ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ‘ವಿಐಎಸ್‌ಎಲ್‌’ಗಾಗಿ 29,400 ಮರ ಹನನ?

ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಕೆ l ರಾಮನಮಲೈ ‌ವಲಯದಲ್ಲಿ ಗಣಿಗಾರಿಕೆ ಬೇಡ, ಪರಿಸರವಾದಿಗಳ ಆಗ್ರಹ
Published 8 ಜೂನ್ 2024, 23:32 IST
Last Updated 8 ಜೂನ್ 2024, 23:32 IST
ಅಕ್ಷರ ಗಾತ್ರ

ಬಳ್ಳಾರಿ: ‘ಭಾರತೀಯ ಉಕ್ಕು ಪ್ರಾಧಿಕಾರದಡಿ (ಎಸ್‌ಎಐಎಲ್‌) ಬರುವ ಭದ್ರಾವತಿಯ ‘ವಿಶ್ವೇಶ್ವರಾಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಗೆ (ವಿಐಎಸ್‌ಎಲ್‌) ಅದಿರು ಪೂರೈಸುವ ಗಣಿಗಾರಿಕೆ ಸಲುವಾಗಿ ಜಿಲ್ಲೆಯ ಸಂಡೂರು ತಾಲ್ಲೂಕಿನ 150 ಎಕರೆ ದಟ್ಟ ಅರಣ್ಯದ 29,400 ಮರಗಳ ಹನನವಾಗುವ ಆತಂಕ ಎದುರಾಗಿದೆ. 

ಸಂಡೂರು ತಾಲ್ಲೂಕಿನ ರಾಮಗಡ (ರಾಮನಮಲೈ) ‌ವಲಯದ ಅರಣ್ಯ ಭೂಮಿಯಲ್ಲಿ 60.70 ಹೆಕ್ಟೇರ್‌ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕೋರಿ ಎಸ್ಎಐಎಲ್‌ ಕಳೆದ ವರ್ಷ 2023ರಲ್ಲಿ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ‘ಅರಣ್ಯ ಸಂರಕ್ಷಣಾ ಕಾಯ್ದೆ 1980 ಮತ್ತು ಮಾರ್ಗಸೂಚಿ’ ಅನ್ವಯ ಗಣಿಗಾರಿಕೆಗೆ ಅನುಮೋದನೆ ಕೋರಿತ್ತು. 

ಪೂರಕವಾಗಿ ರಾಮನಮಲೈ ಅರಣ್ಯ ಪ್ರದೇಶದ ಸ್ಥಳ ಪರಿಶೀಲಿಸಿ, ನಿರ್ದಿಷ್ಟ ಪ್ರದೇಶದಲ್ಲಿ ಗಿಡ-ಮರಗಳನ್ನು ಎಣಿಕೆ ಮಾಡಿ, ಪಟ್ಟಿ ಮತ್ತು ವರದಿಯನ್ನು ಸಂಡೂರಿನ ಉಪ ವಲಯ ಅರಣ್ಯಾಧಿಕಾರಿಯವರು ವಲಯ ಅರಣ್ಯಾಧಿಕಾರಿಗೆ ಸಲ್ಲಿಸಿದ್ದಾರೆ. ಅದನ್ನು ವಲಯ ಅರಣ್ಯಾಧಿಕಾರಿಯವರು ಬಳ್ಳಾರಿ ಅರಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮುಖಾಂತರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸಲ್ಲಿಸಿದ್ದಾರೆ.  

‘ಪ್ರಾಸ್ತಾವಿಕ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು 91 ವಿಧದ ಒಟ್ಟು 29,400 ಮರಗಳನ್ನು ಕಡಿಯಬೇಕಾಗಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ. 

ಪರಿಸರಕ್ಕೆ ಯಥೇಚ್ಚ ಆಮ್ಲಜನಕ ಬಿಡುಗಡೆ ಮಾಡುವ ಆಲ (504), ಅರಳಿ (243) ಮರಗಳೂ ಪಟ್ಟಿಯಲ್ಲಿವೆ. ಜತೆಗೆ 224 ಮುಳ್ಳು ಹೊನ್ನೆಮರ, 996 ಸಾಗುವಾನಿ, 3244 ದಿಂಡಾಲದ ಮರಗಳೂ ಧರೆಗುರುಳುವ ಆತಂಕವಿದೆ. 

ಸರ್ಕಾರಕ್ಕೆ ಪತ್ರ: ‘ಅರಣ್ಯ ಇಲಾಖೆ ವರದಿ ಆಧರಿಸಿ ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ರಾಮನಮಲೈ ವಲಯದಲ್ಲಿ ಗಣಿಗಾರಿಕೆ ನಡೆಸಲು
‘ವಿಎಸ್‌ಐಎಲ್‌’ಗೆ ಅನುಮೋದನೆ ನೀಡಿದರೆ ಅಪಾಯವಾಗಲಿದೆ. ಅರಣ್ಯದ ಜೊತೆಗೆ ಅತ್ಯಂತ ವಿರಳ ಸಸ್ಯ ಸಂಕುಲ, ಜೀವವೈವಿದ್ಯಕ್ಕೆ ಪೆಟ್ಟು ಬೀಳಲಿದೆ. ಸ್ಥಳೀಯ ಪರಿಸರದ ಮೇಲೂ ಗಂಭೀರ ಪರಿಣಾಮ ಉಂಟಾಗಲಿದೆ’ ಎಂಬ ಆತಂಕ ಪರಿಸರವಾದಿಗಳು ವ್ಯಕ್ತಪಡಿಸುತ್ತಾರೆ.

‘‌ಎಸ್‌ಎಐಎಲ್‌’ಗೆ ದಟ್ಟ ಅರಣ್ಯವನ್ನು ಗಣಿಗಾರಿಕೆಗೆ ನೀಡುವ ಪ್ರಸ್ತಾವವನ್ನು ಆರಂಭಿಕ ಹಂತದಲ್ಲೇ ಸರ್ಕಾರ ತಿರಸ್ಕರಿಸಬೇಕು. ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಆಗ್ರಹಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಾಮಾಜಿಕ ಹೋರಾಟಗಾರ ಎಸ್‌.ಆರ್‌ ಹಿರೇಮಠ ನೇತೃತ್ವದ ‘ಜನ ಸಂಘ್ರಾಮ ಪರಿಷತ್‌’ ಪತ್ರ ಬರೆದಿದೆ. 

ಪ್ರಸ್ತಾವಿತ ಗಣಿಗಾರಿಕೆಗೆ ಗುರುತಿಸಲಾಗಿರುವ ಸಂಡೂರಿನ ರಾಮನಮಲೈ ಅರಣ್ಯ ಪ್ರದೇಶ 
ಪ್ರಸ್ತಾವಿತ ಗಣಿಗಾರಿಕೆಗೆ ಗುರುತಿಸಲಾಗಿರುವ ಸಂಡೂರಿನ ರಾಮನಮಲೈ ಅರಣ್ಯ ಪ್ರದೇಶ 
ಬಳ್ಳಾರಿ ಜಿಲ್ಲೆಯ ಸಂಡೂರಿನ ರಾಮನಮಲೈ ಅರಣ್ಯ ಪ್ರದೇಶದಲ್ಲಿ ವಿಐಎಸ್‌ಎಲ್‌ ಗಣಿಗಾರಿಕೆ ನಡೆಸಲು ಉದ್ದೇಶಿಸಿರುವ ಜಾಗದ ಪಕ್ಕದಲ್ಲೇ  ಮತ್ತೊಂದು ಕಂಪನಿಯ ಗಣಿಗಾರಿಕೆ ಕಾರ್ಯ ನಡೆದಿರುವುದು
ಬಳ್ಳಾರಿ ಜಿಲ್ಲೆಯ ಸಂಡೂರಿನ ರಾಮನಮಲೈ ಅರಣ್ಯ ಪ್ರದೇಶದಲ್ಲಿ ವಿಐಎಸ್‌ಎಲ್‌ ಗಣಿಗಾರಿಕೆ ನಡೆಸಲು ಉದ್ದೇಶಿಸಿರುವ ಜಾಗದ ಪಕ್ಕದಲ್ಲೇ  ಮತ್ತೊಂದು ಕಂಪನಿಯ ಗಣಿಗಾರಿಕೆ ಕಾರ್ಯ ನಡೆದಿರುವುದು
ಮರಗಳ ಗಣತಿ ಕಾರ್ಯ ಪ್ರಗತಿಯಲ್ಲಿದೆ. ವರದಿಯಲ್ಲಿನ ಎಲ್ಲ ಅಂಶಗಳನ್ನು ಪರಾಮರ್ಶಿಸಿ ಕೇಂದ್ರ ಸರ್ಕಾರಕ್ಕೆ ನೀಡಲಾಗುವುದು. ಗಣಿಗಾರಿಕೆಗೆ ಅನುಮತಿ ನೀಡಬೇಕೆ ಅಥವಾ ಬೇಡವೇ ಎಂಬುದು ಅಲ್ಲಿ ನಿರ್ಧಾರವಾಗಲಿದೆ.
ಸಂದೀಪ್‌ ಸೂರ್ಯವಂಶಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಳ್ಳಾರಿ
ಸಂಡೂರಿನ ಅರಣ್ಯ ವಿಶಿಷ್ಟವಾದದ್ದು. ಪಶ್ಚಿಮ ಘಟ್ಟವನ್ನೇ ಹೋಲುವಂತಿದೆ. ಇಲ್ಲಿ ಗಣಿಗಾರಿಕೆ ನಡೆದರೆ ಅರಣ್ಯದ ಜತೆಗೆ ಜೀವಿ ಪರಿಸರ ಜನಜೀವನದ ಮೇಲೆ ಕೆಟ್ಟ ಪರಿಣಾಮವಾಗಲಿದೆ.
ಶ್ರೀಶೈಲ ಆಲದಹಳ್ಳಿ, ಪರಿಸರ ಹೋರಾಟಗಾರ ಸಂಡೂರು
‘ಸರ್ಕಾರದ ದ್ವಂದ್ವ ನಿಲುವು’
ಸಂಡೂರಿನಲ್ಲಿ ನಡೆದಿರುವ ಗಣಿಗಾರಿಕೆಯಿಂದ ಹಾಳಾದ ಅರಣ್ಯ ಪ್ರದೇಶದ ಪುನಶ್ಚೇತನಕ್ಕೆ ಕರ್ನಾಟಕ ಗಣಿ ಪ್ರದೇಶ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ) ನೂರಾರು ಕೋಟಿ ರೂಪಾಯಿ ಹಣ ವ್ಯಯಿಸಿದೆ. ಸಂಡೂರು ಅರಣ್ಯದ ತುಂಬರಗುಡ್ಡಿ ಬ್ಲಾಕ್‌ ಈಶಾನ್ಯ ಬ್ಲಾಕ್‌ನ ಜೋಗ - ‘ಬಿ’ ಮತ್ತು ಜೋಗ -‘ಸಿ’ ಬ್ಲಾಕ್ ರಾಮನಮಲೈ ಬ್ಲಾಕ್‌ನಲ್ಲಿ ಲಕ್ಷಾಂತರ ಗಿಡಗಳನ್ನು ನೆಡೆಲಾಗುತ್ತಿದೆ.  ‘ಒಂದೆಡೆ ಹೊಸ ಗಣಿಗಾರಿಕೆಗೆ ಅನುಮತಿ ನೀಡಿ ಸರ್ಕಾರಗಳೇ ಅರಣ್ಯನಾಶ ಮಾಡುತ್ತಿದ್ದರೆ ಮತ್ತೊಂದೆಡೆ ಅರಣ್ಯೀಕರಣಕ್ಕೆ ಸರ್ಕಾರವೇ ಕೋಟ್ಯಂತರ ಹಣ ಸುರಿಯುತ್ತಿದೆ. ಇದು ಸರ್ಕಾರಗಳ ಧ್ವಂದ್ವಕ್ಕೆ ಸಾಕ್ಷಿ’ ಎಂದು ಪರಿಸರ ಹೋರಾಟಗಾರ ಶ್ರೀಶೈಲ ಆಲದಹಳ್ಳಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT