ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪುಟ, ಕೆಕೆಆರ್‌ಡಿಬಿ ಅನುದಾನದಲ್ಲಿ ಬಳ್ಳಾರಿಗೆ ಅನ್ಯಾಯ

ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಆಕ್ರೋಶ; ಉಪವಾಸ ಸತ್ಯಾಗ್ರಹಕ್ಕೆ ಚಿಂತನೆ
Published : 24 ಸೆಪ್ಟೆಂಬರ್ 2024, 15:55 IST
Last Updated : 24 ಸೆಪ್ಟೆಂಬರ್ 2024, 15:55 IST
ಫಾಲೋ ಮಾಡಿ
Comments

ಬಳ್ಳಾರಿ: ‘ಕಲಬುರಗಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಅವಿಭಜಿತ ಬಳ್ಳಾರಿಗೆ ಅನ್ಯಾಯವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ನೀಡಲಾಗುವ ಅನುದಾನದಲ್ಲೂ ಮೋಸವಾಗಿದೆ’ ಎಂದು ಬಳ್ಳಾರಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಅಕ್ರೋಶ ವ್ಯಕ್ತಪಡಿಸಿದರು. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ಬಳ್ಳಾರಿ–ವಿಜಯನಗರವನ್ನು ನಿರ್ಲಕ್ಷಿಸಿದೆ. ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ ಎಂಬುದು ‘ಕಲಬುರಗಿ  ಪ್ರದೇಶ ಅಭಿವೃದ್ಧಿ ಮಂಡಳಿ’ ಎಂಬಂತಾಗಿದೆ. ನಮ್ಮ ಎರಡೂ ಜಿಲ್ಲೆಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಉಪವಾಸ ಸತ್ಯಾಗ್ರಹ ಮಾಡಲಿದ್ದೇನೆ’ ಎಂದು ಹೇಳಿದರು.  

‘ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿವಿಯ ಸಿಂಡಿಕೇಟ್‌ ಸದಸ್ಯರನ್ನಾಗಿ ಹೊರ ಜಿಲ್ಲೆಯವರನ್ನು ಆಯ್ಕೆ ಮಾಡಲಾಯಿತು.  ಬಳ್ಳಾರಿಗೆ ಎಲ್ಲದರಲ್ಲೂ‌ ಮೋಸವಾಗುತ್ತಿದೆ. ಕಾಂಗ್ರೆಸ್‌ಗೆ ಐದಕ್ಕೆ ಐದೂ ಸ್ಥಾನ ನೀಡಿದ ಬಳ್ಳಾರಿಯನ್ನು ಯಾಕೆ ನಿರ್ಲಕ್ಷಿಸಲಾಗುತ್ತಿದೆ’ ಎಂದು ಪ್ರಶ್ನಿಸಿದರು. 

‘ಮಾತೆತ್ತಿದರೆ ಬಳ್ಳಾರಿಗೆ ಜಿಲ್ಲಾ ಖನಿಜ ನಿಧಿ ಇದೆ ಎನ್ನಲಾಗುತ್ತದೆ. ಅದು ನಮ್ಮ ನೋವು, ಕಷ್ಟಕ್ಕೆ ಸಿಕ್ಕ ಹಣ. ಇದರ ಬಗ್ಗೆ ಮಾತಾಡಲು ಯಾರಿಗೇನು ಹಕ್ಕಿದೆ. ಕಲಬುರಗಿ ಜಿಲ್ಲೆಯ ಜನಪ್ರತಿನಿಧಿಗಳು ತಾವು ಹಿಂದುಳಿದ ಪ್ರದೇಶದವರೆಂದು ಹೇಳಿಕೊಂಡೇ ಅಭಿವೃದ್ಧಿಯಾಗುತ್ತಿದ್ದಾರೆ. ಈ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು  ಶಾಸಕಾಂಗ ಪಕ್ಷದ ಸಭೆಯಲ್ಲಿ, ಸಂಪುಟದಲ್ಲಿ, ವೇದಿಕೆಗಳಲ್ಲಿ ಮಾತನಾಡಬೇಕು’ ಎಂದು ಆಗ್ರಹಿಸಿದರು.  

‘ತುಂಗಭದ್ರಾ ಜಲಾಶಯಕ್ಕೆ ಬಾಗಿನಿ ಅರ್ಪಿಸುವ ಸಮಯದಲ್ಲಿ ಸ್ಥಳೀಯ ಶಾಸಕ ಗವಿಯಪ್ಪ ಅವರಿಗೆ ಅಪಮಾನ ಮಾಡಲಾಯಿತು. ಜಲಾಶಯದ ಮಾಹಿತಿ ನೀಡಲು ಬಂದ ಶಾಸಕ ಹಂಪನಗೌಡ ಅವರನ್ನು ತಳ್ಳಿ ಮುಖ್ಯಮಂತ್ರಿ ಅವಮಾನಿಸಿದರು. ‌ಜಿಲ್ಲೆ ವಿಭಜನೆ ಆದ ಬಳಿಕ ತಂಗಭದ್ರಾ ಮೇಲಿನ ನಿಯಂತ್ರಣವನ್ನೇ ನಾವು ಕಳೆದುಕೊಂಡಿದ್ದೇವೆ‘ ಎಂದು ಬೇಸರ ವ್ಯಕ್ತಪಡಿಸಿದರು. 

‘ಇನ್ನು ಅಧಿಕಾರಗಳಂತೂ ನಿಷ್ಕ್ರಿಯರಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಿಟ್ಟು ಹೊರಗೇ ಬರುವುದಿಲ್ಲ. ಇದೇ ಚಾಳಿ ಉಪವಿಭಾಗಾಧಿಕಾರಿ, ತಹಶೀಲ್ದಾರ್‌ಗಳಿಗೂ ಬಂದಿದೆ’ ಎಂದರು. 

ಇದೆಲ್ಲದರ ವಿರುದ್ಧ ಹೋರಾಟಗಳು ನಡೆಯಬೇಕು. ಕಮ್ಯುನಿಷ್ಟರಷ್ಟೇ ಈ ಜಿಲ್ಲೆಯಲ್ಲಿ ಹೋರಾಟಗಳನ್ನು ಮಾಡುತ್ತಿದ್ದಾರೆ‌ ಹೊರತು, ಇನ್ನೆಲ್ಲರೂ ಬಳ್ಳಾರಿಯನ್ನು ಮರೆತಿದ್ದಾರೆ ಎಂದು ಹೇಳಿದರು. 

ಇದನ್ನು ಹೀಗೇ ಬಿಟ್ಟೆ ಮುಂದೆ ಭಾರಿ ತೊಂದರೆ ಆಗಲಿದೆ. ಈ ಬಗ್ಗೆ ಎಲ್ಲ ಜನಪ್ರತಿನಿಧಿಗಳಿಗೆ ಪತ್ರ ಬರೆಯುತ್ತೇನೆ. ಸಂಘ ಸಂಸ್ಥೆಗಳೊಂದಿಗೆ ಮಾತನಾಡಿ, ಉಪವಾಸ ಸತ್ಯಾಗ್ರಹ ಕೂರುತ್ತೇನೆ ಎಂದು ತಿಳಿಸಿದರು. 

ಕಾರ್ಖಾನೆ ಆರಂಭಿಸಲು ಮನವಿ  

‘ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ)’ಗೆ ಜಿಲ್ಲೆಯಲ್ಲಿ ಕಬ್ಬಿಣದ ಅದಿರಿನ ಗಣಿ ಇದೆ. ಜತೆಗೆ ಕಾರ್ಖಾನೆ ಆರಂಭಿಸಲು ಜಾಗ ನೀಡಲಾಗಿದೆ. ಹೀಗಿದ್ದೂ ಅದು ಕಾರ್ಖಾನೆ ಆರಂಭಿಸಿಲ್ಲ. ನಮ್ಮವರೇ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಈ ಬಗ್ಗೆ ಗಮನ ಹರಿಸಿ ಜಿಂದಾಲ್‌ಗೆ ಪರ್ಯಾಯವಾಗಿ ಒಂದು ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ನಾರಾ ಪ್ರತಾಪ ರೆಡ್ಡಿ ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT