ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ಸಮಸ್ಯೆ ಬಾರದಿರಲಿ: ಅಧಿಕಾರಿಗಳಿಗೆ ಸಚಿವ ನಾಗೇಂದ್ರ ತಾಕೀತು

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
Published 3 ಫೆಬ್ರುವರಿ 2024, 7:27 IST
Last Updated 3 ಫೆಬ್ರುವರಿ 2024, 7:27 IST
ಅಕ್ಷರ ಗಾತ್ರ

ಬಳ್ಳಾರಿ: ‘ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು.  ಅದಕ್ಕಾಗಿ ಮುಂಜಾಗ್ರತೆ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅಧಿಕಾರಿಗಳಿಗೆ ಸೂಚಿಸಿದರು. 

ಬಳ್ಳಾರಿ ಜಿಲ್ಲಾ ಪಂಚಾಯಿತಿಯ ನಜೀರ್ ಸಾಬ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಸೇರಿದಂತೆ) ಮೂರನೇಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಇಲಾಖೆಗಳಿಂದ ಮಾಹಿತಿ ಪಡೆದು ಸಲಹೆ ಸೂಚನೆ ನೀಡಿದರು.  

‘ಕುಡಿಯುವ ನೀರಿನ ಸಮಸ್ಯೆ ಉಂಟಾದರೆ, ಕೂಡಲೇ ಆಯಾ ಕ್ಷೇತ್ರದ ಶಾಸಕರ ಗಮನಕ್ಕೆ ತರಬೇಕು. ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆ ನಡೆಸಬೇಕು. ಪರಿಹಾರ ಕ್ರಮ ಕೈಗೊಳ್ಳಲು ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಯಾವುದೇ ಕಾರಣಕ್ಕೂ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು’ ಎಂದರು.

‘ಜಿಲ್ಲೆಯಲ್ಲಿ ಜಲಜೀವನ ಮಿಷನ್‌ (ಜೆಜೆಎಂ) ಕಾಮಗಾರಿ ಯೋಜನೆ ಯಶಸ್ವಿಗೊಳಿಸಲು ನೀರಿನ ಮೂಲಗಳನ್ನು ಗುರುತಿಸಬೇಕು. ನಂತರ ಜೆಜೆಎಂ ಕಾಮಗಾರಿ ಕೈಗೊಳ್ಳಬೇಕು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಸೂಚಿಸಿದರು.

‘ಜಿಲ್ಲೆಯಲ್ಲಿ ಮೇವಿನ ಕೊರತೆ ಆಗದಂತೆ ನಿಗಾವಹಿಸಿ. ಅಗ್ನಿ ಅವಘಡದಲ್ಲಿ ಮೇವು ಸುಟ್ಟುಹೋದ ಸಂದರ್ಭದಲ್ಲಿ ರೈತನಿಗೆ ಪರಿಹಾರ ನೀಡಬೇಕು’ ಎಂದು ತಿಳಿಸಿದರು. 

‘ಬಳ್ಳಾರಿ ಜಿಲ್ಲೆಯಲ್ಲಿ 34,234 ರೈತರಿಗೆ ತಲಾ₹2,000 ಸಾವಿರದಂತೆ ಒಟ್ಟು ₹6.74 ಕೋಟಿಯನ್ನು ಬರ ಪರಿಹಾರವಾಗಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. 7 ಸಾವಿರ ರೈತರಿಗೆ ಪರಿಹಾರ ಒದಗಿಸಲು ಜಿಲ್ಲಾಡಳಿತದಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಸಭೆಗೆ ಮಾಹಿತಿ ನೀಡಿದರು.

ಅರ್ಧದಲ್ಲೇ ನಿರ್ಗಮಿಸಿದ ಸಚಿವ: ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ನಾಗೇಂದ್ರ ಅರ್ಧದಲ್ಲಿಯೇ ಸಭೆಯಿಂದ ನಿರ್ಗಮಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ನಿಗದಿಯಾಗಿದ್ದ ಟೆಲಿ ಐಸಿಯು ಹಬ್‌ ಉದ್ಘಾಟನೆಗೆಂದು ತೆರಳಿದ ಅವರ ಹಿಂದೆಯೇ ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ್ ಅವರೂ ತೆರಳಿದರು. ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅವರು ಸಭೆ ನಡೆಸಿಕೊಟ್ಟರು. 

ಬಿಲ್‌ ಪಾವತಿಸಲಿಲ್ಲ ಎಂದು ಯಾವುದೇ ವಿದ್ಯುತ್‌ ಸಂಪರ್ಕಗಳನ್ನು ಕಡಿತ ಮಾಡಬಾರದು. ಅವರಿಂದ ಸಾಧ್ಯವಾದಷ್ಟು ಹಣವನ್ನು ಕಟ್ಟಿಸಿಕೊಂಡು ಸಂಪರ್ಕ ಉಳಿಸಬೇಕು
– ನಾಗೇಂದ್ರ ಸಚಿವ

‘ಕಾಲಮಿತಿಯಲ್ಲಿ ಕಾಮಗಾರಿ ಮುಗಿಯಲಿ’

ಬಳ್ಳಾರಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ) ಯಿಂದ ಬಳ್ಳಾರಿ ಜಿಲ್ಲೆಗೆ ನೀಡಲಾದ ಅನುದಾನವನ್ನು ಕಾಲಮಿತಿಯೊಳಗೆ ಬಳಸಿಕೊಂಡು ಪ್ರಗತಿ ಸಾಧಿಸಬೇಕು ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಕೆಕೆಆರ್‌ಡಿಬಿ ಯೋಜನೆ ಅಡಿ ಕೈಗೆತ್ತಿಕೊಂಡಿರುವ  ಕಾಮಗಾರಿಗಳ ವೇಗ ಹೆಚ್ಚಿಸಬೇಕು.

ಲಭ್ಯವಿರುವ ಅನುದಾನ ಬಳಸಿಕೊಂಡಲ್ಲಿ ಮಾತ್ರ ಹೆಚ್ಚಿನ ಅನುದಾನ ಬಿಡುಗಡೆಯಾಗಲು ಸಾಧ್ಯ. ಕಾಮಗಾರಿ ಗುಣಮಟ್ಟ ಕಳಪೆಯಾಗಿದ್ದರೆ ಅನುದಾನ ಸಿಗುವುದಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾಕೆಕೆಆರ್‌ಡಿಬಿ ಕಾರ್ಯದರ್ಶಿ ಸುಂದರೇಶ ಬಾಬು ಮಾತನಾಡಿದರು. ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಸಂಡೂರು ಶಾಸಕ ಈ.ತುಕರಾಂ ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಬಸ್‌ ಬಿಡಿ– ರೋಡ್‌ ಹಾಕ್ಸಿ

ಕುರುಗೋಡು - ಕಂಪ್ಲಿ ಭಾಗದಲ್ಲಿ ಬಸ್ ಕೊರತೆ ಇದೆ. ವಿದ್ಯಾರ್ಥಿಗಳು ಸಾರ್ವಜನಿಕರು ನನ್ನ ಗಮನಕ್ಕೆ ತರುತ್ತಿದ್ದಾರೆ. ಆದಷ್ಟು ಶ್ರೀಘ್ರ ಸಮಸ್ಯೆ ಬಗೆಹರಿಸಬೇಕು ಎಂದು ಕೆಕೆಎಸ್‌ಆರ್‌ಟಿಸಿಯ  ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಕಂಪ್ಲಿ ಶಾಸಕ ಗಣೇಶ್‌ ಸೂಚಿಸಿದರು.

ರೈತ ಸಂಪರ್ಕ ಕೇಂದ್ರದಲ್ಲೇ ಕಚೇರಿ ಮಾಡಿ: ಕಂಪ್ಲಿ ಮತ್ತು ಕುರುಗೋಡು ಭಾಗದಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಲಭ್ಯವಾಗದೇ ಇರುವುದರ ಬಗ್ಗೆ  ಶಾಸಕ ಜೆ.ಗಣೇಶ್ ಸಭೆಯಲ್ಲಿ ಪ್ರಸ್ತಾಪಿಸಿದರು.

‘ಅಧಿಕಾರಿಗಳು ಎಲ್ಲಿದ್ದಾರೆ?’ ಎಂದು ಇಲಾಖೆಯ ಉಪನಿರ್ದೇಶಕ ಸಂತೋಷ್‌ ಸಪ್ಪಂಡಿ ಅವರನ್ನು ಪ್ರಶ್ನಿಸಿದರು.

‘ಬಳ್ಳಾರಿ ನಗರದಲ್ಲಿ ಇರುತ್ತಾರೆ’ ಎಂದರು. ಆಗ ಕೆಂಡಾಮಂಡಲಗೊಂಡ ಗಣೇಶ್‌ ‘ಅಧಿಕಾರಿಗಳು ಎಲ್ಲಿ ನಿಯೋಜನೆಗೊಂಡಿರುತ್ತಾರೋ ಅಲ್ಲಿಯೇ ಕಾರ್ಯನಿರ್ವಹಿಸಬೇಕು. ಅವರನ್ನು ಕಾಣಲು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಬರುವಂತಾಗಬಾರದು’ ಎಂದು ತಾಕೀತು ಮಾಡಿದರು. ಆಗ ಮಧ್ಯ ಪ್ರವೇಶಿಸಿದ ಸಹಾಯಕ ಆಯುಕ್ತ ಹೇಮಂತ್‌ ಕುಮಾರ್‌ ‘ರೈತ ಸಂಪರ್ಕ ಕೇಂದ್ರದಲ್ಲೇ ಕಚೇರಿ ವ್ಯವಸ್ಥೆ ಮಾಡಿಕೊಳ್ಳಬೇಕು. ಮುಂದಿನ ವಾರದಲ್ಲೇ ಅಧಿಕಾರಿಗಳು ಅಲ್ಲಿರಬೇಕು’ ಎಂದು ತಾಕೀತು ಮಾಡಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT