ಬಳ್ಳಾರಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಶನಿವಾರ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಲಾಗಿದೆಯಾದರೂ, ನಟ ದರ್ಶನ್ ಅವರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿಲ್ಲ.
ಜೈಲಿನ ಹೊರ ಭದ್ರತಾ ಕೊಠಡಿಯಲ್ಲಿ ದರ್ಶನ್ ಅವರನ್ನು ಇರಿಸಲಾಗಿದೆ. ಗಣೇಶ ಹಬ್ಬವನ್ನು ಜೈಲಿನ ಒಳಾಂಗಣದಲ್ಲಿ ಆಚರಿಸಲಾಗಿತ್ತು. ಜೈಲಿನ ಎಲ್ಲ ಕೈದಿಗಳೂ ಹಬ್ಬದ ಆಚರಣೆಗೆ ಒಂದೆಡೆ ಸೇರುತ್ತಾರೆ. ಈ ಸ್ಥಳಕ್ಕೆ ದರ್ಶನ್ ಬಂದರೆ ಭದ್ರತಾ ಸಮಸ್ಯೆ ಎದುರಾಗಬಹುದು ಎಂಬ ಕಾರಣ ಅವರನ್ನು ಕರೆಸಿಲ್ಲ ಎನ್ನಲಾಗಿದೆ.
ಇನ್ನೊಂದೆಡೆ, ಹಬ್ಬದ ನಿಮಿತ್ತ ಜೈಲಿನಲ್ಲಿ ಶನಿವಾರ ಪಾಯಸ, ಅನ್ನ–ಸಾಂಬಾರ್ ನೀಡಲಾಗಿತ್ತು.
‘ದರ್ಶನ್‌ಗೆ ಟಿ.ವಿ ಇನ್ನೂ ಒದಗಿಸಿಲ್ಲ’ ಎಂದು ಜೈಲು ಅಧೀಕ್ಷಕಿ ಲತಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಬಹುತೇಕ ಸೋಮವಾರ ಅವರ ಕೊಠಡಿಗೆ ಟಿ.ವಿ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇನ್ನೊಂದೆಡೆ, ದರ್ಶನ್ ಅವರ ನ್ಯಾಯಾಂಗ ಬಂಧನ ಅವಧಿ ಸೋಮವಾರ ಅಂತ್ಯವಾಗುತ್ತಿದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕವೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ನಿರ್ಧರಿಸಲಾಗಿದೆ.