ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಸ್‌ ಟಿಕೆಟ್‌ ದರ ಭಾರಿ ಏರಿಕೆ; ಮತ ಚಲಾವಣೆಗೆ ಬಂದವರು ಮರಳಿ ಹೋಗಲು ಪರದಾಟ

Published 11 ಮೇ 2024, 4:00 IST
Last Updated 11 ಮೇ 2024, 4:00 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಾರಿಗೆ ಸೇವೆ ನೀಡುತ್ತಿರುವ ಖಾಸಗಿ ಬಸ್‌, ಟ್ರಾವೆಲ್ಸ್‌ಗಳು ಮೇ 7ರ ಮತದಾನದ ಬಳಿಕ ಟಿಕೆಟ್‌ ದರವನ್ನು ಮೂರ್ನಾಲ್ಕು ಪಟ್ಟು ಏರಿಸಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆದಿತ್ತು. ಮತದಾನದಲ್ಲಿ ಪಾಲ್ಗೊಳ್ಳಲೆಂದು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಹುಟ್ಟೂರು ಬಳ್ಳಾರಿಗೆ ಆಗಮಿಸಿದ್ದಾರೆ. ಅವರೆಲ್ಲರೂ ಮತದಾನ ಮುಗಿಸಿಕೊಂಡು ತಮ್ಮ ತಮ್ಮ ಊರು, ಕಾರ್ಯ ಕ್ಷೇತ್ರಗಳಿಗೆ ತೆರಳುತ್ತಿದ್ದಾರೆ. ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಟ್ರಾವೆಲ್ಸ್‌ಗಳು ಟಿಕೆಟ್‌ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚು ಮಾಡಿವೆ.

ಬೆಂಗಳೂರಿಗೆ ತೆರಳುವ ಖಾಸಗಿ ಬಸ್‌ಗಳ ಟಿಕೆಟ್‌ ದರ ಸಾಮಾನ್ಯ ದಿನಗಳಲ್ಲಿ ‌₹450ರಿಂದ ಗರಿಷ್ಠ ₹750 ವರೆಗೆ ಇತ್ತು. ಸದ್ಯ ಮೂರು ದಿನಗಳಿಂದ ಟಿಕೆಟ್‌ ದರದಲ್ಲಿ ಭಾರಿ ಜಿಗಿತವಾಗಿದ್ದು, ಕನಿಷ್ಠ ₹900ರಿಂದ ₹2,000ರ ವರೆಗೆ ವಸೂಲಿ ಮಾಡಲಾಗುತ್ತಿದೆ.

ಈ ಬಗ್ಗೆ ಟ್ರಾವೆಲ್ಸ್‌ಗಳನ್ನು ಪ್ರಶ್ನಿಸಿದರೆ, ‘ಚುನಾವಣೆ ಕಾರಣಕ್ಕಾಗಿ ಟಿಕೆಟ್‌ ದರವನ್ನು ಏರಿಸಿದ್ದೇವೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸ್ಲೀಪರ್‌ ಸೀಟ್‌ಗಳ ಬೇಡಿಕೆ ಹೆಚ್ಚಿದೆ. ಎಲ್ಲಾ ಬಸ್‌, ಟ್ರಾವೆಲ್ಸ್‌ಗಳು ಟಿಕೆಟ್‌ ದರ ಏರಿಸಿವೆ’ ಎಂಬ ಉತ್ತರ ಲಭ್ಯವಾಗಿದೆ.

ಸಾಮಾನ್ಯ ದಿನಗಳಲ್ಲಿ ರಾತ್ರಿಯಾದರೂ, ಪೂರ್ಣ ಪ್ರಮಾಣದಲ್ಲಿ ಬುಕ್‌ ಆಗದೇ ಉಳಿಯುತ್ತಿದ್ದ ಖಾಸಗಿ ಬಸ್‌ಗಳ ಸೀಟುಗಳು ಸದ್ಯ ಮೂರ್ನಾಲ್ಕು ದಿನಗಳಿಂದ ಮಧ್ಯಾಹ್ನದ ಹೊತ್ತಿಗೇ ಬುಕ್‌ ಆಗುತ್ತಿವೆ ಎನ್ನಲಾಗಿದೆ.

ಏಕಾಏಕಿ ದರ ಏರಿಸುವಂತಿಲ್ಲ
ಖಾಸಗಿ ಟ್ರಾವೆಲ್ಸ್‌ಗಳು ಹೀಗೆ ಏಕಾಏಕಿ ಬಸ್‌ ಟಿಕೆಟ್‌ ದರವನ್ನು ಏರಿಸುವಂತಿಲ್ಲ.  ಮೂರ್ನಾಲ್ಕು ಪಟ್ಟು ಏರಿಸಿದಾಗಂತೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ದಂಡ ವಿಧಿಸಲು ಅವಕಾಶವಿರುತ್ತದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಳ್ಳಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ವಾಸಿಂ ಸಾಬ್‌ ‘ಹಾಗೇನಾದರೂ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದರೆ, ಪರಿಶೀಲನೆ ಮಾಡಿ ದಂಡ ವಿಧಿಸಲಾಗುತ್ತದೆ’ ಎಂದು ತಿಳಿಸಿದರು.

ಪ್ರಯಾಣಿಕರಿಗೆ ನೆರವಾದ ಕೆಕೆಎಸ್‌ಆರ್‌ಟಿಸಿ

ಖಾಸಗಿ ಬಸ್‌ಗಳು ಟಿಕೆಟ್‌ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದರ ಪರಿಣಾಮವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಎಸ್‌ಆರ್‌ಟಿಸಿ)  ಮೇಲೆ ಮೂರ್ನಾಲ್ಕು ದಿನಗಳಿಂದ ತೀವ್ರ ಒತ್ತಡ ಉಂಟಾಗಿದೆ. ಸಾಧಾರಣ ದಿನಗಳಿಗಿಂತಲೂ ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ನಿಲ್ದಾಣಕ್ಕೆ ಬರುತ್ತಿದ್ದಾರೆ. ಬಸ್‌ ಸಿಗದೇ ಆಗುತ್ತಿರುವ ತೊಂದರೆಗಳ ಬಗ್ಗೆ ವಿದ್ಯಾರ್ಥಿಗಳು, ನೌಕರರು ಸಂಸ್ಥೆಗೆ ದೂರುತ್ತಿದ್ದು, ಅವರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗುತ್ತಿದೆ ಎಂದು ಕೆಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. 

ಬೆಂಗಳೂರಿಗೆ ಮಂಗಳವಾರ ಹೆಚ್ಚುವರಿ ಬಸ್‌ಗಳೂ ಸೇರಿ 62 ಬಸ್‌, ಬುಧವಾರ 65, ಗುರುವಾರ 50ಕ್ಕೂ ಬಸ್‌ಗಳನ್ನು ನಿಯೋಜಿಸಲಾಗಿದೆ. ಮತದಾನದ ಹಿಂದಿನ ದಿನವೂ ಹೆಚ್ಚುವರಿ ಬಸ್‌ಗಳನ್ನು ಬೆಂಗಳೂರಿನಿಂದ ನಿಯೋಜಿಸಲಾಗಿತ್ತು. ಕೇವಲ ಬಸ್‌ಗಳನ್ನು ಮಾತ್ರವಲ್ಲದೇ, ಪ್ರಯಾಣಿಕರು ಮತ್ತು ಸಾರಿಗೆ ಸಂಸ್ಥೆ ನಡುವೆ ಸಮನ್ವಯ ಸಾಧಿಸಲು ಅಧಿಕಾರಿ ಮತ್ತು ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮತದಾನದ ಹಿಂದಿನ ಮತ್ತು ನಂತರ ದಿನಗಳಲ್ಲೂ ಪ್ರಯಾಣಿಕರ ಒತ್ತಡ ಹೆಚ್ಚಿತ್ತು. ಜನರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲಾಗಿದೆ. ಸಮನ್ವಯಕ್ಕಾಗಿ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.
–ಚಾಮರಾಜ್‌, ವಿಭಾಗೀಯ ಸಂಚಾರ ಅಧಿಕಾರಿ 
ಖಾಸಗಿ ಟ್ರಾವೆಲ್ಸ್‌ಗಳು ಟಿಕೆಟ್‌ ದರ ಏಕಾಏಕಿ ಹೆಚ್ಚಿಸಲು ಅವಕಾಶವಿಲ್ಲ. ಅಂಥ ಸಂದರ್ಭದಲ್ಲಿ ದಂಡ ವಿಧಿಸಲು ಅವಕಾಶವಿರುತ್ತದೆ. ಮೂರು ದಿನಗಳಲ್ಲಿ ಯಾವುದಾದರೂ ಪ್ರಕರಣ ದಾಖಲಾಗಿದ್ದರೆ, ಕ್ರಮ ಕೈಗೊಳ್ಳಲಾಗುವುದು.
–ವಾಸಿಂ ಬಾಬಾ, ಪ್ರಾದೇಶಿಕ ಸಾರಿಗೆ ಅಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT