ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಧರ್ಮದಲ್ಲಿ ಸಮಾನತೆ ಆಶಯ: ಮಹಾಂತ ದೇವರು

ಗ್ರಾಮೀಣ ಪ್ರದೇಶದಲ್ಲಿ ಎತ್ತಿನ ಮೆರವಣಿಗೆ; ಬಸವ ಜಯಂತಿ ಪ್ರವಚನಕ್ಕೆ ತೆರೆ
Last Updated 8 ಮೇ 2019, 12:26 IST
ಅಕ್ಷರ ಗಾತ್ರ

ಹೊಸಪೇಟೆ: ನಗರ ಹಾಗೂ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಮಂಗಳವಾರ ಸಂಜೆ ಬಸವ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಬಸವ ಬಳಗವು ಜಯಂತಿ ಪ್ರಯುಕ್ತ ನಗರದ ಬಸವೇಶ್ವರ ಉದ್ಯಾನದಲ್ಲಿ ಆಯೋಜಿಸಿದ್ದ ಪ್ರವಚನಕ್ಕೆ ಮಂಗಳವಾರ ರಾತ್ರಿ ತೆರೆ ಬಿತ್ತು.

ನವದೆಹಲಿ ತೋಂಟದಾರ್ಯ ಶಾಖಾ ಮಠದ ಮಹಾಂತ ದೇವರು ಮೇ 1ರಂದು ಆರಂಭಿಸಿದ್ದ ಪ್ರವಚನ ಕೊನೆಗೊಂಡಿತು. ‘ಶೋಷಿತರು, ಹಿಂದುಳಿದವರನ್ನು ಮೇಲೆತ್ತಲು ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದರು. ಆದರೆ, ಕೆಲ ಪುರೋಹಿತಷಾಹಿ ಮನಸ್ಸುಗಳು ಆ ಧರ್ಮವನ್ನು ಹಾಳು ಮಾಡಲು ಹೊರಟಿದ್ದಾರೆ. ಆದರೆ, ಅದರಲ್ಲಿ ಅವರಿಗೆ ಯಶಸ್ಸು ಸಿಗುವುದಿಲ್ಲ’ ಎಂದು ಹೇಳಿದರು.

‘ಲಿಂಗಾಯತ ಧರ್ಮವು ಸಮಾನತೆಯ ಆಶಯವನ್ನು ಒಳಗೊಂಡಿದೆ. ಸ್ಥಾವರ, ವ್ಯಕ್ತಿ ಪೂಜೆಯನ್ನು ನಿರಾಕರಿಸುತ್ತದೆ. ಸಕಲ ಜೀವಿಯೂ ಒಂದೇ. ಪ್ರತಿಯೊಂದು ಜೀವಿಯಲ್ಲಿ ದೇವರಿದ್ದಾನೆ. ದೇವರನ್ನು ಬೇರೆಡೆ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ. ಈ ಕಾರಣಕ್ಕಾಗಿಯೇ ಬಸವಣ್ಣನವರು ಇಷ್ಟಲಿಂಗವನ್ನು ಕೊಟ್ಟರು. ಸಾಕ್ಷಾತ್‌ ದೇವರನ್ನೇ ಎದೆ ಮೇಲೆ ಧರಿಸಿಕೊಳ್ಳುವ ಸೌಭಾಗ್ಯ ಕಲ್ಪಿಸಿದರು’ ಎಂದರು.

‘ವೈದಿಕ, ಪುರೋಹಿತಷಾಹಿಯ ಕಪಿಮುಷ್ಟಿಯಿಂದ ಮುಗ್ಧ ಜನರನ್ನು ಹೊರತರಲು ಅತ್ಯಂತ ಸರಳವಾದ ಧರ್ಮವನ್ನು ಸ್ಥಾಪಿಸಿದ್ದಾರೆ. ಯಾರು ಬೇಕಾದರೂ ಈ ಧರ್ಮವನ್ನು ಸ್ವೀಕರಿಸಿ, ಮುಂದುವರೆಯಬಹುದು. ಅದಕ್ಕೆ ಯಾವುದೇ ಕಟ್ಟಳೆಗಳಿಲ್ಲ. ದೇಹವೇ ದೇಗುಲ, ಕಾಯಕವೇ ಕೈಲಾಸ, ದಾಸೋಹ ತತ್ವಗಳು ಬಸವಣ್ಣನವರು ಕೊಟ್ಟ ಶ್ರೇಷ್ಠ ಕೊಡುಗೆಗಳಾಗಿವೆ. ಪ್ರತಿಯೊಬ್ಬರೂ ಅವುಗಳನ್ನು ಅನುಸರಿಸಿದರೆ ಕಲ್ಯಾಣ ರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳುವುದರಲ್ಲಿ ಎರಡೂ ಮಾತಿಲ್ಲ’ ಎಂದು ಹೇಳಿದರು.

ಕಾರ್ಯಕ್ರಮದ ಬಳಿಕ ಚಿಣ್ಣರು ಬಾಲ ಬಸವ ವೇಷಧಾರಿಗಳಾಗಿ ವಚನ ಓದಿದರು. ಬಾಲಕಿಯರು ವಚನ ನೃತ್ಯ ಪ್ರಸ್ತುತಪಡಿಸಿದರು. ಬಳಿಕ ಶರಣ–ಶರಣೆಯರು ಸಾಮೂಹಿಕ ನೃತ್ಯ ಮಾಡಿದರು.

ಇಂಗಳಗಿ ವರದಿ:

ಗ್ರಾಮದಲ್ಲಿ ಬುಧವಾರ ದಿನವಿಡೀ ಹಬ್ಬದ ವಾತಾವರಣ ಮನೆ ಮಾಡಿತ್ತು. ಎಲ್ಲರ ಮನೆಗಳಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಆಕಳುಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ, ಅವುಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿದರು.

ವಡ್ಡರಹಳ್ಳಿ, ಪಿ.ಕೆ. ಹಳ್ಳಿ, ಕಾಕುಬಾಳು, ಬೈಲುವದ್ದಿಗೇರಿಯಲ್ಲಿ ಇದೇ ದೃಶ್ಯ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT