ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೋರಣಗಲ್ಲು | ಶಿಥಿಲ ಕೊಠಡಿಗಳಲ್ಲೇ ಪಾಠ: ಆತಂಕ

ಉಬ್ಬಳಗಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಿ.ಎರ‍್ರಿಸ್ವಾಮಿ
Published 29 ಜೂನ್ 2024, 5:26 IST
Last Updated 29 ಜೂನ್ 2024, 5:26 IST
ಅಕ್ಷರ ಗಾತ್ರ

ತೋರಣಗಲ್ಲು: ಹೋಬಳಿಯ ಉಬ್ಬಳಗಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳು ಹಲವು ವರ್ಷಗಳಿಂದ ಶಿಥಿಲಗೊಂಡಿದ್ದು, ಇನ್ನುಳಿದ ಬಿರುಕು ಬಿಟ್ಟ ಕೊಠಡಿಗಳಲ್ಲೇ ಮಕ್ಕಳು, ಶಿಕ್ಷಕರು ದಿನ ದೂಡುತ್ತಿದ್ದಾರೆ.

ಗ್ರಾಮದ ರಸ್ತೆಯ ಪಕ್ಕದಲ್ಲಿ ಚಿಕ್ಕದಾದ ಸ್ಥಳದಲ್ಲಿ ಶಾಲೆ ನಿರ್ಮಿಸಲಾಗಿದ್ದು, ಒಟ್ಟು 8 ಬೋಧನಾ ಕೊಠಡಿಗಳಿವೆ. ಅವುಗಳಲ್ಲಿ ನಾಲ್ಕು ಸಂಪೂರ್ಣ ಶಿಥಿಲಗೊಂಡಿದ್ದರಿಂದ ಬೀಗ ಜಡಿಯಲಾಗಿದೆ.

ಶಾಲೆಯ ಗ್ರಂಥಾಲಯ ಕೊಠಡಿ ಸಹಿತ ಇನ್ನುಳಿದ ಮೂರು ಕೊಠಡಿಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡು, ಚಾವಣಿಯ ಸಿಮೆಂಟ್ ಕಾಂಕ್ರೀಟ್ ಕಿತ್ತು, ಕಬ್ಬಿಣದ ಸರಳುಗಳು ಹೊರಚಾಚಿವೆ. ಈ ಕೊಠಡಿಗಳು ಮಳೆಗಾಲದಲ್ಲಿ ನಿರಂತರವಾಗಿ ಸೋರುತ್ತವೆ.

ಶಾಲೆಯ ಮುಖ್ಯ ಶಿಕ್ಷಕರ ಕೊಠಡಿ ಬಿಟ್ಟು ಉಳಿದೆಲ್ಲ ಕೊಠಡಿಗಳು ಹಲವಾರು ವರ್ಷಗಳಿಂದ ಪಾಳುಬಿದ್ದು ಅವನತಿಯ ಹಂಚಿಗೆ ತಲುಪಿದ್ದು, ಯಾವ ಕ್ಷಣದಲ್ಲಾದರೂ ಬೀಳಬಹುದು ಎಂಬ ಆತಂಕ ಪಾಲಕರು, ಮಕ್ಕಳು, ಶಿಕ್ಷಕರದ್ದು.

1ರಿಂದ 8ನೇ ತರಗತಿ ವರೆಗಿನ ಈ ಶಾಲೆಯಲ್ಲಿ 111 ಮಕ್ಕಳು ಓದುತ್ತಿದ್ದಾರೆ. ಸೂಕ್ತ ಆಟದ ಮೈದಾನದ ಕೊರತೆಯಿದ್ದು, ಮಕ್ಕಳು ಪ್ರತಿ ವರ್ಷ ಕ್ರೀಡಾ ಚಟುವಟಿಕೆಗಳ ಅಭ್ಯಾಸಕ್ಕಾಗಿ ಪರದಾಡುವಂತಾಗಿದೆ.

ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ಶೀಘ್ರವಾಗಿ ತೆರವುಗೊಳಿಸಿ ಬೇರೆ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಿಸುವಂತೆ ಸಂಡೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಶಾಸಕರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಜನರು ಅಸಮಾಧಾನ ಹೊರಹಾಕಿದ್ದಾರೆ.

ಶೌಚಾಲಯದ ಸೌಲಭ್ಯವೂ ಇಲ್ಲದಿರುವುದರಿಂದ ಶೌಚಕ್ಕಾಗಿ ದೂರದ ಸಾರ್ವಜನಿಕರ ಶೌಚಾಲಯಕ್ಕೆ ತೆರಳಬೇಕು. ರಸ್ತೆಯ ಪಕ್ಕದಲ್ಲೇ ಶಾಲೆ ಇರುವುದರಿಂದ ನಿತ್ಯ ಸಂಚರಿಸುವ ನೂರಾರು ಅದಿರು ಲಾರಿಗಳು ಮಕ್ಕಳ ಪಾಠಕ್ಕೆ ಅಡ್ಡಿ, ಜೀವಕ್ಕೆ ಎರವಾಗಗಿವೆ.

‘ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮವಹಿಸಿ ಮೂಲ ಸೌಲಭ್ಯಗಳನ್ನು ಹೊಂದಿದ ಸುಸಜ್ಜಿತ ಶಾಲೆ ನಿರ್ಮಿಸಬೇಕು’ ಎಂದು ಗ್ರಾಮದ ಯುವಕ ಪಂಪಾಪತಿ ಒತ್ತಾಯಿಸಿದರು.

ಸ್ಥಳದ ಅಭಾವ

‘ಶಾಲೆಯ ಕೊಠಡಿಗಳು ಶಿಥಿಲಗೊಂಡಿದ್ದರಿಂದ ಮಕ್ಕಳಿಗೆ ತೊಂದರೆಯಾಗಿದೆ. ನೂತನ ಕಟ್ಟಡ ನಿರ್ಮಾಣಕ್ಕಾಗಿ ಅನುದಾನವಿದ್ದು, ಗ್ರಾಮದಲ್ಲಿ ಸ್ಥಳದ ಅಭಾವದಿಂದ ಶಾಲೆಯನ್ನು ನಿರ್ಮಿಸಲು ಆಗುತ್ತಿಲ್ಲ. ಜನರು ಶಾಲೆಗೆ ಸ್ಥಳ ಒದಗಿಸಿದರೆ ತ್ವರಿತವಾಗಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಸಂಡೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಆರ್.ಅಕ್ಕಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT