ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗೇಂದ್ರ ಇನ್ನೂ ರಾಜೀನಾಮೆ ನೀಡಿಲ್ಲ ಏಕೆ?: ರವಿಕುಮಾರ್‌ ಪ್ರಶ್ನೆ

Published 29 ಮೇ 2024, 8:54 IST
Last Updated 29 ಮೇ 2024, 8:54 IST
ಅಕ್ಷರ ಗಾತ್ರ

ಬಳ್ಳಾರಿ: ‘ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮಗಳನ್ನು ಬಯಲು ಮಾಡಿ  ಅಧೀಕ್ಷಕ ಚಂದ್ರಶೇಖರ್‌ ಪಿ. ಆತ್ಮಹತ್ಯೆ ಮಾಡಿಕೊಂಡು ಮೂರು ದಿನ ಕಳೆದರೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರು ರಾಜೀನಾಮೆ ಏಕೆ ನೀಡಿಲ್ಲ’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎನ್‌. ರವಿಕುಮಾರ್‌ ಪ್ರಶ್ನೆ ಮಾಡಿದ್ದಾರೆ.  

ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಹಣವನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ಗೊತ್ತಿಲ್ಲದೇ ಬೇರೆ ಬ್ಯಾಂಕ್‌ ಖಾತೆಗಳಿಗೆ ಹೇಗೆ ವರ್ಗಾಯಿಸಲಾಯಿತು. ಖಾತೆಗಳನ್ನು ಹೇಗೆ ತೆರೆಯಲಾಯಿತು. ₹50 ಕೋಟಿ ಹಣವನ್ನು ಡ್ರಾ ಮಾಡಿ ಎಂದು ಅಧಿಕಾರಿಗಳಿಗೆ ಸಚಿವರು ಮೌಖಿಕ ಆದೇಶ ನೀಡಿದ್ದಾರೆ. ಆದರೆ, ಅಧಿಕಾರಿಗಳು ಒಪ್ಪದಿದ್ದಾಗ, ಅವರ ಸಹಿಯೇ ಇಲ್ಲದೇ ಹಣ ಡ್ರಾ ಮಾಡಲಾಗಾಗುತ್ತದೆ. ಈ ಹಣವನ್ನು ಯಾರಿಗೆ ಕೊಡಲಾಯಿತು, ಯಾಕೆ ಕೊಡಲಾಯಿತು‘ಎಂದು ಅವರು ಪ್ರಶ್ನೆ ಮಾಡಿದರು.  

‘ಹಣ ಡ್ರಾ ಆಗಿರುವ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಚಂದ್ರಶೇಖರ್‌ ಅವರನ್ನು ಪ್ರಶ್ನೆ ಮಾಡುತ್ತಾರೆ. ನನಗೆ ತಿಳಿಯದೇ ಹಣ ಡ್ರಾ ಆಗಿದೆ ಎಂದು ತಿಳಿದು ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಯ ಹೊಣೆಯನ್ನು ನಾಗೇಂದ್ರ ಅವರೇ ಹೊರಬೇಕು. ಹಣ ನೀಡಲು ಸಚಿವರು ಮೌಖಿಕವಾಗಿ ಹೇಳಿದ್ದರು ಎಂದು ಡೆತ್‌ನೋಟ್‌ನಲ್ಲೇ ಇದೆ. ಹೀಗಾಗಿ ನೈತಿಕ ಹೊಣೆ ಹೊತ್ತು ನಾಗೇಂದ್ರ ರಾಜೀನಾಮೆ ನೀಡಬೇಕು’ ಎಂದು ಅವರು ಆಗ್ರಹಿಸಿದರು.  

'ಆತ್ಮಹತ್ಯೆ ಆಗಿ ಮೂರು ದಿನ ಕಳೆದಿದೆ. ಆದರೂ, ಸಚಿವರ ರಾಜೀನಾಮೆಯನ್ನು ಯಾಕೆ ಪಡೆದಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಯಾಕೆ ದೆಹಲಿಯಲ್ಲಿ ಕುಳಿತಿದ್ದಾರೆ' ಎಂದೂ ಅವರು ಪ್ರಶ್ನೆ ಮಾಡಿದರು. 

‘ಬೆಳಗಾವಿಯಲ್ಲಿ ಸಂತೋಷ್‌ ಪಾಟೀಲ್‌ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಾಗ ಈಶ್ವರಪ್ಪ ರಾಜೀನಾಮೆ ನೀಡಿರಲಿಲ್ಲವೇ? ಈಗ ನಾಗೇಂದ್ರ ಯಾಕೆ ರಾಜೀನಾಮೆ ನೀಡುತ್ತಿಲ್ಲ. ಸಿದ್ದರಾಮಯ್ಯ ಯಾಕೆ ಸಚಿವರ ರಾಜೀನಾಮೆ ಪಡೆಯುತ್ತಿಲ್ಲ. ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್‌ ಸರ್ಕಾರ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಆದರೆ, ಈ ಸರ್ಕಾರದಲ್ಲಿ ಮಿತಿಮೀರಿದ ಭ್ರಷ್ಟಾಚಾರ ಆಗಿದೆ’ ಎಂದೂ ಅವರು ಟೀಕಿಸಿದರು. 

ಇದಕ್ಕೂ ಮೊದಲು, ‌ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು. ಕನಕದುರ್ಗೆ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಗಡಿಗಿ ಚೆನ್ನಪ್ಪ (ರಾಯಲ್‌) ವೃತ್ತದ ಬಳಿ ನಾಗೇಂದ್ರ ಅವರ ಪ್ರತಿಕೃತಿ ದಹಿಸಲಾಯಿತು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ನಾಗೇಂದ್ರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT