ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರಿಗೆ ಜನರ ತಪ್ಪದ ಪರದಾಟ

ಹೋಬಳಿಯ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ದುರಸ್ತಿಕಾಣದ ನೀರಿನ ಘಟಕಗಳು
Published 17 ಅಕ್ಟೋಬರ್ 2023, 4:58 IST
Last Updated 17 ಅಕ್ಟೋಬರ್ 2023, 4:58 IST
ಅಕ್ಷರ ಗಾತ್ರ

–ಎರ್ರಿಸ್ವಾಮಿ.ಬಿ

ತೋರಣಗಲ್ಲು: ಹೋಬಳಿ ವ್ಯಾಪ್ತಿಯ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳು ಹಲವಾರು ವರ್ಷಗಳಿಂದ ದುರಸ್ತಿಗೊಳಗಾಗಿದ್ದರಿಂದ ಬಡ ಜನರು ನಿತ್ಯ ಶುದ್ಧ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲ ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳ, ಏಜನ್ಸಿಗಳ ನಿರ್ವಹಣೆ ಕೊರತೆಯಿಂದ ಶಾಶ್ವತವಾಗಿ ಸ್ಥಗಿತಗೊಂಡಿದ್ದರೇ ಇನ್ನೂ ಕೆಲವು ಹಳ್ಳಿಗಳಲ್ಲಿ ಮಳೆಯ ಕೊರತೆ, ಅಂತರ್ಜಲದ ಸಮಸ್ಯೆಯಿಂದ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಮುಚ್ಚಲ್ಪಟ್ಟಿವೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಹೋಬಳಿಯ ಕೆಲ ಗ್ರಾಮಗಳ ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿ ಪ್ಲೋರೈಡ್ ಯುಕ್ತ ಕೊಳವೆ ಬಾವಿಯ ನೀರನ್ನೇ ಅವಲಂಬಿಸಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.

ಹೋಬಳಿ ವ್ಯಾಪ್ತಿಯಲ್ಲಿ ಕುರೆಕುಪ್ಪ ಪುರಸಭೆ, 9 ಗ್ರಾಮ ಪಂಚಾಯಿತಿಗಳ ಒಟ್ಟು 35 ಹಳ್ಳಿಗಳನ್ನು ಹೊಂದಿದ ಹೋಬಳಿಯಾಗಿದೆ. ಸರ್ಕಾರದ ಅನುದಾನದಲ್ಲಿ ಗ್ರಾಮೀಣ ಜನರ ಅನುಕೂಲಕ್ಕಾಗಿ ಸುಮಾರು 55 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ.

ಈ ಬಾರಿ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಸಣ್ಣ, ದೊಡ್ಡ ಪ್ರಮಾಣದ ಕೆರೆಗಳು ನೀರಿಲ್ಲದೆ ಬಣಗುಡುತ್ತಿವೆ. ಅಂತರ್ಜಲ ಪ್ರಮಾಣ ಕಡಿಮೆಯಾಗಿದ್ದರಿಂದ ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿವೆ.

ಲಿಂಗದಹಳ್ಳಿ, ಚಿಕ್ಕಅಂತಾಪುರ ಹಾಗೂ ಡಿ.ಅಂತಾಪುರ ಗ್ರಾಮಗಳಲ್ಲಿನ ಜನರ ಅನುಕೂಲಕ್ಕಾಗಿ ಜಿಂದಾಲ್ ಫೌಂಡೇಷನ್‍ನ ಸಾಮಾಜಿಕ ಸಾಂಸ್ಥಿಕ ಜವಾಬ್ದಾರಿಯ ಚಟುವಟಿಕೆಯಲ್ಲಿ (ಸಿಎಸ್‍ಆರ್) ನೂತನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ ಮೂರು ತಿಂಗಳಾಗಿದೆ. ಆದರೆ ಮಳೆಯ ಕೊರತೆ, ಕೊಳವೆ ಬಾವಿಗಳಲ್ಲಿ ನೀರಿನ ಅಭಾವದಿಂದ ಮೂರು ಘಟಕಗಳಿಗೆ ನೀರಿನ ಸಂಪರ್ಕವಿಲ್ಲದೆ ವ್ಯರ್ಥವಾಗಿವೆ.

ವಿವಿಧ ಗ್ರಾಮಗಳಲ್ಲಿ ಜನರು ಸರ್ಕಾರಿ ನೀರಿನ ಘಟಕಗಳು ದುರಸ್ತಿಗೊಳಗಾದರೇ ಖಾಸಗಿ ನೀರಿನ ಘಟಕಗಳ ಮೊರೆ ಹೋಗಿ ಕ್ಯಾನ್‍ಗೆ ₹ 30, ಕೊಡಕ್ಕೆ ₹ 15 ದುಬಾರಿ ಹಣ ನೀಡಿ ಶುದ್ಧ ನೀರು ಪಡೆಯುವುದು ಅನಿವಾರ್ಯವಾಗಿದೆ.

‘ಸಂಡೂರು ತಾಲ್ಲೂಕಿನಲ್ಲಿ ಮಳೆಯ ಅಭಾವ ಮುಂದುವರಿದರೇ ಕೆರೆಗಳು ಬರಿದಾಗಿ ಅಂತರ್ಜಲ ಕುಸಿದು ಕೊಳವೆ ಬಾವಿಗಳು ಬತ್ತುತ್ತವೆ. ಮುಂದಿನ ದಿನಗಳಲ್ಲಿ ಸಮಸ್ಯೆಯಾಗಲಿದೆ. ಅದಕ್ಕೆ ಪರಿಹಾರ ಹುಡಕಲಾಗುವುದು’ ಎಂದು ಸಂಡೂರು ತಾಲ್ಲೂಕಿನ ಎಂ.ಎನ್.ವಿನಾಯಕ ಪ್ರತಿಕ್ರಿಯಿಸಿದರು.

ಹಳೆದರೋಜಿ ಗ್ರಾಮದಲ್ಲಿ ದುರಸ್ತಿಗೊಳಗಾದ ನೀರಿನ ಘಟಕದ ಯಂತ್ರದ ಬಿಡಿ ಭಾಗಗಳು
ಹಳೆದರೋಜಿ ಗ್ರಾಮದಲ್ಲಿ ದುರಸ್ತಿಗೊಳಗಾದ ನೀರಿನ ಘಟಕದ ಯಂತ್ರದ ಬಿಡಿ ಭಾಗಗಳು

ಎಂ.ಲಕ್ಕಲಹಳ್ಳಿ ಗ್ರಾಮದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿರುವುದು ಸಂತಸದ ವಿಚಾರ. ಆದರೆ ಘಟಕ 12 ವರ್ಷಗಳಿಂದ ಆರಂಭವೇ ಆಗಿಲ್ಲ

–ಎಂ.ಲಕ್ಕಲಹಳ್ಳಿ, ಗ್ರಾಮದ ಮುಖಂಡ

ತಾಲ್ಲೂಕಿನ 44 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಹುದು ಎಂದು ಅಂದಾಜಿಸಲಾಗಿದ್ದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ

–ಎಂ.ಎನ್.ವಿನಾಯಕ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ

ಪ್ರೋರೈಡ್‌ಯುಕ್ತ ನೀರೇ ಗತಿ..!

ಹಿಂಗಾರು ಮಳೆ ಬಾರದೇ ಇದ್ದರೆ ಮೆಟ್ರಕಿ ವಿಠಲಾಪುರ ದೊಡ್ಡಅಂತಾಪುರ ಹಾಗೂ ಯು.ರಾಜಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 20 ಹಳ್ಳಿಗಳಲ್ಲಿ ಕುಡಿಯುವ ಬಳಕೆಯ ನೀರಿನ ಸಮಸ್ಯೆ ಬಹಳ ಗಂಭೀರವಾಗಲಿದೆ. ಸಂಡೂರು ತಾಲ್ಲೂಕಿನ ಆಂಧ್ರಗಡಿ ಭಾಗದ ಮೆಟ್ರಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಲಕ್ಕಲಹಳ್ಳಿ ಗ್ರಾಮದಲ್ಲಿ ಸುಮಾರು 12 ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಘಟಕವು ಶಾಶ್ವತವಾಗಿ ಪಾಳುಬಿದ್ದರಿಂದ ಗ್ರಾಮದ ಜನರು ಪಂಚಾಯಿತಿಯ ಅಧಿಕಾರಿಗಳ ಜನಪ್ರತಿನಿಧಿಗಳ ವಿರುದ್ಧ ಅಕ್ರೋಶಗೊಂಡಿದ್ದಾರೆ. ಗ್ರಾಮದಲ್ಲಿನ ಜನರು ಸುಮಾರು ವರ್ಷಗಳಿಂದ ನಿತ್ಯ ಕುಡಿಯುವ ನೀರಿಗಾಗಿ ಪ್ಲೋರೈಡ್‍ಯುಕ್ತ ಕೊಳವೆ ಬಾವಿಯ ನೀರನ್ನೇ ಅವಲಂಬಿಸಿದ್ದಾರೆ. ಯು.ರಾಜಾಪುರ ಡಿ.ಅಂತಾಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ನೀರಿನಹಳ್ಳ ಹಾಗೂ ಮೆಗಳಕೊರಚರಹಟ್ಟಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಇಲ್ಲಿಯವರೆಗೂ ಸ್ಥಾಪಿಸಿಲ್ಲ ವಿ.ನಾಗಲಾಪುರ ಗ್ರಾಮದ ಅಂಬೇಡ್ಕರ್ ಕಾಲೊನಿಯಲ್ಲಿ ಹಳೆಮಾದಾಪುರ ವಡ್ಡು ಗ್ರಾಮದ ಮಸೀದಿ ಓಣಿಯಲ್ಲಿ ಹಾಗೂ ಹಳೆದರೋಜಿ ಗ್ರಾಮದಲ್ಲಿನ ಘಟಕಗಳು ದುರಸ್ಥಿಗೊಳಗಾಗಿ ಸುಮಾರು ಮೂರು ವರ್ಷಗಳಾದರೂ ಅವುಗಳನ್ನು ಸರಿಪಡಿಸಲು ಅಧಿಕಾರಿಗಳ ಮುಂದಾಗದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT