ಕಂಪ್ಲಿ: ತಾಲ್ಲೂಕಿನ ದೇವಲಾಪುರ ಗ್ರಾಮದ ಬಳಿಯ ಚೆಕ್‍ಡ್ಯಾಂನಿಂದ ಆರಂಭಗೊಳ್ಳುವ ಪಿಕ್‍ಅಪ್ ಕಾಲುವೆಯಲ್ಲಿ ಸಾಮರ್ಥ್ಯ ಮೀರಿ ತಡೆಗೋಡೆ ಮೇಲಿಂದ ನೀರು ಹರಿದು ಪಕ್ಕದ ಗದ್ದೆಗಳಿಗೆ ನುಗ್ಗುತ್ತಿದೆ. ಅದನ್ನು ತಡೆಯಲು ರೈತರು ಮಣ್ಣು ತುಂಬಿದ ಮೂಟೆಗಳನ್ನು ತಡೆಗೋಡೆ ಮೇಲೆ ತಾತ್ಕಾಲಿಕವಾಗಿ ಶುಕ್ರವಾರ ಅಳವಡಿಸಿದರು.
ಈ ಕುರಿತು ರೈತ ನಾಯಕರ ಪೂಜಾರಿ ಲಕ್ಷ್ಮಪ್ಪ ಮಾತನಾಡಿ, ಪಿಕ್‍ಅಪ್ ಕಾಲುವೆಯ ಎರಡು ಬದಿಯ ತಡೆಗೋಡೆಗಳ ಎತ್ತರ ಕಡಿಮೆ ಇರುವುದರಿಂದ ಹಲವು ರೈತರ ಗದ್ದೆಗೆ ನೀರು ಹೊಕ್ಕಿದೆ. ನಾಟಿ ಮಾಡಿದ ಭತ್ತದ ಸಸಿ, ಪೈರು ನೀರಿನ ಹೊಡೆತಕ್ಕೆ ಕೊಚ್ಚಿ ಹೋಗುತ್ತಿದೆ. ಜೊತೆಗೆ ಕಾಲುವೆ ನೀರು ಮೇಲ್ಭಾಗದಲ್ಲಿಯೇ ವ್ಯರ್ಥವಾಗುವುದರಿಂದ ಕಡೆ ಅಂಚಿನ ಭೂಮಿಗಳ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ’ ಎಂದು ದೂರಿದರು.
ಕಾಲುವೆಯ ಎರಡು ಬದಿಯ ತಡೆಗೋಡೆ ಕನಿಷ್ಠ 2 ಅಡಿ ಎತ್ತರಿಸಬೇಕು ಎಂದು ಸಣ್ಣ ನೀರಾವರಿ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯವಹಿಸಿದ್ದಾರೆ. ಶಾಸಕರ ಗಮನಕ್ಕೂ ತರಲಾಗಿದೆ ಎಂದು ರೈತರಾದ ತಿಪ್ಪಮ್ಮ, ಕುರಿ ಪಂಪಾಪತಿ, ಕುರಿ ಹುಚ್ಚಪ್ಪ, ಹೊಳೆಕಡೆ ಮಹೇಶ್, ಪವಾಡಿ ಸಂತೆ ಹನುಮಂತಪ್ಪ, ತುಂಬಳದ ಈರಣ್ಣ, ತುಂಬಳದ ವಿರುಪಣ್ಣ, ಮಾರೇಶ್, ರಮೇಶ್, ಕುರಿ ಕರಿಬಸಪ್ಪ, ಹೊನ್ನಯ್ಯ, ಸಂಗ್ಟಿ ಹೇಮಣ್ಣ, ಕೆ. ಹನುಮಯ್ಯ ತಿಳಿಸಿದರು.
₹1.25ಕೋಟಿ ವೆಚ್ಚದಲ್ಲಿ ಕಳೆದ ವರ್ಷ ಚೆಕ್‍ಡ್ಯಾಂ ಮತ್ತು 800 ಮೀ ಪಿಕ್‍ಅಪ್ ಕಾಲುವೆ ನಿರ್ಮಿಸಿದೆ. ಕಾಲುವೆ ನಿರ್ಮಾಣ ಸಂದರ್ಭದಲ್ಲಿ ರಸ್ತೆ ಬಲಗಡೆ 300ಮೀ ಅಂತರದಲ್ಲಿ ನೆಲದಡಿಯಲ್ಲಿ ಪೈಪ್‍ಲೈನ್ ಹಾದುಹೋಗಿದ್ದು, ಅಲ್ಲಿನ ರೈತರು ತೆರವುಗೊಳಿಸಲು ಸಹಕರಿಸಲಿಲ್ಲ. ಈ ತಾಂತ್ರಿಕ ಸಮಸ್ಯೆ ಸರಿಪಡಿಸಿದಲ್ಲಿ ಕಾಲುವೆ ತಡೆಗೋಡೆ ಮೇಲಿಂದ ನೀರು ಹರಿಯುವುದಿಲ್ಲ. ಈ ಸ್ಥಳದಲ್ಲಿ ಜೆಸಿಬಿ ಯಂತ್ರ ಬಳಸಿ ಕಾಮಗಾರಿ ನಿರ್ವಹಿಸಬೇಕಿದ್ದು, ಮುಂಗಾರು ಬೆಳೆ ಕೊಯ್ಲು ನಂತರ ಸರಿಪಡಿಸಲಾಗುವುದು. ಅಲ್ಲಿಯವರೆಗೆ ರೈತರು ಸಹಕರಿಸುವಂತೆ ಬಳ್ಳಾರಿಯ ಸಣ್ಣ ನೀರಾವರಿ ಉಪ ವಿಭಾಗದ ಎಇಇ ಶ್ರೀನಿವಾಸ್ .ಟಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.