ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಹೊದ್ದ ಶಾಲೆ ನೋಡ ಬನ್ನಿ

ಗಚ್ಚಿನಮಠ ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿಯ ಗರಿಮೆ
Last Updated 7 ಜೂನ್ 2019, 16:15 IST
ಅಕ್ಷರ ಗಾತ್ರ

ಕೊಟ್ಟೂರು: ಪಟ್ಟಣದ ಗಚ್ಚಿನ ಮಠ ಸರ್ಕಾರಿ ಮಾದರಿ ಶಾಲೆ ಹಸಿರು ಕಾಳಜಿಗೆ ಪ್ರಸಿದ್ಧ. ಈ ಶಾಲೆಗೆ ಬಂದರೆ ಎಲ್ಲೆಲ್ಲೂ ಹಸಿರೇ ಗೋಚರಿಸುತ್ತದೆ.

ಅಂದ ಹಾಗೆ, ಈ ಬಾರಿಯ ಬಳ್ಳಾರಿ ವಲಯ ಮಟ್ಟದ ಅತ್ಯುತಮ ಪರಿಸರ ಮಿತ್ರ ಶಾಲೆ ಪ್ರಶಸ್ತಿಯನ್ನು ₹ 50 ಸಾವಿರ ನಗದು ಬಹುಮಾನದೊಂದಿಗೆ ಜೂನ್‌ 5ರಂದು ಈ ಶಾಲೆ ತನ್ನ ಮುಡಿಗೇರಿಸಿಕೊಂಡಿದೆ.

ಈ ಶಾಲೆಯ ಪರಿಸರ ಕಾಳಜಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2016–17ನೇ ಸಾಲಿನಲ್ಲಿ ಪರಿಸರ ಮಿತ್ರ ಹಾಗೂ 2017–18ನೇ ಸಾಲಿನ ಜಿಲ್ಲಾ ಮಟ್ಟದ ವಿಶೇಷ ಪರಿಸರ ಮಿತ್ರ ಪ್ರಶಸ್ತಿಯನ್ನು ನೀಡಿತ್ತು.

ಶಾಲೆಯಲ್ಲಿ ಸ್ವಚ್ಛತೆಯೇ ಸರ್ವಸ್ವ. ಹಸಿರೇ ಉಸಿರು ಎಂಬ ಅರಿವನ್ನು ಪ್ರಧಾನವಾಗಿ ವಿದ್ಯಾರ್ಥಿಗಳಲ್ಲಿ ಮೂಡಿಸಲಾಗುತ್ತಿದೆ. ಅಕ್ಷರದ ಅಭ್ಯಾಸದ ಜತೆ ಪರಿಸರ ಪಾಠವನ್ನು ಸಹ ಕಲಿಸಲಾಗುತ್ತಿದೆ.

ಶ್ರಮದಾನ: ನಿತ್ಯ ಒಂದೆರಡು ತಾಸು ಶಿಕ್ಷಕರ ಜತೆಗೆ ಮಕ್ಕಳು ಶ್ರಮದಾನ ಮಾಡುತ್ತಿದ್ದು, ಮುಖ್ಯಶಿಕ್ಷಕರೂ ಸಹ ಮಕ್ಕಳೊಂದಿಗೆ ಚನಕೆ, ಗುದ್ದಲಿ ಹಿಡಿದು ಭೂಮಿಯನ್ನು ಹದ ಮಾಡುವ, ಸಸಿಗಳನ್ನು ಪೋಷಿಸುವ ಕೆಲಸ ಮಾಡುವುದು ವಿಶೇಷ.

ಶಾಲೆಯ ಆವರಣದಲ್ಲಿ ಮಾವು, ಬೇವು, ತೇಗ, ಶ್ರೀಗಂಧ, ಅಡಿಕೆ, ತೆಂಗು ಹಾಗೂ ಆಯರ್ವೇದ ಸಸ್ಯಗಳಾದ ನಿಂಬೆಹುಲ್ಲು, ದೊಡ್ಡಪಾತ್ರೆ, ಸುವರ್ಣಗಡ್ಡೆ, ಬಿಲ್ವಪತ್ರೆ ಸೇರಿ ಸುಮಾರು 100ಕ್ಕೂ ಹೆಚ್ಚು ಮರ–ಗಿಡಗಳಿವೆ. ಬಿಸಿಯೂಟಕ್ಕೆ ಬೇಕಾದ ಕೆಲ ತರಕಾರಿಗಳನ್ನೂ ಇಲ್ಲಿಯೇ ಬೆಳೆಯುತ್ತಾರೆ. ಶಾಲೆಯ ಆವರಣದಲ್ಲಿರುವ ಕೊಳವೆ ಬಾವಿಯಿಂದ ನೀರೇ ಆಧಾರ.

ಮುಖ್ಯಶಿಕ್ಷಕ ಇಸಾಕ್ ಬಾಗಳಿಯವರು ಸ್ವಂತಃ ಖರ್ಚಿನಲ್ಲಿ ವಿಶಾಲವಾದ ರಂಗಮಂದಿರವನ್ನು ನಿರ್ಮಿಸಿದ್ದು. ಅದಕ್ಕೆ ಸಹಶಿಕ್ಷಕರು ಕೈ ಜೋಡಿಸಿದ್ದಾರೆ. 2012ರಲ್ಲಿ ಬರಡು ಭೂಮಿಯಂತಿದ್ದ ಶಾಲೆಯು 84 ವಿದ್ಯಾರ್ಥಿಗಳಿಂದ ಈಗ 261 ಕ್ಕೆ ಏರಿಕೆಯಾಗಿದೆ. ಫಲಿತಾಂಶ ಉತ್ತಮವಾಗಿದೆ.

‘ಪಾಠ ಮಾಡುವುದರ ಜತೆಗೆ ಪರಿಸರ ಸಂರಕ್ಷಣೆಯ ಪಾಠ ಹೇಳಿಕೊಡುತ್ತಿರುವುದು ಶಾಲೆಯ ವಿಶೇಷ’ ಎನ್ನುತ್ತಾರೆ ಗ್ರಾಮದ ಪ್ರಕಾಶ್.

*
ಗಚ್ಚಿನಮಠ ಶಾಲೆ ತಾಲ್ಲೂಕಿನ ಎಲ್ಲಾ ಶಾಲೆಗಳಿಗೂ ಮಾದರಿಯಾಗಿದೆ. ಪಾಠ ಮತ್ತು ಪರಿಸರ ಸಂರಕ್ಷಣೆಯು ಎಲ್ಲ ಶಾಲೆಗಳಲ್ಲೂ ಒಟ್ಟಿಗೇ ನಡೆಯಬೇಕು
-ಬಿ.ಉಮಾದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ, ಕೂಡ್ಲಿಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT