ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ಆತ್ಮಹತ್ಯೆಗೆ ಯತ್ನಿಸಿದ್ದ ರೈತರಿಗೆ ಚಿಕಿತ್ಸೆ ಮುಂದುವರಿಕೆ

Published 1 ಜುಲೈ 2024, 15:18 IST
Last Updated 1 ಜುಲೈ 2024, 15:18 IST
ಅಕ್ಷರ ಗಾತ್ರ

ಬಳ್ಳಾರಿ/ಕುರುಗೋಡು: ಒಣ ಮೆಣಸಿನಕಾಯಿ ಖರೀದಿಸಿದ ಮಧ್ಯವರ್ತಿಗಳು ಹಣ ಪಾವತಿಸದ ಹಿನ್ನೆಲೆಯಲ್ಲಿ ಮನನೊಂದು ಭಾನುವಾರ ಕ್ರಿಮಿನಾಶಕ ಕುಡಿದಿದ್ದ ನಾಲ್ವರು ರೈತರ ಪೈಕಿ ಮೂವರ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ಎಂದು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್‌) ತಿಳಿಸಿದೆ. 

‘ಸೋಮಸಮುದ್ರ ಗ್ರಾಮದ ಕೆ.ಕೋಣೀರಪ್ಪ, ಗುಡಿಸಲು ಹನುಮಂತ, ಎಣ್ಣೆ ಶೇಖರಪ್ಪ, ಕಂಪ್ಲಿ ತಾಲ್ಲೂಕಿನ ಜವುಕು ಗ್ರಾಮದ ರುದ್ರೇಶ್ ಕ್ರಿಮಿನಾಶಕ ಕುಡಿದ್ದರು. ಅವರ ಪೈಕಿ ಕೋಣೀರಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಇನ್ನುಳಿದ ‘ಮೂವರನ್ನು ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಇನ್ನೂ ಎರಡು ದಿನಗೆ ಅವರ ಮೇಲೆ ನಿಗಾ ವಹಿಸಲಾಗುವುದು’ ಎಂದು ವಿಮ್ಸ್‌ ನಿರ್ದೇಶಕ ಡಾ ಟಿ. ಗಂಗಾಧರ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

2023ರ ಮಾರ್ಚ್‌ನಲ್ಲಿ ವಿರೂಪಾಕ್ಷಿ ಮತ್ತು ರಾಮರೆಡ್ಡಿ ಎಂಬ ಮಧ್ಯವರ್ತಿಗಳು ‘ಅಗ್ರಿ ಗ್ರೀಡ್ ಸರ್ವೀಸ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ’ ಹೆಸರಿನಲ್ಲಿ ಸೋಮಸಮುದ್ರ ಗ್ರಾಮದ 62 ರೈತರಿಂದ ₹5.28 ಕೋಟಿ ಮೌಲ್ಯದ 2.40 ಲಕ್ಷ ಕೆಜಿ ಒಣಮೆಣಸಿನಕಾಯಿ ಖರೀದಿಸಿದ್ದರು. ಮೂರು ಕಂತುಗಳಲ್ಲಿ ₹3.35 ಕೋಟಿ ಹಣ ಪಾವತಿಸಿ ₹1.93 ಕೋಟಿ ಬಾಕಿ ಉಳಿಸಿದ್ದರು. ರೈತರು ಹಲವು ಬಾರಿ ಕೇಳಿದರೂ ಬಾಕಿ ಪಾವತಿಸಿರಲಿಲ್ಲ. ಈ ಬಗ್ಗೆ ಜೂನ್‌ 20ರಂದು ಕುರುಗೋಡು ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿತ್ತು.

ಈ ಮಧ್ಯೆ ಬಾಕಿ ಹಣಕ್ಕೆ ಒತ್ತಾಯಿಸಿ ರೈತರು ಭಾನುವಾರ ರಾಮರೆಡ್ಡಿ ಮನೆ ಬಳಿ ತೆರಳಿದ್ದರು. ಈ ವೇಳೆ ಆದ ವಾಗ್ವಾದಲ್ಲಿ ನಾಲ್ವರು ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆತ್ಮಹತ್ಯೆ ಯತ್ನ ಘಟನೆಗೆ ಸಂಬಂಧಿಸಿದಂತೆ ಈ ವರೆಗೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT