ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾರಿ ತಪ್ಪಿಸುತ್ತಿರುವ ರಾಜಕಾರಣಿಗಳು

ರಾಜಕೀಯ ನಾಯಕರ ನಡೆಗೆ ಜನಸಂಗ್ರಾಮ ಪರಿಷತ್‌ ಆಕ್ರೋಶ
Published : 26 ಸೆಪ್ಟೆಂಬರ್ 2024, 15:42 IST
Last Updated : 26 ಸೆಪ್ಟೆಂಬರ್ 2024, 15:42 IST
ಫಾಲೋ ಮಾಡಿ
Comments

ಬಳ್ಳಾರಿ: ರಾಜಕಾರಣಿಗಳು ತಮ್ಮ ಪ್ರಚಾರಕ್ಕಾಗಿ ‘ಕರ್ನಾಟಕ ಗಣಿ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ)’ವನ್ನು ಬಳಸಿಕೊಳ್ಳಬಾರದು. ರಾಜಕಾರಣಿಗಳ ಈ ಪ್ರವೃತ್ತಿಗೆ ಕೆಎಂಇಆರ್‌ಸಿಯ ಅಧ್ಯಕ್ಷರು ಕಡಿವಾಣ ಹಾಕಬೇಕು ಎಂದು ಜನಸಂಗ್ರಾಮ ಪರಿಷತ್‌ ಆಗ್ರಹಿಸಿದೆ. 

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ‘ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನಕ್ಕಾಗಿ ಕೆಎಂಇಆರ್‌ಸಿಯಲ್ಲಿ ₹32ಸಾವಿರ ಕೋಟಿ ನಿಧಿ ಸಂಗ್ರಹವಾಗಿದೆ. ಇದರ ಮೇಲೆ ಸುಪ್ರೀಂ ಕೋರ್ಟ್‌ ನಿಗಾವಹಿಸಿದೆ. ನಿವೃತ್ತ ನ್ಯಾಯಮೂರ್ತಿಯೊಬ್ಬರು ಇದರ ಮೇಲುಸ್ತುವಾರಿ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ. ಅದರಂತೆ ನ್ಯಾ. ಸುದರ್ಶನ್‌ ರೆಡ್ಡಿ ಇದರ ಅಧ್ಯಕ್ಷರಾಗಿದ್ದಾರೆ.  ಇದರ ಮೇಲೆ ಸರ್ಕಾರ ಮಾತ್ರವಲ್ಲ ಶಾಸಕಾಂಗದ ಹಿಡಿತವಿಲ್ಲ’ ಎಂದು ಸ್ಪಷ್ಟಪಡಿಸಿದರು. 

‘ಇತ್ತೀಚೆಗೆ ಕೆಲ ರಾಜಕಾರಣಿಗಳು ಕೆಎಂಇಆರ್‌ಸಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಸುತ್ತಿರುವುದಾಗಿ ಬ್ಯಾನರ್‌ ಹಾಕಿಕೊಳ್ಳುತ್ತಿದ್ದಾರೆ. ಹಗರಿಬೊಮ್ಮನಹಳ್ಳಿಯಲ್ಲಿ ಕೆಎಂಇಆರ್‌ಸಿಯ ಅನುದಾನದಲ್ಲಿ ಚೆಕ್‌ ಡ್ಯಾಂ ಮಾಡುತ್ತಿರುವುದಾಗಿ ಶಾಸಕ ನೇಮಿರಾಜ ನಾಯಕ್‌ ಅವರು ಬ್ಯಾನರ್‌ ಹಾಕಿದ್ದರು. ಆದರೆ ಹಗರಿಬೊಮ್ಮನಹಳ್ಳಿ ಗಣಿ ಬಾದಿತ ಪ್ರದೇಶವೇ ಅಲ್ಲ. ಅಲ್ಲಿಗೆ ಹಣವೇ ನಿದಿಯಾಗಿಲ್ಲ. ಕೆಎಂಇಆರ್‌ಸಿ ಸರ್ಕಾರದ ದುಡ್ಡು ಎಂಬ ಭ್ರಮೆ ಬಿತ್ತುವ ಕೆಲಸವನ್ನು ಶಾಸಕರು ಮಾಡಿರುವುದು ಸರಿಯಲ್ಲ’ ಎಂದರು. 

‘ಸಂಡೂರು ವಿಧಾನಸಭೆಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಕೆಎಂಇಆರ್‌ಸಿಯ ₹20 ಸಾವಿರ ಕೋಟಿ ಹಣವನ್ನು ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಹೀಗೆ ಹಣ ಉಪಯೋಗ ಮಾಡಲು ಅವಕಾಶವೇ ಇಲ್ಲ. ಇಂಥ ಹೇಳಿಕೆಗಳ ಮೂಲಕ ಜನರ ದಿಕ್ಕು ತಪ್ಪಿಸಬಾರದು’ ಎಂದು ಅವರು ಒತ್ತಾಯಿಸಿದ್ದಾರೆ. 

ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್‌. ಆರ್‌ ಹಿರೇಮಠ ಮಾತನಾಡಿ, ‘ಬಳ್ಳಾರಿ ಸಂಸದ ಇ. ತುಕಾರಾಂ, ಶಾಸಕ ನೇಮಿರಾಜ ನಾಯಕ್, ಮಾಜಿ ಸಚಿವ ಶ್ರೀರಾಮುಲು ಕೆಎಂಇಆರ್‌ಸಿಗೆ ವಿಚಾರಕ್ಕೆ ಕೈ ಹಾಕಿ ಕೈ ಸುಟ್ಟುಕೊಳ್ಳಬಾರದು. ವಿಜಯನಗರ ಜಿಲ್ಲಾಧಿಕಾರಿ ಕೆಎಂಇಆರ್‌ಸಿ ಅನುದಾನದಲ್ಲಿ ಕುಡಿಯುವ ನೀರು ಯೋಜನೆ ಜಾರಿಗೆ ತರುವುದಾಗಿ ಹೇಳಿದ್ದಾರೆ. ಆದರೆ ಆ ಯೋಜನೆ ಕೈಗೂಡುವುದಿಲ್ಲ’ ಎಂದು ತಿಳಿಸಿದರು. 

‘ಕೆಎಂಇಆರ್‌ಸಿಗೆ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಹುನ್ನಾರಗಳು 2023ರಲ್ಲಿ ನಡೆದವು. ಅಂಥ ಪ್ರಯತ್ನಗಳೇ ವಿಫಲವಾದವು’ ಎಂದು ಅವರು ತಿಳಿಸಿದರು. 

ಜನಸಂಗ್ರಾಪ ಪರಿಷತ್‌ನ ಮುಖಂಡರಾದ ಶ್ರೀಶೈಲ ಆಲದಹಳ್ಳಿ, ನಾಗರಾಜ ಜಿ.ಕೆ, ಮಂಜುನಾಥ ಟಿ.ಕೆ ಮತ್ತಿತರರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT