿ ಜಮೀನನ್ನು (ಈಗಲೂ ‘ಸನಾದಿ ಪಾವ ’ ಎಂದು ಪಹಣಿ ಪತ್ರಿಕೆಯಲ್ಲಿ ದಾಖಲೆ­ಗಳಿವೆ.)ರದ್ದು ಪಡಿಸಲು ಹೇಳುತ್ತೇನೆ’ ಎಂದು ಹೇಳಿದರಂತೆ.

ಅತ್ಯಂತ ಶಾಂತ­ವಾಗಿ ಉತ್ತರಿಸಿದ ಅಪ್ಪಣ್ಣ ‘ನೋಡ್ರೀ, ಸರ್ಕಾರ ಕೊಟ್ಟ ಜಮೀನು ನಾವೇನೂ ಹೊತ್ಗೊಂಡ ತಿರ್ಗೂದೂ ಇಲ್ಲಾ, ಕಿಸೇದಾಗ ಇಟ್ಕೊಳ್ಳಾಕೂ ಬರೂದಿಲ್ಲ. ಜಮೀನು ಅಲ್ಲೇ ಐತಿ, ಏನರೇ ಮಾಡ್ಕೋರ್ರಿ, ಕೊಲ್ಹಾಪುರ ಮಾರಾಜ್ರು ನನ್ನ ಶಹನಾಯಿ ಕೇಳಬೇಕಂತ ಪ್ರೀತಿಯಿಂದ ಹೇಳಿ ಕಳಿಸ್ಯಾರ, ಈ ಹೊಲಾ, ಉಂಬಳಿ, ಜಹಗೀರು ಇವ್ಯಾವೂ ಒಬ್ಬ ಕಲಾವಿದ್ಗ ಡ್ದೂ ಅಲ್ಲ, ನನಗ ನನ್ನ ಸನಾದಿ ಪ್ರೀತಿ ಮಾಡಾವ್ರು ದೊಡ್ಡವ್ರು’ ಎಂದು ಅತ್ಯಂತ ಸ್ವಾಭಿಮಾನದಿಂದ ಉತ್ತರಿಸಿ ಕುದುರೆ ಏರಿ ಕೊಲ್ಹಾಪುರಕ್ಕೆ ನಡೆದರಂತೆ.

ಅವರ ಆತ್ಮ ಗೌರವ, ನಿಷ್ಠುರತೆ ಎಲ್ಲ ಕಲಾವಿದರಿಗೂ ಮಾದರಿಯಾಗಿ ನಿಲ್ಲುವಂತಹುದು. ಒಂದಿಷ್ಟು ಜನ ಓದಿ ದೊಡ್ಡವ­ರಾದರೆ ಅಪ್ಪಣ್ಣ ಓದದೇ ಊದಿ, ಊದಿ ದೊಡ್ಡವರಾದವರು. ಕೆಲವರು ಮುಕುಟವೇರಿಸಿ­ಕೊಂಡು ಸಾಮ್ರಾಟ­ರಾ­ದರೆ ಅಪ್ಪಣ್ಣ ತಮ್ಮ ಸನಾದಿಯ ಸ್ವರ­ಗಳಿಂದಲೇ  ಸ್ವರ ಸಾಮ್ರಾಟನೆಂದು ಕರೆಸಿ­­ಕೊಂಡವರು.

ಹಿಂದೂಸ್ತಾನಿ, ಕರ್ನಾ­ಟಕ ಸಂಗೀತ ಎರಡನ್ನೂ ಶಾಸ್ತ್ರೋಕ್ತ-­ವಾಗಿ ಅಭ್ಯಸಿಸಿದ  ಅಪ್ಪಣ್ಣನವರ ಸನಾದಿಯ ನಾದಕ್ಕೆ ನಾಡಜನತೆಯೇ ಬೆರಗಾಗಿ ಬಿಟ್ಟಿತ್ತು. ಬೇಕಾದಷ್ಟು ಪ್ರಶಸ್ತಿ, ಪುರಸ್ಕಾರಗಳೂ ಸಿಕ್ಕವು. ಇವೆಲ್ಲ­ವುಗಳಿಗಿಂತಲೂ ನಾಡ­ವರ ಪ್ರೀತಿ ಮತ್ತು ಅಭಿಮಾನ ಹೆಚ್ಚೆಂದು ಹೇಳುತ್ತಿದ್ದರು ಅವರು.


ನಾಡಜನತೆಯ, ಸಂಗೀತ ಪ್ರಿಯರ ಮನಸೂರೆಗೊಂಡಿದ್ದ, ಕೀರ್ತಿ ಶಿಖರ­ವನ್ನೇರಿದ್ದ ಅಪ್ಪಣ್ಣನವರ ಕೊನೆಗಾಲ ಒಂದಿಷ್ಟು ಕಷ್ಟಕರವಾಗಿತ್ತು. ಓದಿ, ಸರ್ಕಾರಿ ನೌಕರಿಯಲ್ಲಿದ್ದ ಅಪ್ಪಣ್ಣನವರ ಮಗ ಕುಲಕಸುಬನ್ನು, ಸನಾದಿಯನ್ನು, ಅದನ್ನು ಅತ್ಯಂತ ಗೌರವದಿಂದ ಕಾಣು­ತ್ತಿದ್ದ ಅಪ್ಪಣ್ಣನವರನ್ನು ಕೀಳಾಗಿ ಕಂಡಿದ್ದು ಅಪ್ಪಣ್ಣನವರಿಗೆ ಸಹಿಸಲಸಾಧ್ಯ­ವಾದ ನೋವುಂಟು ಮಾಡುತ್ತದೆ.

ಆ ಕೊರಗು ಅವರನ್ನು ಹಿಂಡಿ ಹಿಪ್ಪೆ ಮಾಡು­ತ್ತದೆ. ಅಂತರ್ಮುಖಿ­ಯಾಗು­ತ್ತಾರೆ. ಒಂದು ದಿನ ನದಿ ಸ್ನಾನಕ್ಕೆ ಹೋದಾಗ ಲಾರಿ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಶಹನಾಯಿ ಸ್ವರ ನಿಲ್ಲಿಸುತ್ತದೆ. ಅಪ್ಪಣ್ಣನವರನ್ನು ನೋಡಿದವರು, ಅವರ ಶಹನಾಯಿ ನಾದ ಕೇಳಿದವರು ‘ಅಪ್ಪಣ್ಣ ನಮ್ಮೂರಾಂವ ಅಂತ ಹೇಳ್ಕೊಳ್ಳೂದ ಖುಷಿ ನೋಡ್ರೀ’ ಎನ್ನುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT