ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಮುಂದುವರಿದ ಮಳೆ: 8 ಮನೆಗಳಿಗೆ ಹಾನಿ

ಬುಧವಾರ ಜಿಲ್ಲೆಯಲ್ಲಿ ಒಟ್ಟಾರೆ 3.85 ಸೆಂಟಿ ಮೀಟರ್‌ ವರ್ಷಧಾರೆ
Published 12 ಜೂನ್ 2024, 16:05 IST
Last Updated 12 ಜೂನ್ 2024, 16:05 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿಯಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಸಂಜೆಯ ವರೆಗೆ ಭಾರಿ ಮಳೆಯಾಗಿದೆ. ಪರಿಣಾಮವಾಗಿ ಜಿಲ್ಲೆಯಲ್ಲಿ ಒಟ್ಟು 8 ಮನೆಗಳಿಗೆ ಹಾನಿಯಾಗಿದೆ. 

ಬಳ್ಳಾರಿ, ಸಂಡೂರು ತಾಲೂಕಿನಲ್ಲಿ ತಲಾ ಮೂರು, ಕಂಪ್ಲಿ ಮತ್ತು ಸಿರುಗುಪ್ಪ ತಾಲೂಕಿನಲ್ಲಿ ತಲಾ ಒಂದೊಂದು ಮನೆಗೆ ಹಾನಿಯಾಗಿದೆ ಎಂದು ‘ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ’ದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಬಳ್ಳಾರಿ ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಕೊಳೆಗೇರಿಗಳಲ್ಲಿ ಎಂದಿನಂತೆ ಮನೆಗಳಲ್ಲಿ ಕೊಳಚೆ ನೀರು ಆವರಿಸಿತು. ನಗರದ ಪ್ರಮುಖ ರಸ್ತೆಗಳು, ಅಂಡರ್‌ ಪಾಸ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಆವರಿಸಿತು. ಹೀಗಾಗಿ ವಾಹನ ಸವಾರರು ಪರದಾಡಬೇಕಾಯಿತು. ಟ್ರಾಫಿಕ್‌ ಜಾಮ್‌ನಿಂದಾಗಿ ಜನ ಹೈರಾಣಾದರು. 

ಮಳೆಯಾಗುತ್ತಲೇ ನಗರದಲ್ಲಿ ವಿದ್ಯುತ್‌ ಕಡಿತವಾಯಿತು. ಹಲವಾರು ಪ್ರದೇಶಗಳಲ್ಲಿ ದಿನವೀಡೀ ವಿದ್ಯುತ್‌ ಸಮಸ್ಯೆ ಕಾಡಿತು. 

ಬುಧವಾರ ಬೆಳಗ್ಗೆಯಿಂದ ಸಂಜೆ 5ರ ವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟಾರೆ 3.85 ಸೆಂಟಿ ಮೀಟರ್‌ ಮಳೆಯಾಗಿರುವುದಾಗಿ ತಿಳಿದು ಬಂದಿದೆ. 

ಮಳೆಯಿಂದಾಗಿ ಕಾಲುವೆಗಳು, ಹಳ್ಳ ಕೊಳ್ಳಗಳು ತುಂಬಿ ಹರಿದವರು. ಜತೆಗೆ ನಗರ ವ್ಯಾಪ್ತಿಯ ರಾಜಕಾಲುವೆಗಳೂ ಉಕ್ಕಿ ಹರಿದು ಜನ ಜೀವನ ಅಸ್ತವ್ಯಸ್ತಗೊಳಿಸಿತು. ಬುಧವಾರ ರಾತ್ರಿಯಾದರೂ ಮಳೆ ಮುಂದುವರಿದಿತ್ತು.

ಸಣ್ಣಗೆ ಸುರಿಯುತ್ತಿದ್ದ ಮಳೆಯ ನಡುವೆಯೂ ವ್ಯಾಪಾರದ ಬಂಡಿ ತಳ್ಳುತ್ತಿದ್ದ ವ್ಯಕ್ತಿ 
ಚಿತ್ರ: ಮುರುಳಿಕಾಂತರಾವ್‌ 
ಸಣ್ಣಗೆ ಸುರಿಯುತ್ತಿದ್ದ ಮಳೆಯ ನಡುವೆಯೂ ವ್ಯಾಪಾರದ ಬಂಡಿ ತಳ್ಳುತ್ತಿದ್ದ ವ್ಯಕ್ತಿ  ಚಿತ್ರ: ಮುರುಳಿಕಾಂತರಾವ್‌ 

ವಾಡಿಕೆಗಿಂತ ಭಾರಿ ಹೆಚ್ಚಿನ ಮಳೆ: ಜೂನ್‌ 11ರಿಂದ 12ರ ಬೆಳಗ್ಗೆ 8.30 ವರೆಗೆ ಬಳ್ಳಾರಿಯಲ್ಲಿ 0.3 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ 1.39 ಮಳೆಯಾಗಿದ್ದು ಇದು ಶೇ 363ರಷ್ಟು ಅಧಿಕ ಎಂಬುದು ‘ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ’ದ ಅಂಕಿ ಅಂಶಗಳಿಂದ ಗೊತ್ತಾಗಿದೆ.  ಬಳ್ಳಾರಿ ತಾಲೂಕಿನಲ್ಲಿ ವಾಡಿಕೆ 0.25 ಸೆಂ.ಮೀ ಆಗಿದ್ದರೆ ವಾಸ್ತವದಲ್ಲಿ 1.04 ಸೆಂ.ಮೀ  ಮಳೆಯಾಗಿದೆ. ಸಂಡೂರಿನಲ್ಲಿ 0.22 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ 1.05 ಸೆಂ.ಮೀ ಆಗಿದೆ. ಸಿರುಗುಪ್ಪದಲ್ಲಿ 0.55 ಸೆಂ.ಮೀ ವಾಡಿಕೆಯಾಗಿದ್ದರೆ 1.98 ಸೆಂ.ಮೀ ಮಳೆಯಾಗಿದೆ. ಕುರುಗೋಡಿನಲ್ಲಿ 0.51 ಸೆಂ.ಮೀ ವಾಡಿಕೆ ಮಳೆ. ಆದರೆ 2.07 ಸೆಂ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT