ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಡುಗು-ಸಿಡಿಲು ಅಪಾಯದಿಂದ ಪಾರಾಗುವುದು ಹೇಗೆ?

ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಮಾರ್ಗೋಪಾಯಗಳ ಬಿಡುಗಡೆ
Published 12 ಮೇ 2024, 4:27 IST
Last Updated 12 ಮೇ 2024, 4:27 IST
ಅಕ್ಷರ ಗಾತ್ರ

ಬಳ್ಳಾರಿ: ಕಳೆದ ಹತ್ತು ದಿನಗಳಿಂದ ಬಳ್ಳಾರಿಯೂ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಗುಡುಗು ಸಿಡಿಲಿನ ಅಬ್ಬರವೂ ಜೋರಾಗಿದೆ. ಸಿಡಿಲು ಬಡಿದು ಈಗಾಗಲೇ ಜನ–ಜಾನುವಾರುಗಳು ಮೃತಪಟ್ಟಿವೆ. ಈ ಅಪಾಯದಿಂದ ಪಾರಾಗಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಾರ್ಗೋಪಾಯಗಳನ್ನು ಬಿಡುಗಡೆ ಮಾಡಿದ್ದು, ಅವುಗಳನ್ನು ಕಡ್ಡಾಯವಾಗಿ ಪಾಲಿಸಲು ಕೋರಿದೆ. 

ಸಲಹೆ ಸೂಚನೆಗಳು

ಹವಾಮಾನ ಮುನ್ಸೂಚನೆ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಬರುವ ಸಂದೇಶಗಳನ್ನು ಗಮನಿಸುತ್ತಿರಬೇಕು. ಗುಡುಗು–ಸಿಡಿಲಿನ ಅಬ್ಬರ ಇರುವಾಗ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವುದು ಅಥವಾ ಮನೆಯಿಂದ ಹೊರಗೆ ಹೋಗವುದನ್ನು ತಪ್ಪಿಸಬೇಕು. ಲೋಹದ ತಗಡು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ. ಕಟ್ಟಡಗಳು, ಕಿಟಕಿ ಮುಚ್ಚಿರುವ ವಾಹನಗಳು ಸುರಕ್ಷಿತ. 

ಕೆರೆ ಮತ್ತು ನದಿಗಳು ಹಾಗೂ ಇನ್ನಿತರ ನೀರಿನ ಮೂಲಗಳಿಂದ ದೂರವಿರಬೇಕು. ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು, ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರಬೇಕು.

ಗುಡುಗು - ಸಿಡಿಲಿನ ಎಚ್ಚರಿಕೆ ಇದ್ದಲ್ಲಿ ಪ್ರಯಾಣ ಮುಂದೂಡಬೇಕು. ವಾಹನ ಚಾಲನೆ ಮಾಡುತ್ತಿದ್ದರೆ, ತಕ್ಷಣವೇ ನಿಲ್ಲಿಸಿ ಅದರೊಳಗೇ ಆಶ್ರಯ ಪಡೆಯಬೇಕು. ಕಿಟಕಿಗಳನ್ನು ಮುಚ್ಚಿರಬೇಕು. ಮರಗಳು ಮತ್ತು ವಿದ್ಯುತ್ ಲೈನ್‍ಗಳಿಂದ ದೂರ ವಾಹನ ನಿಲ್ಲಿಸಿರಬೇಕು. ಗುಂಪಿನಲ್ಲಿ ನಿಂತಿದ್ದರೆ ಅಂತರ ಕಾಯ್ದುಕೊಳ್ಳಬೇಕು.

ಮಳೆಗಾಲದ ಆರಂಭದ ಹಂತದಲ್ಲಿ ತೀವ್ರತರದ ಗುಡುಗು-ಸಿಡಿಲು ಕಂಡುಬರುವುದು ಸಾಮಾನ್ಯ. ಬಯಲು ಪ್ರದೇಶಗಳಲ್ಲಿ ಗಿಡಗಳ ಕೆಳಗಡೆ ಅಥವಾ ಕಬ್ಬಿಣದಿಂದ ಕೂಡಿರುವ ಕಟ್ಟಡ ಅಥವಾ ಶೆಡ್‍ಗಳಲ್ಲಿ ಆಶ್ರಯ ಪಡೆಯದೇ ಸೂಕ್ತ ಸ್ಥಳದಲ್ಲಿ ಇದ್ದು ಜೀವ ಹಾನಿಯನ್ನು ತಪ್ಪಿಸಬೇಕು. 
ರಮೇಶ್‌ ಬಾಬು, ಜಿಲ್ಲಾ ಆರೋಗ್ಯಾಧಿಕಾರಿ 

ಬಯಲಿನಲ್ಲಿದ್ದು, ಆಶ್ರಯಕ್ಕೆ ಏನೂ ಸಿಗದೇ ಇದ್ದಾಗ ಎರಡು ಕಾಲುಗಳನ್ನು ಜೋಡಿಸಿ ಮಂಡಿಯೂರಿ ಕುಳಿತು, ತಲೆಯನ್ನು ಬಗ್ಗಿಸಿ ಕಿವಿಗಳನ್ನು ಮುಚ್ಚಿಕೊಳ್ಳಬೇಕು. ಮಿಂಚನ್ನು ಆಕರ್ಷಿಸುವ ವಿದ್ಯುತ್‌,ಟೆಲಿಫೋನ್‌ ಕಂಬಗಳು, ಮರಗಳ ಕೆಳಗೆ ಆಶ್ರಯ ಪಡೆಯಬಾರದು. ಅರಣ್ಯದಲ್ಲಿದ್ದರೆ ಸಣ್ಣ ಹಾಗೂ ಚಿಕ್ಕ ಮರಗಳ ಕೆಳಗೆ ಆಶ್ರಯ ಪಡೆಯಬೇಕು. ಲೋಹದ ವಸ್ತುಗಳನ್ನು ಬಳಸಬಾರದು. ಬೈಕುಗಳ ಬಳಿ ನಿಲ್ಲಬಾರದು. ಮಳೆ ಬೀಳುತ್ತಿದ್ದಾಗ ಮೊಬೈಲ್ ಫೋನ್‌ ಬಳಸಬಾರದು. 

ಕಬ್ಬಿಣದ ಸರಳುಗಳಿರುವ ಛತ್ರಿ ಬಳಸಬಾರದು. ಮಕ್ಕಳು, ವೃದ್ದರು, ಜಾನುವಾರುಗಳು ಹಾಗೂ ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರಿಸಬೇಕು.

ಸಿಡಿಲು ಬಡಿದಾಗ ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಸಾಧ್ಯತೆ ಉಂಟು. ಆದ್ದರಿಂದ ಅಂಥ ಸಂದರ್ಭದಲ್ಲಿ ಸ್ನಾನ ಅಥವಾ ಶವರ್ ತೆಗೆದುಕೊಳ್ಳಬಾರದು. 

ಆಟದ ಮೈದಾನ, ಉದ್ಯಾನವನಗಳು, ಈಜುಕೊಳ ಮತ್ತು ಕಡಲ ತೀರಗಳಿಗೆ ಹೋಗುವುದನ್ನು ತಪ್ಪಿಸಬೇಕು.  ಸಿಡಿಲು ಬಿದ್ದು ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸಬೇಕು.

ಮಿಂಚು ಬರುವ ಸಮಯದಲ್ಲಿ ರಬ್ಬರ್ ಸೋಲ್ ಇರುವ ಪಾದರಕ್ಷೆಗಳು ಮತ್ತು ಕಾರಿನ ಚಕ್ರಗಳು ಸುರಕ್ಷಿತವಲ್ಲದ ಕಾರಣ ಅವುಗಳಿಂದ ದೂರವಿರಬೇಕು.

ಎಲೆಕ್ಟ್ರಿಕಲ್ ಉಪಕರಣಗಳಾದ ಕಂಪ್ಯೂಟರ್, ಲ್ಯಾಪ್‍ಟಾಪ್, ವಿಡಿಯೊ ಗೇಮ್, ಮೊಬೈಲ್ ಫೋನ್‌, ವಾಷಿಂಗ್ ಮಷಿನ್, ಸ್ಟವ್ ಹಾಗೂ ಇತರೆ ಉಪಕರಣಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು.

ಸಿಡಿಲು ಬಡಿದಾಗ ಏನು ಮಾಡಬೇಕು?

ಸಿಡಿಲು ಬಡಿದಾಗ 112 ಅಥವಾ 108 ಸಹಾಯವಾಣಿಗೆ ಕರೆ ಮಾಡಬೇಕು. ಸಿಡಿಲು ಬಿದ್ದವರಲ್ಲಿ ವಿದ್ಯುತ್‌ ಪ್ರವಾಹ ಇರುವುದಿಲ್ಲ. ಹೀಗಾಗಿ ಅವರನ್ನು ಮಟ್ಟುವುದರಿಂದ ಅಪಾಯವೇನಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ವ್ಯಕ್ತಿಯ ಉಸಿರಾಟ ಹೃದಯ ಬಡಿತ ನಾಡಿಮಿಡಿತ ಪರೀಕ್ಷಿಸಬೇಕು. ಉಸಿರಾಟವಿದ್ದರೆ ತಕ್ಷಣವೇ ಕೃತಕ ಉಸಿರಾಟ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ಎದೆಬಡಿತವು ಕಂಡು ಬರದಿದ್ದಲ್ಲಿ ಕಾರ್ಡಿಯಾಕ್‌ ಕಂಪ್ರೆಷನ್‌ ಕಾರ್ಡಿಯೋಪಲ್ಮನರಿ ರೆಸಸಟೇಷನ್‌ (ಎದೆಯನ್ನು ಒತ್ತುವ ಮೂಲಕ ಎದೆಬಡಿತ ಉಸಿರಾಟ ಪ್ರಕ್ರಿಯೆ ಆರಂಭವಾಗುವಂತೆ ಮಾಡುವುದು) ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ವ್ಯಕ್ತಿಯ ಕಣ್ಣಿನ ದೃಷ್ಟಿ ಕಿವಿಕೇಳಿಸುವಿಕೆ ಹಾಗೂ ಮೂಳೆಗಳು ಮುರಿದಿವೆಯೇ ಎಂದು ಪರೀಕ್ಷಿಸಬೇಕು. ಇದರಿಂದ ಪಾಶ್ರ್ವವಾಯು ಲಕ್ಷಾ ಹೊಡೆಯುವುದನ್ನು ಮತ್ತು ಅಧಿಕ ರಕ್ತಸ್ರಾವದಿಂದ ಉಂಟಾಗುವ ಅಪಾಯಗಳನ್ನು ತಡೆಗಟ್ಟಬಹುದು. ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯು ಅಪಾಯಕಾರಿ ಸ್ಥಳದಲ್ಲಿದ್ದರೆ ತಕ್ಷಣವೇ ಅವರನ್ನು ಸೂಕ್ತ ಸ್ಥಳಕ್ಕೆ ಸಾಗಿಸಬೇಕು. ನಂತರ ಆಸ್ಪತ್ರೆಗೆ ಕರೆದೊಯ್ಯಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT