ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಜೋಡಿ ರಥೋತ್ಸವಕ್ಕೆ ಜನಸಾಗರ

Last Updated 19 ಏಪ್ರಿಲ್ 2019, 14:21 IST
ಅಕ್ಷರ ಗಾತ್ರ

ಹೊಸಪೇಟೆ: ವಿರೂಪಾಕ್ಷೇಶ್ವರ ಹಾಗೂ ಚಂದ್ರಮೌಳೇಶ್ವರ ಸ್ವಾಮಿ ಜೋಡಿ ರಥೋತ್ಸವ ತಾಲ್ಲೂಕಿನ ಹಂಪಿ ರಥಬೀದಿಯಲ್ಲಿ ಶುಕ್ರವಾರ ಸಂಜೆ ಅಪಾರ ಜನಸ್ತೋಮದ ನಡುವೆ ನೆರವೇರಿತು.

ವಿದ್ಯಾರಣ್ಯ ಭಾರತಿ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಶ್ರದ್ಧಾ, ಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ತೇರು ಎಳೆದರು. ರಥಬೀದಿಯಲ್ಲಿ ಆನೆ ಲಕ್ಷ್ಮಿ ಮುಂದೆ ಮುಂದೆ ಹೆಜ್ಜೆ ಹಾಕಿದರೆ, ಅದರ ಹಿಂದೆತೇರುಗಳನ್ನು ಭಕ್ತರು ಎಳೆದರು. ರಥಬೀದಿಯ ಎರಡೂ ಕಡೆ ನಿಂತಿದ್ದ ಜನ ತೇರುಗಳಿಗೆ ಉತ್ತತ್ತಿ, ಬಾಳೆಹಣ್ಣು, ಹೂ ಎಸೆದು ಭಕ್ತಿ ಸರ್ಮಪಸಿದರು. ಅಲ್ಲಿಂದಲೇ ಕೈಮುಗಿದು ಧನ್ಯತೆಯ ಭಾವ ಮೆರೆದರು.

ಈ ಕ್ಷಣಕ್ಕೆ ವಿದೇಶಿಯರು ಕೂಡ ಸಾಕ್ಷಿಯಾದರು. ಸ್ಥಳೀಯರೊಂದಿಗೆ ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡು ಸಂಭ್ರಮಿಸಿದರು. ತೇರುಗಳು ಮೂಲ ಸ್ಥಾನಕ್ಕೆ ಹಿಂತಿರುಗುವಾಗ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ‘ವಿರೂಪಾಕ್ಷೇಶ್ವರ ಸ್ವಾಮಿ’, ಚಂದ್ರಮೌಳೇಶ್ವರ ಸ್ವಾಮಿ’ಗೆ ಜಯವಾಗಲಿ ಎಂದು ಘೊಷಣೆಗಳನ್ನು ಕೂಗಿದರು. ರಥಬೀದಿಯಲ್ಲಿ ಜನ ನಿಲ್ಲುವುದಕ್ಕೆ ಜಾಗ ಸಾಲಲಿಲ್ಲ. ಇದರಿಂದಾಗಿ ಅನೇಕ ಜನ ಗುಡ್ಡ, ಬಂಡೆಗಲ್ಲುಗಳ ಮೇಲೆ ಕುಳಿತುಕೊಂಡು ರಥೋತ್ಸವ ಕಣ್ತುಂಬಿಕೊಂಡರು.

ರಥೋತ್ಸವಕ್ಕೂ ಮುನ್ನ ಧ್ವಜ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು.ನರಗುಂದ ತಾಲ್ಲೂಕಿನ ಕೊಣ್ಣುರು ಗ್ರಾಮದ ಮಹಾಲಿಂಗಪ್ಪ ವಿರೂಪಾಕ್ಷಪ್ಪ ಚಿನಿವಾಲರು ₹76 ಸಾವಿರಕ್ಕೆ ವಿರೂಪಾಕ್ಷೇಶ್ವರ ಸಹಿತ ಪಂಪಾಂಬಿಕೆ ಧ್ವಜ,ಹಂಪಿಯ ಗುರುನಾಥ ಮೋಹನ್‌ ಜೋಷಿಯವರು ₹51 ಸಾವಿರಕ್ಕೆ ವಿದ್ಯಾರಣ್ಯ ಸಹಿತ ಚಂದ್ರಮೌಳೇಶ್ವರ ಧ್ವಜ ತಮ್ಮದಾಗಿಸಿಕೊಂಡರು.

ಬೆಳಿಗ್ಗೆ ವಿದ್ಯಾರಣ್ಯ ಭಾರತಿ ಸ್ವಾಮೀಜಿಯವರು ವಿರೂಪಾಕ್ಷೇಶ್ವರ, ಚಂದ್ರಮೌಳೇಶ್ವರ ಸ್ವಾಮೀಜಿಗೆ ವಿಶೇಷ ಪೂಜೆ ಸಲ್ಲಿಸಿದರು. ವಿರೂಪಾಕ್ಷ ದೇವರಿಗೆ ಚಿನ್ನದ ಮುಕುಟ ಹಾಕಿ ಪೂಜಿಸಲಾಯಿತು. ಬಳಿಕ ಮಡಿತೇರು ನಡೆಯಿತು.

ದೇವರ ದರ್ಶನ ಹಾಗೂ ರಥೋತ್ಸವಕ್ಕೆ ಜಿಲ್ಲೆ ಸೇರಿದಂತೆ ನೆರೆಯ ಕೊಪ್ಪಳ, ಚಿತ್ರದುರ್ಗ, ರಾಯಚೂರು, ಬಾಗಲಕೋಟೆ, ವಿಜಯಪುರ, ಗದಗ ಜಿಲ್ಲೆಯ ಜನ ಬಂದಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬಂದದ್ದರಿಂದ ಹಂಪಿಯಲ್ಲಿ ದಿನವಿಡೀ ಸಾರ್ವಜನಿಕ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT