ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ರಾಹಿಂಪುರ: ಪದವೀಧರನ ಯಶಸ್ವಿ ಹೈನೋದ್ಯಮ

ಇಬ್ರಾಹಿಂಪುರ: ಶಿಕ್ಷಣವನ್ನು ಉದ್ಯಮಕ್ಕೆ ಪೂರಕವಾಗಿ ಬಳಸಿಕೊಂಡ ರವಿಚರಣ್
Published 23 ಫೆಬ್ರುವರಿ 2024, 4:35 IST
Last Updated 23 ಫೆಬ್ರುವರಿ 2024, 4:35 IST
ಅಕ್ಷರ ಗಾತ್ರ

ಸಿರುಗುಪ್ಪ: ತಾಲ್ಲೂಕಿನ ಇಬ್ರಾಹಿಂಪುರದ ಯುವಕ ಕೆ.ರವಿಚರಣ್ ಓದಿದ್ದು ಬಿ.ಬಿ.ಎಂ. ಆದರೆ ಕೈಹಿಡಿದಿದ್ದು ಕೃಷಿ ಮತ್ತು ಹೈನುಗಾರಿಕೆ. ಓದಿದ್ದನ್ನೇ ವ್ಯವಸ್ಥಿತವಾಗಿ ಅಳವಡಿಸಿಕೊಂಡು ಹೈನೋದ್ಯಮಿಯಾಗುವ ಮೂಲಕ ಅವರು ಯುವಕರಿಗೆ ಮಾದರಿಯಾಗಿದ್ದಾರೆ.

ತಾತ ರಾಧಾಕೃಷ್ಣಮೂರ್ತಿ ಕೊಲ್ಲಿ ಅವರ ಪ್ರೇರಣೆಯಿಂದ ಒಂಬತ್ತು ವರ್ಷಗಳಿಂದ ರವಿಚರಣ್ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿ ₹1.20 ಲಕ್ಷಕ್ಕೆ ಒಂದರಂತೆ, 100 ಮುರ‍್ರಾ ತಳಿಯ ಎಮ್ಮೆ ಹಾಗೂ ಹರಿಯಾಣದಿಂದ 2 ಕೋಣ ತಂದು ಹೈನುಗಾರಿಕೆ ಪ್ರಾರಂಭಿಸಿದರು. ಹೆಣ್ಣುಕರುಗಳನ್ನು ನಾಲ್ಕು ವರ್ಷಗಳ ವರೆಗೆ ಉಳಿಸಿಕೊಂಡು ನಂತರ ಒಂದು ಮುರ‍್ರಾ ಎಮ್ಮೆಯನ್ನು ₹1.10 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ. ಪ್ರಸ್ತುತ 120 ಹಾಲು ಕರೆಯುವ ಹಾಗೂ 80ಕ್ಕೂ ಹೆಚ್ಚು ಇತರೆ ಎಮ್ಮೆ ಮತ್ತು ಕರುಗಳು ಅವರ ಕೊಟ್ಟಿಗೆಯಲ್ಲಿವೆ.

ದಿನಕ್ಕೆ ಕನಿಷ್ಠ 300 ಲೀಟರ್ ಹಾಲನ್ನು ದೊಡ್ಲ ಹಾಗೂ ಕೆ.ಎಂ.ಎಫ್ ಹಾಲಿನ ಡೈರಿಗಳಲ್ಲದೇ ಸ್ಥಳೀಯ ಗ್ರಾಹಕರಿಗೆ ಲೀಟರ್‌ಗೆ ₹60ರಂತೆ ಮಾರಾಟ ಮಾಡಿ ದಿನಕ್ಕೆ ₹12 ಸಾವಿರಕ್ಕಿಂತ ಹೆಚ್ಚು ಲಾಭ ಗಳಿಸುತ್ತಿದ್ದಾರೆ.

ಎರಡು ಎಕರೆಯ ಕೃಷಿಹೊಂಡದಲ್ಲಿ ಮೇಲ್ ಸ್ತರ, ಮಧ್ಯಸ್ತರ, ಹಾಗೂ ಕೆಳಸ್ತರದಲ್ಲಿ ವಿವಿಧ ರೀತಿಯ ಮೀನು ಸಾಕಣೆ ಮಾಡಿ ವರ್ಷಕ್ಕೊಮ್ಮೆ ಮೀನು ಮಾರುತ್ತಾರೆ. ಇದರಿಂದ ₹1 ಲಕ್ಷ ಲಾಭ ತೆಗೆಯುತ್ತಾರೆ.

ಅಲ್ಲದೆ ಕಾಲ ಕಾಲಕ್ಕೆ ಎಮ್ಮೆಗಳಿಗೆ ಪಶು ವೈದ್ಯರಿಂದ ಲಸಿಕೆ ಹಾಕಿಸಿ, ಅಗತ್ಯ ಪೋಷಕಾಂಶಗಳನ್ನು ಮೇವಿನ ಜೊತೆಗೆ ಒದಗಿಸುತ್ತಾರೆ. ಹೀಗೆ ನೂತನ ತಾಂತ್ರಿಕತೆ ಹಾಗೂ ಯಂತ್ರೋಪಕರಣ ಬಳಸಿ ಯಶಸ್ವಿ ಹೈನೋದ್ಯಮಿಯಾಗಿ ಹೊರಹೊಮ್ಮಿದ್ದಾರೆ.

ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಮಾಡಿದ ಸಾಧನೆಗಾಗಿ 2023–24ನೇ ಸಾಲಿನ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ರಾಸುಗಳ ಆರೈಕೆಯಲ್ಲಿ ತೊಡಗಿರುವ ಕೆ.ರವಿಚರಣ್
ರಾಸುಗಳ ಆರೈಕೆಯಲ್ಲಿ ತೊಡಗಿರುವ ಕೆ.ರವಿಚರಣ್
ರಾಸುಗಳಿಗೆ ಮೇವು ಹಾಕುತ್ತಿರುವ ಕೆ.ರವಿಚರಣ್
ರಾಸುಗಳಿಗೆ ಮೇವು ಹಾಕುತ್ತಿರುವ ಕೆ.ರವಿಚರಣ್
ರಾಸುಗಳ ಆರೈಕೆಯಲ್ಲಿ ತೊಡಗಿರುವ ಕೆ.ರವಿಚರಣ್
ರಾಸುಗಳ ಆರೈಕೆಯಲ್ಲಿ ತೊಡಗಿರುವ ಕೆ.ರವಿಚರಣ್

ಹಾಲು ಹಾಲಿನ ಉತ್ಪನ್ನಗಳ ಮಾರಾಟಕ್ಕಿಂತಲೂ ಕನಿಷ್ಠ 27 ಲೀಟರ್ ಹಾಲು ಕರೆಯುವ ತಳಿಯ ಸಂವರ್ಧನೆ ಮಾಡಿ ಮಾರಾಟ ಮಾಡಿ ಲಾಭ ಗಳಿಸುವುದು ಮೂಲ ಉದ್ದೇಶ

-ಕೆ. ರವಿಚರಣ್ ಹೈನೋದ್ಯಮಿ

ಹೈನೋದ್ಯಮದ ಕನಸು

ಪ್ರಧಾನಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ ಯೋಜನೆಯಿಂದ ಸಹಾಯಧನ ಪಡೆದು ಪನ್ನೀರ್ ಬೆಣ್ಣೆ ತುಪ್ಪ ಮೊಸರು ಪ್ಯಾಕಿಂಗ್ ಸಾಮಗ್ರಿ ತಂದು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಸಿರುಗುಪ್ಪ ಹಾಗೂ ಸುತ್ತಮುತ್ತಲಿನ ಹಳ್ಳಿ ಮತ್ತು ಢಾಬಾಗಳಿಗೆ ಮಾರಾಟಮಾಡಿ ದಿನಕ್ಕೆ ₹2ಸಾವಿರದಿಂದ ₹3 ಸಾವಿರ ಲಾಭ ಗಳಿಸುತ್ತಿದ್ದಾರೆ ರವಿಚರಣ್. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆದ ಅವರು ಈ ಉತ್ಪನ್ನವನ್ನು ತಮ್ಮದೇ ಆದ ಆರ್.ಕೆ. ಬ್ರಾಂಡ್ ಹಾಗೂ ಆರ್.ಕೆ. ಡೈರಿಯಿಂದ ಸಭೆ ಸಮಾರಂಭ ಹಾಗೂ ಮದುವೆ ಕಾರ್ಯಗಳಿಗೆ ಪೂರೈಸುವ ಕನಸು ಹೊಂದಿದ್ದಾರೆ. ಎಮ್ಮೆ ಕೋಳಿ ಹಾಗೂ ಮೀನು ಸಾಕಣೆಯ ಜೊತೆಗೆ 13 ಎಕರೆ ಭೂಮಿಯಲ್ಲಿ ನೇಪಿಯರ್ ಸೂಪರ್ ನೇಪಿಯರ್ ಸಿಒಎಸ್ಎಫ್–32 ಅಲ್ಲದೆ ಥಾಯ್ಲೆಂಡ್ ತಳಿಗಳಾದ ಪ್ಯಾರಾಗ್ರಾಸ್ ಎಜಲೂಷನ್ ಮುಂತಾದ ಹುಲ್ಲಿನ ತಳಿಯನ್ನು ಬೆಳೆದು ರಾಸುಗಳಿಗೆ ಬಳಸಿ ಬೇರೆ ರೈತರಿಗೂ ಮಾರಾಟ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT