ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಸವೇಶ್ವರ ಸ್ವಾಮಿಯ ಮಹಾ ರಥೋತ್ಸವಕ್ಕೆ ಹರಿದುಬಂದ ಭಕ್ತಸಾಗರ

ಜಿಲ್ಲೆಯ ಇತಿಹಾಸ ಪ್ರಸಿದ್ಧ ದೇಗುಲದ ಮಹಾರಥೋತ್ಸವ
Published 25 ಮಾರ್ಚ್ 2024, 16:03 IST
Last Updated 25 ಮಾರ್ಚ್ 2024, 16:03 IST
ಅಕ್ಷರ ಗಾತ್ರ

ಕುರುಗೋಡು: ಇತಿಹಾಸ ಪ್ರಸಿದ್ಧ ಮತ್ತು ಬಳ್ಳಾರಿ ಜಿಲ್ಲೆಯ ಅತಿದೊಡ್ಡ ಜಾತ್ರೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಕುರುಗೋಡು ದೊಡ್ಡಬಸವೇಶ್ವರ ಸ್ವಾಮಿಯ ಮಹಾ ರಥೋತ್ಸವದ ಸೊಬಗನ್ನು ಕಣ್ತುಂಬಿಕೊಳ್ಳಲು ಸೋಮವಾರ ಸಂಜೆ ಜನಸಾಗರವೇ ಹರಿದುಬಂದಿತ್ತು.

ಸೂರ್ಯ ಪಡುವಣದಿಕ್ಕಿನಲ್ಲಿ ಹಸ್ತಂಗತನಾಗುವ ಸಂದರ್ಭದಲ್ಲಿ ಮೂಡುವ ಮುಸ್ಸಂಜೆ ರಂಗು ರಥೋತ್ಸವದ ಮೆರಗು ಇಮ್ಮಡಿಗೊಳಿಸಿತ್ತು.

ಮಹಾ ರಥೋತ್ಸವಕ್ಕೆ ಸಾಕ್ಷಿಯಾದ ಸುಮಾರು ಎರಡು ಲಕ್ಷಕ್ಕೂ ಅಧಿಕ ಭಕ್ತರು ದೊಡ್ಡಬಸವೇಶ್ವರ ಸ್ವಾಮಿಗೆ ಮೊಳಗಿಸಿದ ಜಯಘೋಷಗಳು ಮುಗಿಲುಮುಟ್ಟಿದವು.

ದೇವಸ್ಥಾನದಲ್ಲಿ ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಬೆಳಗಿನಜಾವ 3 ಗಂಟೆಯಿಂದಲೇ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಬೆಳಿಗ್ಗೆಯಿಂದ ದೇವಸ್ಥಾನಕ್ಕೆ ಭೇಟಿನೀಡಿ ಸಾಲಿನಲ್ಲಿ ನಿಂತು ದೊಡ್ಡಬಸವೇಶ್ವರ ಸ್ವಾಮಿ ಸಮೀಪ ದರ್ಶನಪಡೆದರು. ಉಚಿತ ದರ್ಶನದ ಜತೆಗೆ ₹50 ಪಾವತಿಸಿದವರಿಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಉಚಿತ ದರ್ಶನಕ್ಕಿಂತ ವಿಶೇಷ ದರ್ಶನದ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಕಂಡುಬಂದರು.

ಕುರುಗೋಡು ದೊಡ್ಡಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಸರದಿಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು
ಕುರುಗೋಡು ದೊಡ್ಡಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಸರದಿಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು

ಭಕ್ತರು ದೇವಸ್ಥಾನದ ಆವರಣದಲ್ಲಿ ಸೂರ್ಯೋದಯಾದಿಮುನ್ನ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು. ನೂರಾರು ಕಿಲೋಮೀಟರ್ ದೂರದಿಂದ ಪದಯಾತ್ರೆಯಲ್ಲಿ ಬಂದ ಭಕ್ತರು ಸ್ವಾಮಿಯ ದರ್ಶನ ಪಡೆದು ಧನ್ಯತಾಭಾವ ಮೆರೆದರು.

ಕೆಲವು ಭಕ್ತರು ಬೃಹತ್ ಗಾತ್ರದ ಹೂವಿನ ಹಾರಗಳನ್ನು ಮೆರವಣಿಗೆಯಲ್ಲಿ ತಂದು ರಥಕ್ಕೆ ಅರ್ಪಿಸಿ ಭಕ್ತಿ ಮೆರೆದರು.

ಕುರುಗೋಡು ರಥೋತ್ಸವದ ಕುರಿತು ವಿಶೇಷ ಲೇಖನ ಮತ್ತು ಜಾಹಿರಾತು ಪುಟಗಳಿರುವ ಪ್ರಜಾವಾಣಿ ಪತ್ರಿಕೆಯನ್ನು ಡಿವೈಎಸ್ಪಿ ಪ್ರಸಾದ್ ಗೋಖಲೆ ಸೋಮವಾರ ಬಿಡುಗಡೆಗೊಳಿಸಿದರು. ಸಿಪಿಐ ವಿಶ್ವನಾಥ ಹಿರೇಗೌಡರ್ ಪಿಎಸ್‍ಐ ಸುಪ್ರಿತ್ ಪಾಲ್ಗೊಂಡಿದ್ದರು
ಕುರುಗೋಡು ರಥೋತ್ಸವದ ಕುರಿತು ವಿಶೇಷ ಲೇಖನ ಮತ್ತು ಜಾಹಿರಾತು ಪುಟಗಳಿರುವ ಪ್ರಜಾವಾಣಿ ಪತ್ರಿಕೆಯನ್ನು ಡಿವೈಎಸ್ಪಿ ಪ್ರಸಾದ್ ಗೋಖಲೆ ಸೋಮವಾರ ಬಿಡುಗಡೆಗೊಳಿಸಿದರು. ಸಿಪಿಐ ವಿಶ್ವನಾಥ ಹಿರೇಗೌಡರ್ ಪಿಎಸ್‍ಐ ಸುಪ್ರಿತ್ ಪಾಲ್ಗೊಂಡಿದ್ದರು

ಸಂಜೆ 5.45ಕ್ಕೆ 60ಅಡಿ ಎತ್ತರದ ವಿವಿಧ ಬಣ್ಣದ ಹೂಗಳು ಮತ್ತು ಅಲಂಕಾರಿಕ ವಸ್ತುಗಳು ಮತ್ತು ಗೊಂಬೆಗಳಿಂದ ಅಲಂಕೃತಗೊಂಡಿದ್ದ ರಥವನ್ನು ಎದುರುಬಸವಣ್ಣ ದೇವಸ್ಥಾನದ ವರೆಗೆ ಎಳೆದೊಯ್ದ ಭಕ್ತರು ಪುನಃ ಸ್ವಸ್ಥಳಕ್ಕೆ ಎಳೆದು ತಂದರು. ರಥ ಸಾಗಿದ ದಾರಿಯುದ್ದಕ್ಕೂ ಭಕ್ತರ ಹರ್ಷೋದ್ಘಾರ, ಶಿಳ್ಳೆ, ಕೇಕೆ ಮುಗಿಲುಮುಟ್ಟಿತ್ತು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಅಗಣಿತ ಭಕ್ತರು ಹೂ ಹಣ್ಣು ಎಸೆದು ಕೃತಾರ್ಥರಾದರು. ಜಿಲ್ಲೆಯ ವಿವಿಧ ತಾಲ್ಲೂಕು ಸೇರಿದಂತೆ ನೆರೆಯ ರಾಯಚೂರು, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಬೆಳಗಾವಿ ಜಿಲ್ಲೆ, ಆಂಧ್ರ, ಮಹಾರಾಷ್ಟ್ರದ ಕೆಲವು ಪ್ರದೇಶಗಳಿಂದ ಬಂದಿದ್ದ ಭಕ್ತರು ರಥ ಬೀದಿಯ ಅಕ್ಕಪಕ್ಕದ ಕಟ್ಟಡಗಳ ಮೇಲೆ ನಿಂತು ರಥದ ಸಮೀಪ ದರ್ಶನ ಪಡೆದು ಪುನೀತರಾದರು.

ಕುರುಗೋಡಿನಲ್ಲಿ ಸೋಮವಾರ ಜರುಗಿದ ದೊಡ್ಡ ಬಸವೇಶ್ವರ ಸ್ವಾಮಿ ಮಹಾ ರಥೋತ್ಸವದಲ್ಲಿ ಭಾಗವಹಿಸಿದ್ದ ಅಗಣಿತ ಭಕ್ತರು
ಕುರುಗೋಡಿನಲ್ಲಿ ಸೋಮವಾರ ಜರುಗಿದ ದೊಡ್ಡ ಬಸವೇಶ್ವರ ಸ್ವಾಮಿ ಮಹಾ ರಥೋತ್ಸವದಲ್ಲಿ ಭಾಗವಹಿಸಿದ್ದ ಅಗಣಿತ ಭಕ್ತರು

ರಥದ ಸುತ್ತ ರೋಪ್ ನಿಂದ ಭದ್ರತೆ ಮಾಡುವ ಮೂಲಕ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಗೆ ಕ್ರಮ ಕೈಗೊಂಡಿತು. ರಥ ಸಾಗುವ ರಸ್ತೆಯ ಎರಡು ಬದಿಯಲ್ಲಿ ಅಂಗಡಿಮುಂಗಟ್ಟುಗಳನ್ನು ತೆರುವುಗೊಳಿಸಿ ರಥ ಸುಗಮವಾಗಿ ಸಾಗಲು ವ್ಯವಸ್ಥೆ ಮಾಡಲಾಗಿತ್ತು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದುಪ್ಪಟ್ಟು ಜನರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು.

ಕುರುಗೋಡಿನಲ್ಲಿ ಸೋಮವಾರ ಜರುಗಿದ ದೊಡ್ಡ ಬಸವೇಶ್ವರ ಸ್ವಾಮಿ ಮಹಾ ರಥೋತ್ಸವದಲ್ಲಿ ಭಾಗವಹಿಸಿದ್ದ ಅಗಣಿತ ಭಕ್ತರು
ಕುರುಗೋಡಿನಲ್ಲಿ ಸೋಮವಾರ ಜರುಗಿದ ದೊಡ್ಡ ಬಸವೇಶ್ವರ ಸ್ವಾಮಿ ಮಹಾ ರಥೋತ್ಸವದಲ್ಲಿ ಭಾಗವಹಿಸಿದ್ದ ಅಗಣಿತ ಭಕ್ತರು

ಇಂದಿನಿಂದ ಒಂದುವಾರದ ವರೆಗೆ ಸುತ್ತಮುತ್ತಲಿನ ಹಳ್ಳಿಗಳ ಜನರು ಜಾತ್ರೆಯಲ್ಲಿ ಬಳೆ, ಪಾತ್ರೆ ಸಾಮಾನು, ಮುಠಾಯಿ, ಮಕ್ಕಳ ಆಟಿಕೆ ವಸ್ತುಗಳನ್ನು ಖರೀದಿಸಲು ಬರುವುದರಿಂದ ಪಟ್ಟಣ ಜನದಟ್ಟಣೆಯಿಂದ ಕೂಡಿರುತ್ತದೆ.

ಶಾಸಕ ಜೆ.ಎನ್.ಗಣೇಶ್ ಮತ್ತು ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಮತ್ತು ಡಿವೈಎಸ್ಪಿ ಪ್ರಸಾದ್ ಗೋಖಲೆ ರಥೋತ್ಸವದಲ್ಲಿ ಭಾಗವಹಿಸಿದ್ದರು.

ಬಿಗಿ ಬಂದೋಬಸ್ತ್: ರಥೋತ್ಸವಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸಲು ಡಿವೈಎಸ್ಪಿ, 3 ಸಿಪಿಐ, 8 ಪಿಎಸ್‍ಐ, 38 ಎಎಸ್‍ಐ, 169 ಪೊಲೀಸರು, 11 ಮಹಿಳಾ ಪೊಲೀಸ್ ಮತ್ತು 80 ಗೃಹರಕ್ಷಕರು ಜತೆಗೆ ಒಂದು ಕೆಎಸ್‍ಆರ್‌ಪಿ ಮತ್ತು ಒಂದು ಡಿಎಆರ್ ತುಕಡಿ ನಿಯೋಜಿಸಲಾಗಿತ್ತು. ಸ್ವತ್ತು ಅಪರಾಧ ಪತ್ತೆ ತಂಡದಂತೆ 11 ಜನರನ್ನೊಳಗೊಂಡ ತಂಡ ಕಾರ್ಯನಿರ್ವಹಿಸಿತು ಎಂದು ಸಿಪಿಐ ವಿಶ್ವನಾಥ ಕೆ. ಹಿರೇಗೌಡರ್ ಮತ್ತು ಪಿಎಸ್‍ಐ ಸುಪ್ರಿತ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT