ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ದಿನಗಳಲ್ಲಿ 340 ಮಂದಿಗೆ ಬೀದಿ ನಾಯಿ ಕಡಿತ

ಮಕ್ಕಳನ್ನೇ ಗುರಿಯಾಗಿಸಿ ದಾಳಿ, ಪೋಷಕರಲ್ಲಿ ಆತಂಕ
Last Updated 11 ಫೆಬ್ರುವರಿ 2023, 11:44 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ನಿತ್ಯ ಎಲ್ಲಾದರೂ ಒಂದು ಕಡೆ ಜನರ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ.

ಕಳೆದ 40 ದಿನಗಳ ಅವಧಿಯಲ್ಲಿ ನಗರದ ವಿವಿಧ ಕಡೆಗಳಲ್ಲಿ 340 ಮಂದಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಎಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಜನವರಿ ತಿಂಗಳೊಂದರಲ್ಲೇ 266 ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಫೆಬ್ರುವರಿ ತಿಂಗಳಲ್ಲಿ ಹತ್ತು ದಿನಗಳಲ್ಲಿ 74 ಜನರ ಮೇಲೆ ದಾಳಿ ನಡೆದಿವೆ ಎಂದು ಖಚಿತ ಮೂಲಗಳಿಂದ ಗೊತ್ತಾಗಿದೆ.

ನಿರಂತರವಾಗಿ ನಾಯಿಗಳು ದಾಳಿ ನಡೆಸುತ್ತಿವೆ. ಇದಕ್ಕೆ ಕಾರಣವೇನು ಎಂಬುದಕ್ಕೆ ವೈಜ್ಞಾನಿಕ ಅಧ್ಯಯನ ನಡೆದಿಲ್ಲ. ಅದರಲ್ಲೂ ಶಾಲಾ ಮಕ್ಕಳನ್ನೇ ಗುರಿಯಾಗಿರಿಸಿ ಬೀದಿ ನಾಯಿಗಳು ದಾಳಿ ನಡೆಸುತ್ತಿದ್ದು, ಪೋಷಕರನ್ನು ಆತಂಕಕ್ಕೀಡು ಮಾಡಿದೆ.

ನಗರದ ಚಿತ್ತವಾಡ್ಗಿಯಲ್ಲಿ ಶುಕ್ರವಾರ ಒಂದೇ ದಿನ ಇಬ್ಬರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಜನವರಿ 20ರಂದು ಇದೇ ಬಡಾವಣೆಯಲ್ಲಿ ವೇದಶ್ರೀ (11) ಎಂಬ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದರಿಂದ ಬಾಲಕಿಯ ಮುಖದ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ನಂತರ ನಗರಸಭೆ ಬಾಲಕಿಯ ಚಿಕಿತ್ಸಾ ವೆಚ್ಚ ಭರಿಸಿತ್ತು. ನಾಯಿಗಳ ಸ್ಥಳಾಂತರಕ್ಕೂ ಕ್ರಮ ಕೈಗೊಂಡಿತ್ತು. ಆದರೆ, ಶಾಶ್ವತ ಪರಿಹಾರ ದೊರೆತಿಲ್ಲ. ಇದಕ್ಕೆ ಶುಕ್ರವಾರ ನಡೆದ ಘಟನೆಯೇ ಸಾಕ್ಷಿ.

ತಾಳೆಯಾಗದ ನಾಯಿಗಳ ಸಂಖ್ಯೆ:

ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಸರ್ವೇ ಪ್ರಕಾರ, ಹೊಸಪೇಟೆ ನಗರದಲ್ಲಿ 1,130 ಬೀದಿ ನಾಯಿಗಳಿವೆ. ಆದರೆ, ಈ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿದೆ ಎನ್ನುತ್ತಾರೆ ನಗರಸಭೆಯ ಅಧಿಕಾರಿಗಳು.

‘ಪಶು ವೈದ್ಯ ಸೇವಾ ಇಲಾಖೆ ನಡೆಸಿದ ಸರ್ವೇಯಿಂದ 1,130 ಬೀದಿ ನಾಯಿಗಳು ನಗರದಲ್ಲಿವೆ ಎಂದು ಗೊತ್ತಾಗಿದೆ. ಆದರೆ, ವಾಸ್ತವದಲ್ಲಿ ಪರಿಸ್ಥಿತಿ ಬೇರೆ ಇದೆ. ನಗರದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿರುವ ಸಾಧ್ಯತೆ ಇದೆ’ ಎಂದು ನಗರಸಭೆ ಪೌರಾಯುಕ್ತ ಮನೋಹರ್‌ ನಾಗರಾಜ ತಿಳಿಸಿದ್ದಾರೆ.

‘ಜನವರಿಯಿಂದ ಇದುವರೆಗೆ ನಗರದಲ್ಲಿ 774 ಬೀದಿ ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನಾಯಿಗಳ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್‌ ನಿಯಮ ರಚಿಸಿದೆ. ಇದನ್ನು ಹೊರತುಪಡಿಸಿ ಬೇರೆ ಯಾವ ಕ್ರಮದಿಂದಲೂ ಅವುಗಳನ್ನು ನಿಯಂತ್ರಿಸುವಂತಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT