ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವು ಮಾರಾಟಕ್ಕೆ ರೈತರ ನಿರಾಸಕ್ತಿ: ಬರ ನಿರ್ವಹಣಾ ಸಮಿತಿಗೆ ಸಿಗದ ಸ್ಪಂದನೆ

Published 22 ಫೆಬ್ರುವರಿ 2024, 4:17 IST
Last Updated 22 ಫೆಬ್ರುವರಿ 2024, 4:17 IST
ಅಕ್ಷರ ಗಾತ್ರ

ಹರಪನಹಳ್ಳಿ: ಜಾನುವಾರುಗಳ ಸಲುವಾಗಿ ಮೇವು ಬ್ಯಾಂಕ್‌ ಸ್ಥಾಪಿಸುವ ಉದ್ದೇಶದಿಂದ ತಾಲ್ಲೂಕು ಆಡಳಿತವು ಮೇವು ಖರೀದಿಗೆ ಅದ್ಯತೆ ನೀಡುತ್ತಿದೆ. ಆದರೆ, ಮೇವಿನ ಕೊರತೆ, ಕಡಿಮೆ ಬೆಲೆ, ದುಬಾರಿ ಸಾರಿಗೆ ವೆಚ್ಚ ಕಾರಣ ರೈತರು ಮೇವು ಮಾರಾಟಕ್ಕೆ ಆಸಕ್ತಿ ತೋರುತ್ತಿಲ್ಲ.

ಬರ ನಿರ್ವಹಣೆ ಸಮಿತಿಯು ಮೇವು ಮಾರುವಂತೆ ಮೂರು ತಿಂಗಳಿನಿಂದ ಕೋರಿದರೂ ರೈತರು ಸ್ಪಂದಿಸಿಲ್ಲ. ಪ್ರಸಕ್ತ ವರ್ಷ ಬರಗಾಲದಿಂದ ತಾಲ್ಲೂಕಿನಲ್ಲಿ ಮೇವಿನ ಕೊರತೆ ಉಂಟಾಗಿದೆ. ಸರ್ಕಾರವು ₹ 6 ಸಾವಿರಕ್ಕೆ 1 ಟನ್ ಮೇವು ನಿಗದಿ ಪಡಿಸಿದೆ. ರೈತರೇ ಟ್ರ್ಯಾಕ್ಟರ್‌, ಲಾರಿ, ಎತ್ತಿನ ಬಂಡಿಗಳಲ್ಲಿ ಮೇವು ತುಂಬಿಸಿಕೊಂಡು ಹರಪನಹಳ್ಳಿಗೆ ತಲುಪಿಸಬೇಕು. 

‘ಮೇವನ್ನು 20 ಕಿ.ಮೀ.ವರೆಗೆ ಸಾಗಿಸಲು ಹಮಾಲಿ ಹೊರತುಪಡಿಸಿ ಟ್ರ್ಯಾಕ್ಟರ್‌ ಬಾಡಿಗೆಯೇ ₹8 ಸಾವಿರ ಕೊಡಬೇಕು. ಇದೇ ಕಾರಣಕ್ಕೆ ರೈತರು ಮೇವು ಮಾರಾಟಕ್ಕೆ ಹಿಂಜರಿಯುತ್ತಿದ್ದಾರೆ. ಅಲ್ಲದೇ, ಜಾನುವಾರು, ಮೇಕೆ, ಕುರಿ ಹೊಂದಿರುವ ಸಣ್ಣ ಮತ್ತು ದೊಡ್ಡ ರೈತರು ಮೇವು ಮಾರಲು ಆಸಕ್ತಿ ತೋರುತ್ತಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದರು.

‘ತಾಲ್ಲೂಕಿನಲ್ಲಿ 81,276 ಜಾನುವಾರು, 2,92,376 ಕುರಿ ಮತ್ತು ಮೇಕೆಗಳಿವೆ. ನಿತ್ಯ 4,727 ಟನ್ ಮೇವು ಉಣಿಸಲಾಗುತ್ತದೆ. ಈಗ ರೈತರ ಬಳಿ ಲಭ್ಯವಿರುವ ಅಂದಾಜು ರಾಗಿ ಹುಲ್ಲು, ಮೆಕ್ಕೆಜೋಳ, ದ್ವಿದಳ ಧಾನ್ಯದ ಮೇವು ಸೇರಿ ಒಟ್ಟು 63653 ಟನ್‌ ಮೇವು 12 ವಾರ ಸಾಕಾಗುತ್ತದೆ. ಮೇ ಎರಡನೇ ವಾರ ಮೇವು ಕೊರತೆ ತಲೆದೋರಬಹುದು’ ಎಂದು ಸಹಾಯಕ ನಿರ್ದೇಶಕ ಡಾ.ಶಿವಕುಮಾರ ಜ್ಯೋತಿ ತಿಳಿಸಿದರು.

ಹರಪನಹಳ್ಳಿಯಲ್ಲಿ ಮೆಕ್ಕೆಜೋಳದ ಮೇವು ಬಣವೆ
ಹರಪನಹಳ್ಳಿಯಲ್ಲಿ ಮೆಕ್ಕೆಜೋಳದ ಮೇವು ಬಣವೆ

‘ಸಿಕ್ಕಷ್ಟು ಬೆಲೆಗೆ ಜಾನುವಾರುಗಳ ಮಾರಾಟ’

-ಎ.ಎಂ. ಸೋಮಶೇಖರಯ್ಯ

ಕೂಡ್ಲಿಗಿ (ಬಳ್ಳಾರಿ ಜಿಲ್ಲೆ): ಬರಗಾಲದಿಂದ ತತ್ತರಿಸಿರುವ ತಾಲ್ಲೂಕಿನ ರೈತರು ಮೇವು ನೀರು ಹೊಂದಿಸಲಾಗದೆ ಜಾನುವಾರುಗಳನ್ನು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಬುಧವಾರ ಪಟ್ಟಣದ ಅಂಜನೇಯ ಬಯಲಿನಲ್ಲಿ ನಡೆಯುವ ಜಾನುವಾರುಗಳ ಸಂತೆಯಲ್ಲಿ ಲಕ್ಷ ರೂಪಾಯಿ ಮೌಲ್ಯದ ಜೋಡಿ ಎತ್ತುಗಳು ₹70 ಸಾವಿರಕ್ಕೆ ಮಾರಾಟವಾದವು. ಬ್ಯಾಂಕ್ ಸೇರಿ ವಿವಿಧ ಕಡೆ ಸಾಲ ಮಾಡಿ ಖರೀದಿಸಿದ ಜರ್ಸಿ ಹಸು ಎತ್ತು ಎಮ್ಮೆಗಳನ್ನೂ ಸಿಕ್ಕಷ್ಟು  ಬೆಲೆಗೆ ರೈತರು ಮಾರತೊಡಗಿದ್ದಾರೆ. ದಿನಕ್ಕೆ ಕನಿಷ್ಠ 50 ಜೋಡಿ ಎತ್ತುಗಳು ಮಾರಾಟವಾಗುತ್ತವೆ. ‘ಮಳೆ ಇಲ್ಲ. ಕೊಳವೆಬಾವಿಗಳು ಬತ್ತಿವೆ. ಜಾನುವಾರುಗಳಿಗೆ ಮೇವು ನೀರು ಒದಗಿಸಲು ಆಗುತ್ತಿಲ್ಲ. ‘ನನ್ನಲ್ಲಿ ಎರಡು ಜೋಡಿ ಎತ್ತುಗಳಿವೆ. ಮೇವಿನ ಕೊರತೆ ಕಾರಣ ಒಂದು ಜೋಡಿ ಎತ್ತನ್ನು ₹70 ಸಾವಿರಕ್ಕೆ ಮಾರಿದ್ದೇನೆ. ಇಂತಹ ಎತ್ತುಗಳನ್ನು ಮುಂಗಾರಿನಲ್ಲಿ ಕೊಳ್ಳಲು ಇದರ ಎರಡು ಪಟ್ಟು ಹಣ ನೀಡಬೇಕು’ ಎಂದು ತಾಲ್ಲೂಕಿನ ಚಿರತಗುಂಡ ಗ್ರಾಮದ ರೈತ ಸುರೇಶ್ ತಿಳಿಸಿದರು. ‘ತಾಲ್ಲೂಕನ್ನು ಬರಪೀಡಿತವೆಂದು ಘೋಷಿಸಿದ್ದರೂ ಈವರೆಗೆ ಜಾನುವಾರುಗಳಿಗೆ ಮೇವು ನೀರಿನ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಜಾನುವಾರುಗಳ ಮಾರಾಟವೊಂದೇ ಪರ್ಯಾಯ ಮಾರ್ಗ. ತಾಲ್ಲೂಕು ಹಾಗೂ ಜಿಲ್ಲಾಡಳಿತ ತಕ್ಷಣವೇ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ಆರಂಭಿಸಬೇಕು’ ಎಂದು ರೈತರಾದ ಬಸವರಾಜ ಕೊಟ್ರೇಶ್ ಹಾಲಪ್ಪ ಹೇಳಿದರು. ‘ತಾಲ್ಲೂಕಿನ ಮೂರು ಹೋಬಳಿಗಳಲ್ಲಿ ಮೂರು ಗೋಶಾಲೆ ತೆರೆಯುಲು ಪರಿಶೀಲನೆ ನಡೆದಿದೆ. ಶೀಘ್ರದಲ್ಲಿಯೇ ಗೋಶಾಲೆ ಆರಂಬಿಸಲಾಗುವುದು. ರೈತರಿಂದ ಮೇವು ಖರೀದಿಗೆ ಟೆಂಡರ್ ಕರೆಯಲಾಗಿದೆ’ ಎಂದು ಕೂಡ್ಲಿಗಿ ತಹಶೀಲ್ದಾರ್ ರಾಜು ಪಿರಂಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT