ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಮಹತ್ವ ಸಾರುವ ಅನಂತಶಯನ

Published 20 ಆಗಸ್ಟ್ 2023, 6:10 IST
Last Updated 20 ಆಗಸ್ಟ್ 2023, 6:10 IST
ಅಕ್ಷರ ಗಾತ್ರ

ಕೆ.ಸೋಮಶೇಖರ್

ಹೂವಿನಹಡಗಲಿ: ತಾಲ್ಲೂಕಿನ ಹೊಳಲು ಗ್ರಾಮದ ಅನಂತಶಯನ ದೇವಸ್ಥಾನ ಹಲವು ವೈಶಿಷ್ಟ್ಯಗಳೊಂದಿಗೆ ಐತಿಹಾಸಿಕ ಮಹತ್ವ ಸಾರುತ್ತಿದೆ. ಈ ದೇವಾಲಯದಲ್ಲಿ ಪ್ರಾಚೀನ ಅನಂತಶಯನ ವಿಗ್ರಹ ನಿತ್ಯ ಪೂಜೆಗೊಳ್ಳುತ್ತದೆ. ಇಲ್ಲಿರುವ ಅದ್ಭುತ ಕುಸುರಿ ಕೆತ್ತನೆಯ ಬೃಹತ್ ಮೂರ್ತಿ ಶಿಲ್ಪ ಈ ಭಾಗದಲ್ಲಿ ಎಲ್ಲಿಯೂ ಇಲ್ಲ. ದೈವಿಕ ಭಾವದಿಂದ ಬರುವವರಿಗೆ ಈ ದೇಗುಲ ಭಕ್ತಿಯ ನೆಲೆಯಾದರೆ, ಇತಿಹಾಸ ಅರಿಯುವವರಿಗೆ ಕುತೂಹಲದ ಕೇಂದ್ರವೂ ಆಗಿದೆ.

ದೇವಸ್ಥಾನ ಗರ್ಭಗೃಹದಲ್ಲಿ ಪವಡಿಸಿದ ಸ್ಥಿತಿಯಲ್ಲಿರುವ ಚತುರ್ಭುಜಧಾರಿ ಅನಂತಶಯನನ್ನು ಏಕ ಕಪ್ಪುಕಣ ಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ. ಎಡಗೈಯನ್ನು ತಲೆಯ ಕೆಳಗೆ ದಿಂಬಿನಂತೆ ಇರಿಸಿ ಪವಡಿಸಿರುವ ಅನಂತಶಯನ ಬಲಗೈಯಲ್ಲಿ ಶಂಖ, ಮತ್ತೊಂದು ಎಡಗೈಯಲ್ಲಿ ಗದೆ ಹಿಡಿದ ವಿಗ್ರಹ ಕೆತ್ತಲಾಗಿದೆ. ಅಲಂಕೃತ ಕಿರೀಟ, ಇಳಿ ಬಿಟ್ಟಿರುವ ಕರ್ಣ ಕುಂಡಲ, ಕೈ, ಕಾಲುಗಳಿಗೆ ಕಡಗ, ನೀಳ ಕೇಶರಾಶಿ, ಮುಖ, ಬಾಯಿ, ಗಲ್ಲವನ್ನು ಅತ್ಯಂತ ಆಕರ್ಷಕವಾಗಿ ಕೆತ್ತಲಾಗಿದೆ.

ವಿಜಯನಗರದ ಅರಸರು ಹೊಸಪೇಟೆ ತಾಲ್ಲೂಕಿನ ಅನಂತಶಯನಗುಡಿಯಲ್ಲಿ ನಿರ್ಮಿಸಿರುವ ದೇವರಿಲ್ಲದ ಭವ್ಯ ದೇಗುಲಕ್ಕೂ ಹೊಳಲು ಅನಂತಶಯನ ವಿಗ್ರಹಕ್ಕೂ ಸಾಮ್ಯತೆ ಇದೆ ಎಂದು ಕೆಲವರು ಹೇಳುತ್ತಾರೆ. ಕೆಲವರು ಇದನ್ನು ಅಲ್ಲಗಳೆಯುತ್ತಾರೆ. ಯಾವುದಕ್ಕೂ ಪುರಾವೆಗಳು ಲಭ್ಯವಾಗಿಲ್ಲ.

ಪಾಳು ಬಿದ್ದಿದ್ದ ಇಲ್ಲಿನ ದೇಗುಲವನ್ನು ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರು 2006ರಲ್ಲಿ ಸಚಿವರಿದ್ದಾಗ ಜೀರ್ಣೊದ್ಧಾರಗೊಳಿಸಿದ್ದಾರೆ. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಟ್ರಸ್ಟ್ ಮತ್ತು ಬೆಂಗಳೂರು ಇಸ್ಕಾನ್ ಸಂಸ್ಥೆಯಿಂದ ₹ 38 ಲಕ್ಷ ನೆರವು ಕೊಡಿಸಿ, ಗರ್ಭಗುಡಿ, ದೇವಸ್ಥಾನ ಮಂಟಪ, ಗೋಪುರವನ್ನು ನಿರ್ಮಿಸಿ ಕೊಟ್ಟಿದ್ದಾರೆ.

ಸಮೀಪದ ಸುಕ್ಷೇತ್ರಗಳಾದ ಮೈಲಾರ, ಕುರುವತ್ತಿಗೆ ಬರುವ ಭಕ್ತರು ಹೊಳಲು ಗ್ರಾಮಕ್ಕೂ ಭೇಟಿ ನೀಡಿ ಅನಂತಶಯನ ದರ್ಶನ ಪಡೆಯುತ್ತಾರೆ. ಬೆಂಗಳೂರು, ಶಿವಮೊಗ್ಗ, ದಾವಣಗೆರೆಯ ಭಕ್ತರು ವರ್ಷದ ಎಲ್ಲ ಕಾಲದಲ್ಲೂ ಬಂದು ಹೋಗುತ್ತಾರೆ. ಆದರೆ, ಇಲ್ಲಿ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತದೆ. ಸರ್ಕಾರ ಸೌಲಭ್ಯ ಕಲ್ಪಿಸಿ ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಭಕ್ತರ ಆಗ್ರಹವಾಗಿದೆ.

ಅನಂತಶಯನ ದೇವಸ್ಥಾನ
ಅನಂತಶಯನ ದೇವಸ್ಥಾನ

ದವನದ ಹುಣ್ಣಿಮೆಯಲ್ಲಿ ಜಾತ್ರೆ ಪ್ರತಿವರ್ಷ ಚೈತ್ರಮಾಸದ ದವನ ಹುಣ್ಣಿಮೆಯಂದು ಇಲ್ಲಿ ಅನಂತಶಯನ ರಥೋತ್ಸವ ಜರುಗುತ್ತದೆ. ಮಾರನೇ ದಿನ ಓಕಳಿ ಉತ್ಸವ ನಡೆಯುತ್ತದೆ. ವೈಕುಂಠ ಏಕಾದಶಿ ಮುಕ್ಕಟ ಏಕಾದಶಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಸೆಪ್ಟಂಬರ್ ತಿಂಗಳಲ್ಲಿ ಅನಂತ ಪದ್ಮನಾಭ ವೃತ ಜರುಗುತ್ತದೆ. ಅನಂತಶಯನ ಟ್ರಸ್ಟ್ ಕಮಿಟಿಯವರು ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT