ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರ

ಮನೆಯ ಹಿರಿಯರಲ್ಲಿ ಕ್ಯಾನ್ಸರ್‌ ಇದ್ದರೆ ಇತರೆ ಸದಸ್ಯರ ತಪಾಸಣೆಗೆ ಸಲಹೆ
Last Updated 24 ಜುಲೈ 2018, 10:13 IST
ಅಕ್ಷರ ಗಾತ್ರ

ಹೊಸಪೇಟೆ: ‘ಬುಧವಾರದಿಂದ ಇದೇ 28ರ ವರೆಗೆ ನಗರದ ಚಿತ್ತವಾಡ್ಗಿ ಪಿ.ಬಿ.ಎಸ್‌. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಎಂ.ಎಸ್‌.ಪಿ.ಎಲ್‌.ನಸಾರ್ವಜನಿಕ ಸಂಪರ್ಕ ಅಧಿಕಾರಿ ರಮೇಶ್‌ ತಿಳಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಯಾರ ಕುಟುಂಬದಲ್ಲಿ ಈ ಹಿಂದೆ ಕ್ಯಾನ್ಸರ್‌ ಇತ್ತೋ ಅಂತಹ ಕುಟುಂಬದ ಸದಸ್ಯರಿಗೆ ಮತ್ತೆ ರೋಗ ಬರುವ ಸಾಧ್ಯತೆ ಹೆಚ್ಚಿದೆ. ಅಂತಹವರು ತಪ್ಪದೇ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದರು.

‘ಕ್ಯಾನ್ಸರ್‌ ಇನ್ನೂ ಆರಂಭಿಕ ಹಂತದಲ್ಲಿ ಇದ್ದರೆ ಚಿಕಿತ್ಸೆ ಪಡೆದು ಬೇಗ ಗುಣಮುಖರಾಗಬಹುದು. ಎರಡ್ಮೂರು ಹಂತ ದಾಟಿದರೆ ಚಿಕಿತ್ಸೆಗೆ ಸಾಕಷ್ಟು ಖರ್ಚು ಬರುತ್ತದೆ. ಜತೆಗೆ ರೋಗ ಗುಣಮುಖವಾಗುವ ಸಾಧ್ಯತೆ ತೀರ ಕಡಿಮೆ ಇರುತ್ತದೆ. ತಪಾಸಣೆ ವೇಳೆ ಯಾರಲ್ಲಾದರೂ ಕ್ಯಾನ್ಸರ್‌ ಕಾಣಿಸಿಕೊಂಡರೆ ಅಂತಹವರಿಗೆ ಬೆಂಗಳೂರು ಅಥವಾ ಮುಂಬೈನಲ್ಲಿ ಕಂಪನಿ ವತಿಯಿಂದ ಸಬ್ಸಿಡಿಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು’ ಎಂದು ವಿವರಿಸಿದರು.

‘ನಾಲ್ಕು ದಿನಗಳ ಶಿಬಿರದಲ್ಲಿ ಇಂಡಿಯನ್‌ ಕ್ಯಾನ್ಸರ್‌ ಸೊಸೈಟಿಯ ಐದು ಜನ ವೈದ್ಯರು, ನಾಲ್ವರು ತಂತ್ರಜ್ಞರು ಪಾಲ್ಗೊಳ್ಳುವರು. ನಿತ್ಯ 150ರಿಂದ 170 ಜನರ ತಪಾಸಣೆ ಮಾಡಲಾಗುವುದು. ಈಗಾಗಲೇ 250 ಜನ ಹೆಸರು ನೋಂದಣಿ ಮಾಡಿಸಿದ್ದಾರೆ. ಇನ್ನೂ 350 ಜನ ಹೆಸರು ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ’ ಎಂದರು.

‘ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ಜನರಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಅನ್ಯ ಜಿಲ್ಲೆಗಳಿಂದ ಯಾರಾದರೂ ಬಂದರೆ ಅವರ ಆರೋಗ್ಯದ ತಪಾಸಣೆ ಕೂಡ ಮಾಡಲಾಗುವುದು. ಬುಧವಾರ ಬೆಳಿಗ್ಗೆ 10.30ಕ್ಕೆ ಎಂ.ಎಸ್‌.ಪಿ.ಎಲ್‌.ಅಧ್ಯಕ್ಷ ನರೇಂದ್ರ ಕುಮಾರ ಬಲ್ದೋಟ ಅವರು ಶಿಬಿರಕ್ಕೆ ಚಾಲನೆ ಕೊಡುವರು. ಡಿ.ವೈ.ಎಸ್‌.ಪಿ. ಕೆ. ಶಿವಾರೆಡ್ಡಿ, ಇಂಡಿಯನ್‌ ಕ್ಯಾನ್ಸರ್‌ ಸೊಸೈಟಿಯ ಡಾ. ಚೇತನಾ ನಾಯ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದು ಮಾಹಿತಿ ನೀಡಿದರು.

‘ಮೂರನೇ ವರ್ಷದ ಈ ಶಿಬಿರವನ್ನು ಬೆಂಗಳೂರಿನ ಇಂಡಿಯನ್‌ ಕ್ಯಾನ್ಸರ್‌ ಸೊಸೈಟಿ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಮಹಿಳಾ ಸಬಲೀಕರಣ, ಶಿಕ್ಷಣ, ಆರೊಗ್ಯ, ಪರಿಸರ, ಸ್ವಚ್ಛತೆಗಾಗಿ ಸಂಸ್ಥೆಯು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಈ ಶಿಬಿರದ ಅದರ ಒಂದು ಭಾಗ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT