ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶೋಭಾರಾಣಿ ಬಳ್ಳಾರಿ ಎಸ್‌ಪಿ

ಜಿಲ್ಲೆಯ ಮೊದಲ ಪೊಲೀಸ್‌ ವರಿಷ್ಠಾಧಿಕಾರಿ ಎಂಬ ಕೀರ್ತಿ
Published 3 ಜುಲೈ 2024, 14:47 IST
Last Updated 3 ಜುಲೈ 2024, 14:47 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ಮೊಲದ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಡಾ.ಶೋಭಾರಾಣಿ ವಿ.ಜಿ ಬುಧವಾರ ಅಧಿಕಾರ ವಹಿಸಿಕೊಂಡರು.

ನಗರದ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ನಿರ್ಗಮಿತ ಎಸ್‌ಪಿ ರಂಜಿತ್‌ ಕುಮಾರ್‌ ಬಂಡಾರು ಅವರು ಶೋಭಾರಾಣಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭಾಶಯ ಕೋರಿದರು.  

ಈ ಹಿಂದೆ ಬಳ್ಳಾರಿ ಎಸ್‌ಪಿಯಾಗಿದ್ದ ರಂಜಿತ್‌ ಕುಮಾರ್‌ ಅವರನ್ನು ಸರ್ಕಾರ ವರ್ಗಾಯಿಸಿದೆಯಾದರೂ, ಸದ್ಯಕ್ಕೆ ಯಾವುದೇ ಸ್ಥಾನ ತೋರಿಸಿಲ್ಲ.

ಪರಿಚಯ:

2016ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಶೋಭಾ ರಾಣಿ ಸದ್ಯ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮೊದಲು  ತುಮಕೂರು, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚುವರಿ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಇದರ ಜತೆಗೆ, ಬೆಂಗಳೂರು ಪಶ್ಚಿಮ ಸಂಚಾರ ಪೊಲೀಸ್‌ ವಲಯದ ಡಿಸಿಪಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಬೆಸ್ಕಾಂ ವಿಚಕ್ಷಣ ದಳ, ಕೇಂದ್ರ ವಲಯ ಎಸಿಬಿಯ ಎಸ್‌ಪಿಯಾಗಿದ್ದರು. ಸದ್ಯ ಅವರು ಬಳ್ಳಾರಿಯ ಮೊದಲ ಮಹಿಳಾ ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 

ಹಲವು ಸವಾಲುಗಳು: ಜಿಲ್ಲೆಯಲ್ಲಿ ಮಟಕಾ, ಜೂಜು, ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಈ ವರ್ಷ ಇಲ್ಲಿಯ ವರೆಗೆ ಮಟಕಾ ದಂಧೆ ಪ್ರಕರಣಗಳು 165 ಆಗಿದ್ದರೆ, ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣಗಳು 15. ಜೂಜಾಟದ ಪ್ರಕರಣಗಳು 71 ಆಗಿವೆ. ಇವುಗಳ ಹಿಂದೆ ಪ್ರಬಲರು, ರಾಜಕಾರಣಿಗಳ ಕರಿನೆರಳಿದೆ ಎಂಬ ಆರೋಪ ಸಾರ್ವಜನಿಕರ ವಲಯದಲ್ಲಿದೆ.

ಇದರ ಜತೆಗೆ ಆನ್‌ಲೈನ್‌ ವಂಚನೆಗೆ ಜಿಲ್ಲೆಯಲ್ಲಿ ಬಹಳಷ್ಟು ಜನ ಕೋಟ್ಯಂತರ ಹಣ ಕಳೆದುಕೊಂಡಿದ್ದಾರೆ. ಇವುಗಳ ನಿಯಂತ್ರಣದ ನಿಟ್ಟಿಯಲ್ಲಿ ಶೋಭಾ ಅವರ ಮೇಲೆ ಹಲವು ನಿರೀಕ್ಷೆಗಳಿವೆ. 

ಜಿಲ್ಲೆಯ ಪೊಲೀಸ್‌ ಇಲಾಖೆಯಲ್ಲಿ ಮಂಜೂರಾದ ಒಟ್ಟು 987 ಹುದ್ದೆಯಲ್ಲಿ 120 ಹುದ್ದೆಗಳು ಖಾಲಿ ಉಳಿದಿವೆ ಎಂದು ಇಲಾಖೆಯ ಅಧಿಕೃತ ಅಂಕಿ ಅಂಶಗಳೇ ಹೇಳುತ್ತಿದೆ. ಸಿಬ್ಬಂದಿ ಕೊರತೆಯನ್ನು ಸರಿದೂಗಿಸುವುದೂ ಶೋಭಾ ಅವರ ಮುಂದಿರುವ ಸವಾಲುಗಳಲ್ಲಿ ಒಂದು. 

- ಸವಾಲು ನಿಭಾಯಿಸಿದ್ದ ಶೋಭಾ 

ಬೆಂಗಳೂರು ಹೊರವಲಯದ ನೆಲಮಂಗಲದವರಾದ ಶೋಭಾರಾಣಿ ಅವರು ಮೂಲತಃ ದಂತ ವೈದ್ಯೆ. ತಾಯಿಯ ಆಸೆಯಂತೆ ವೈದ್ಯೆಯಾಗಿದ್ದ ಅವರು ಪೊಲೀಸ್‌ ವೃತ್ತಿಗಾಗಿ ವೈದ್ಯಕೀಯ ಕ್ಷೇತ್ರ ತೊರೆದಿದ್ದರು. ವೃತ್ತಿ ಜೀವನದಲ್ಲಿ ಹಲವು ಸವಾಲುಗಳನ್ನು ಶೋಭಾ ಕಂಡಿದ್ದಾರೆ. 2019ರ ಜನವರಿಯಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದಾಗ ಶೋಭಾ ತುಮಕೂರು ಜಿಲ್ಲೆಯ ಹೆಚ್ಚುವರಿ ಎಸ್‌ಪಿಯಾಗಿದ್ದರು. ಶೋಭಾರಾಣಿಯವರು ಜಿಲ್ಲೆಯಲ್ಲಿ ನಿರಂತರ ಮೂರು ದಿನಗಳ ಕಾಲ ಬಂದೋಬಸ್ತ್‌ ಬಿಗಿಗೊಳಿಸಿ ಯಾವುದೇ ಅಹಿತಕರ ಘಟನೆಗಳು ನಡೆದಂತೆ ಎಚ್ಚರಿಕೆ ವಹಿಸಿದ್ದರು. ಇದಕ್ಕಾಗಿ ಭಾರಿ ಮೆಚ್ಚುಗೆಗೂ ಅವರು ಪಾತ್ರವಾಗಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT