ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನಾರದಮುನಿ ರಥೋತ್ಸವ ನಾಳೆ

Published 27 ಏಪ್ರಿಲ್ 2024, 5:06 IST
Last Updated 27 ಏಪ್ರಿಲ್ 2024, 5:06 IST
ಅಕ್ಷರ ಗಾತ್ರ

ಹರಪನಹಳ್ಳಿ: ಕಳೆದ ವರ್ಷ ಬರ ಅನುಭವಿಸಿರುವ ತಾಲ್ಲೂಕಿನ ಜನತೆ ಈ ವರ್ಷಾರಂಭ ಮಳೆ ಬಂದಿದ್ದರಿಂದ ಹರ್ಷಿತರಾಗಿದ್ದಾರೆ. ಇವುಗಳ ಮಧ್ಯೆ ಏ.28ರಂದು ಸಂಜೆ 5 ಗಂಟೆಗೆ ಮೂಲಾ ನಕ್ಷತ್ರದಲ್ಲಿ ತಾಲ್ಲೂಕಿನ ಚಿಗಟೇರಿ ನಾರದಮುನಿ ಬ್ರಹ್ಮ ರಥೋತ್ಸವ ಜರುಗಲಿದ್ದು, ಸಕಲ ಸಿದ್ಧತೆಗಳು ನಡೆದಿವೆ.

ಸ್ವಾಮಿ, ಮಹರ್ಷಿ, ತಪೋನಿಧಿಗಳಿಗೆ ತಾಣ ಕೊಟ್ಟ ಸ್ಥಳ ಇದಾಗಿದೆ. ಶಿವನಾರದಮುನಿಯ ಕ್ಷೇತ್ರ ಮೊದಲು ಬಳ್ಳಾರಿ, ನಂತರ ದಾವಣಗೆರೆ, ಪುನಃ ಬಳ್ಳಾರಿಗೆ ಸೇರ್ಪಡೆಯಾಗಿ ಪ್ರಸ್ತುತ ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಒಳಪಟ್ಟಿದೆ.

ದಂಡಗಂಟೆ ಬಾರಿಸುತ್ತ, ಶಿವನಾರದಮುನಿ ಗೋವಿಂದಾ ಗೋವಿಂದ ಎಂದು ದೇವನನ್ನು ಜಪಿಸಿ, ಬೆಳಿಗ್ಗೆ ಎಡೆ ಸಮರ್ಪಣೆ, ಸಂಜೆ ನಾರು ಸಮರ್ಪಣೆಯೊಂದಿಗೆ ಮೂಲಾ ನಕ್ಷತ್ರದಲ್ಲೇ ರಥ ಎಳೆಯುತ್ತಾರೆ. ಬೆಳಿಗ್ಗೆ ಬಾಲಕನಾಗಿ, ಮಧ್ಯಾಹ್ನ ಯುವಕನಾಗಿ ಸಂಜೆ ಮುದುಕನಾಗಿ ನಾರದಮುನಿ ಪೂಜೆಗೊಳಗಾಗುತ್ತಾನೆ. ಆದರೆ ರಥವನ್ನೇರುವುದು ಮಾತ್ರ ವಿಷ್ಣುವಿನ ಉತ್ಸವಮೂರ್ತಿ.

ಏ.29ರ ಸಂಜೆ 5.30ಕ್ಕೆ ಓಕಳಿ ಉತ್ಸವ ನಡೆಯಲಿದೆ. ರಥೋತ್ಸವ ಆದ ಮೂರನೇ ದಿನ ಸಂಜೆ ವಿಷ್ಣು ಹಾಗೂ ಸಾವಕ್ಕನಿಗೂ ವಿವಾಹ ನೆರವೇರುತ್ತದೆ.

ಎಡೆ: ಅಕ್ಕಿ, ಬಾಳೆ ಹಣ್ಣು, ಬೆಲ್ಲ, ಹಾಲು ತುಪ್ಪದಿಂದ ತಯಾರಿಸಿದ ಅಕ್ಕಿ ಹುಗ್ಗಿಯನ್ನು ಮಾತ್ರ ಮುನಿಗೆ ನೈವೇದ್ಯ ಮಾಡಲಾಗುತ್ತದೆ. ಸುಡುವ ಮಣ್ಣಿನ ಮಡಕೆಯನ್ನು ಮಡಿಯಲ್ಲಿ ಹೆಗಲ ಮೇಲೆ ಹೊತ್ತು ದೇವಸ್ಥಾನ ಪ್ರದಕ್ಷಿಣೆ ಮಾಡಿ ನೈವೇದ್ಯ ಸಲ್ಲಿಸಿ, ಪ್ರಸಾದ ಹಂಚುವ ಪದ್ಧತಿ ಇದೆ. 60ಕ್ಕೂ ಹೆಚ್ಚು ಬೆಡಗಿನವರು ಪ್ರತ್ಯೇಕವಾಗಿ ಎಡೆ ಸೇವೆ ಸಲ್ಲಿಸುತ್ತಾರೆ.

ಬಾಳೆ ಹಣ್ಣು ನಿಷೇಧ: ಎಲ್ಲೆಡೆ ರಥಗಳಿಗೆ ಉತ್ತುತ್ತೆ, ಬೆಲ್ಲ, ಹಣ್ಣು ಎಸೆದು ಭಕ್ತಿ ಸಮರ್ಪಿಸಿದರೆ, ಇಲ್ಲಿನ ಬ್ರಹ್ಮ ರಥಕ್ಕೆ ಭಕ್ತರು ನಾರಿನ (ಕತ್ತಾಳೆ ನಾರು) ಕಟ್ಟು ಎಸೆದು ಹರಕೆ ತೀರಿಸುತ್ತಾರೆ. ನಾರದಮುನಿಗೆ ನಾರನ್ನು ಸಮರ್ಪಿಸುವ ಸಂಪ್ರದಾಯ ರಾಜ್ಯದಲ್ಲೇ ವಿಶಿಷ್ಟವಾಗಿದೆ. ಹಾಗಾಗಿಯೇ ‘ಚಿಗಟೇರಿ ಎಂಬ ಊರಿಲ್ಲ, ನಾರಪ್ಪನೆಂಬ ದೇವರಿಲ್ಲ’ ಎನ್ನುವ ನಾಣ್ಣುಡಿ ಜನರ ಬಾಯಲ್ಲಿ ಹರಿದಾಡುತ್ತದೆ.

ದೇವಸ್ಥಾನದ ಇತಿಹಾಸ: ಎಂಟನೇ ಶತಮಾನದಲ್ಲಿ ಉತ್ತರ ಭಾರತದಿಂದ ಬಂದು ಮಧ್ಯ ಕರ್ನಾಟಕದಲ್ಲಿ ನೆಲೆನಿಂತು, ತಪಗೈದ ಬೈರೇಶ ತನ್ನ ತಪಃಶಕ್ತಿಯಿಂದ ಭಕ್ತನ ಮೈಮೇಲಿನ ನಾರುಹುಣ್ಣು (ಚರ್ಮದ ಮೇಲಿನ ಗಂಟು) ನಿವಾರಣೆ ಮಾಡಿದ. ಅಂದಿನಿಂದ ನಾರನ್ಮುನಿ, ಶಿವನಾರದಮುನಿ ಎಂಬುದು ಪ್ರಚಲಿತಕ್ಕೆ ಬಂತು. ನಂತರ ಹುಲ್ಲೂರಿನಿಂದ ಚಿಗಟೇರಿ ಗ್ರಾಮದ ಕ್ಷಾಮ ನಿವಾರಣೆಗೆ ಬಂದು ನೆಲೆಸಿದರೆಂದು, ಅಲ್ಲಿಯ ನಾಡಗೌಡರು ದೇವಸ್ಥಾನ (ಹಳೆಯ) ನಿರ್ಮಿಸಿದರು ಎಂದು ಇತಿಹಾಸವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT